VIDEO | ರಸ್ತೆ ಮೇಲೆ ಉಗುಳಿದ ವ್ಯಕ್ತಿಗೆ ರಸ್ತೆ ಮಧ್ಯೆಯೇ ತಕ್ಕ ಶಾಸ್ತಿ!

Swacch Bharat
Published on

ಪುಣೆ: ಜನವರಿ 16, 17 ರಂದು ಜಿ-20 ಸಮ್ಮೇಳನದ ನಡೆಯಲಿರುವ ಹಿನ್ನೆಲೆಯಲ್ಲಿ 35 ದೇಶಗಳ ಪ್ರತಿನಿಧಿಗಳು ಪುಣೆ ನಗರಕ್ಕೆ ಬಂದಿಳಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ನಗರವನ್ನು ಅಂದಗಾಣಿಸುವ ಕೆಲಸವನ್ನು ನಗರ ಸಭೆ ಮಾಡುತ್ತಿದೆ. ಇನ್ನು ಸ್ವಚ್ಛತೆಯ ವಿಚಾರದಲ್ಲಿ ಸರ್ಕಾರವನ್ನು ದೂರಿ ಪ್ರಯೋಜನವಿಲ್ಲ. ಇಲ್ಲಿ ಜನರ ಜವಾಬ್ದಾರಿಯೂ ಅತೀ ಮುಖ್ಯವಾಗಿರುತ್ತದೆ. ಸಾರ್ವಜನಿಕರ ಸಹಕಾರ ಇದ್ದಾಗ ಮಾತ್ರ ಇಡೀ ನಗರವನ್ನು ಸ್ವಚ್ಛಂದವಾಗಿರಿಸಲು ಸಾಧ್ಯವಾಗುತ್ತದೆ.

ಇದೀಗ ಪುಣೆ ಮಹಾನಗರ ಪಾಲಿಕೆ ವಿಡಿಯೋವೊಂದನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮಹಾನಗರ ಪಾಲಿಕೆಯ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

'ಸ್ವಚ್ಛ ಸರ್ವೇಕ್ಷಣಾ-2023' ಎಂಬ ಕಾರ್ಯಕ್ರಮದಡಿಯಲ್ಲಿ ಪುಣೆ ನಗರದಲ್ಲಿ ಸ್ವಚ್ಛತಾ ಕೆಲಸ ಆರಂಭವಾಗಿದೆ. ಅದರಂತೆ ನಗರದಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಕಸ ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತದೆ. ಅಂತೆಯೇ ವ್ಯಕ್ತಿಯೊಬ್ಬ ಬಂದು ರಸ್ತೆಯಲ್ಲೇ ಉಗುಳಿದ್ದಾರೆ. ಇದು ಸ್ಥಳದಲ್ಲಿದ್ದ ಪೊಲೀಸರ ಗಮನಕ್ಕೆ ಬಂದಿದೆ. ಕೂಡಲೇ ಎಚ್ಚೆತ್ತ ಅಧಿಕಾರಿ, ರಸ್ತೆಗೆ ಉಗುಳಿದ ವ್ಯಕ್ತಿಯಿಂದಲೇ ಅದನ್ನು ಶುಚಿಗೊಳಿಸಲು ಸೂಚಿಸಿದ್ದಾರೆ. ಅದರಂತೆ ಆತ ಬಟ್ಟೆಯ ಸಹಾಯದಿಂದ ರಸ್ತೆಯಲ್ಲಿ ಉಗುಳಿದ್ದನ್ನು ಸ್ವಚ್ಛಗೊಳಿಸಿದ್ದಾನೆ.

ಜಿ-20 ಸಮ್ಮೇಳನದ ಸಿದ್ಧತೆಯಾಗಿ ಪುಣೆ ಮುನ್ಸಿಪಲ್ ಕಾರ್ಪೊರೇಷನ್ (ಪಿಎಂಸಿ) ನಗರದ ರಸ್ತೆಗಳನ್ನು ಸ್ವಚ್ಛಗೊಳಿಸಿ ಸುಂದರಗೊಳಿಸುತ್ತಿದೆ. ಆದರೆ, ನಾಗರಿಕರು ಮಾತ್ರ ಗೋಡೆಯಲ್ಲಿ ಚಿತ್ರಿಸಿರುವ ಮತ್ತು ಸುಂದರ ಸ್ಥಳಗಳ ಮೇಲೆ ಉಗುಳುತ್ತಿದ್ದಾರೆ. ಈ ಸಮಸ್ಯೆ ನಿವಾರಣೆಗೆ ಎಲ್ಲ ವಾರ್ಡ್ ಕಚೇರಿಗಳ ವ್ಯಾಪ್ತಿಯಲ್ಲಿ ವಿಶೇಷ ತಂಡ ರಚಿಸಿ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net