

ನವದೆಹಲಿ: ‘ಧೋನಿ ವಿರುದ್ಧ ಮತ್ತೆ ಆಡುವ ಅವಕಾಶ ಸಿಗದಿರಲಿ ಎಂದು ಪ್ರಾರ್ಥಿಸುವುದು ಉತ್ತಮ. ಇಲ್ಲದಿದ್ದರೆ ಧೋನಿ ನಿನ್ನ ವೃತ್ತಿಜೀವನವನ್ನೇ ಕೊನೆಗೊಳಿಸಬಹುದು. ಯಾಕೆಂದರೆ ಧೋನಿ ಏನನ್ನೂ ಮರೆಯುವುದಿಲ್ಲ’ ಎಂದು ಭಾರತ ತಂಡದ ಮಾಜಿ ವೇಗಿ ಎಸ್. ಶ್ರೀಶಾಂತ್ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್‌ರನ್ನು ಹೆದರಿಸಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಧೋನಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲುವ ಛಲದೊಂದಿಗೆ ಆಡಿರಲಿಲ್ಲ ಎಂದು ಬೆನ್ ಸ್ಟೋಕ್ಸ್ ತಮ್ಮ ‘ಆನ್ ಫೈರ್’ ಪುಸ್ತಕದಲ್ಲಿ ಬರೆದುಕೊಂಡಿರುವುದೇ ಇದಕ್ಕೆ ಕಾರಣ!
ಇನ್‌ಸ್ಟಾಗ್ರಾಂ ಲೈವ್ ಮಾತುಕತೆಯಲ್ಲಿ ಬೆನ್ ಸ್ಟೋಕ್ಸ್‌ರ ಈ ಆರೋಪದ ಬಗ್ಗೆ ಎದುರಾದ ಪ್ರಶ್ನೆಗೆ ಕೇರಳ ವೇಗಿ ಶ್ರೀಶಾಂತ್, ‘ನಾನು ಸ್ಟೋಕ್ಸ್‌ಗೆ ಶುಭ ಹಾರೈಸುತ್ತೇನೆ. ಯಾಕೆಂದರೆ ಮುಂದೆ ಐಪಿಎಲ್ ಅಥವಾ ಭಾರತ-ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಅವರು ಎದುರಾದರೆ ಧೋನಿ ಅವರನ್ನು ಸುಮ್ಮನೆ ಬಿಡಲಾರರು. ಧೋನಿ ಅವರ ವೃತ್ತಜೀವನವನ್ನೇ ಕೊನೆಗೊಳಿಸಬಹುದು’ ಎಂದು ಹೇಳಿದ್ದಾರೆ.
ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗೆ 337 ರನ್ ಪೇರಿಸಿದ್ದರೆ, ಭಾರತ ತಂಡ 5 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಪಂದ್ಯದಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದಕ್ಕೆ ಮುನ್ನ ಪಾಕಿಸ್ತಾನದ ಮಾಜಿ ಆಲ್ರೌಂಡರ್ ಅಬ್ದುಲ್ ರಜಾಕ್ ಕೂಡ, ಭಾರತ ಆ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಬೇಕೆಂದೇ ಸೋತಿತ್ತು ಎಂದು ಆರೋಪಿಸಿದ್ದರು.