

ಮಧ್ಯಪ್ರದೇಶ: ನಗರದ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ನಾಯಿ ಸಾಕುವ ಮಾಲೀಕರು ಇನ್ನು ಮುಂದೆ ತೆರಿಗೆ ಪಾವತಿಸಬೇಕು ಎಂಬ ಹೊಸ ಕಾನೂನನ್ನು ಇದೀಗ ಸಾಗರ ಜಿಲ್ಲೆಯ ನಗರ ಪಾಲಿಕೆ 40 ಮಂದಿ ಸದಸ್ಯರು ಇತ್ತೀಚಿನ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಈ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಮುಂದಿನ ಏಪ್ರಿಲ್ ವೇಳೆಗೆ ನೂತನ ಕಾನೂನು ಜಾರಿಯಾಗಬಹುದು ಎನ್ನಲಾಗಿದೆ. ಈಗಾಗಲೇ ದೆಹಲಿ, ಪ್ರಯಾಗ್ರಾಜ್ ಮುಂತಾದ ಮಹಾನಗರಗಳಲ್ಲಿ ಸಾಕು ಪ್ರಾಣಿಗಳಿಗೆ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ.
ನಗರದಲ್ಲಿ ಬೀದಿ ನಾಯಿಗಳ ಸಮಸ್ಯೆ ಹೆಚ್ಚಾಗುತ್ತಿದೆ. ಮುಖ್ಯವಾಗಿ ಮಾಲೀಕರು ತಮ್ಮ ನಾಯಿಗಳನ್ನು ರಸ್ತೆ ಬದಿಗೆ ಕರೆತಂದು ಮಲವಿಸರ್ಜನೆ ಮಾಡಿಸುತ್ತಾರೆ. ಇದರಿಂದ ಸಾರ್ವಜನಿಕ ಸ್ಥಳ ಹೆಚ್ಚು ಕೊಳಕಾಗುತ್ತದೆ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದೇವೆ ಎಂದು ಸಾಗರ್ನ ನಗರ ಪಾಲಿಕೆ ಆಯುಕ್ತ ಚಂದ್ರಶೇಖರ ಶುಕ್ಲಾ ಹೇಳಿದ್ದಾರೆ.
ಸಾಗರದ ಎಲ್ಲಾ ನಗರ ಪಾಲಿಕೆ ವಾರ್ಡ್ಗಳು ಕಟ್ಟುನಿಟ್ಟಾಗಿ ನಾಯಿಗಳು ಎಷ್ಟಿವೆ ಎಂದು ನೋಂದಣಿ ಮಾಡಿಕೊಂಡು, ರೋಗನಿರೋಧಕ ಚುಚ್ಚುಮದ್ದು ನೀಡಬೇಕು. ನಂತರ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಈ ನಿರ್ಧಾರವನ್ನು ಕೆಲವು ನಾಯಿ ಮಾಲೀಕರು ಸರಿಯಲ್ಲ ಎಂದು ವಿರೋಧಿಸಿದ್ದಾರೆ. ನಾಯಿ ಸಾಕಲು ತೆರಿಗೆ ವಿಧಿಸುತ್ತದೆ ಎಂದಾದರೆ, ನಾಯಿಗಳ ಮಲವಿಸರ್ಜನೆ ಇತ್ಯಾದಿ ಜಾಗಗಳಿಗೆ ಪಾಲಿಕೆ ಪ್ರತ್ಯೇಕ ಸ್ಥಳ ಒದಗಿಸಬೇಕು ಎಂದು ಕೆಲವರು ಬೇಡಿಕೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)