ಎದೆ ಮೇಲೆ ಕೂತು ಯುವತಿಯ ಕತ್ತು ಸೀಳಿದ ದುಷ್ಟ: ಆಸ್ಪತ್ರೆಯಲ್ಲೇ ದುರ್ಘಟನೆ, ಸುಮ್ಮನೇ ನೋಡುತ್ತಾ ನಿಂತ ಜನರು! MP Crime

MP Crime
Published on

MP Crime : ಸಾರ್ವಜನಿಕರ ಸುರಕ್ಷತೆ ಹಾಗೂ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಪ್ರಶ್ನಿಸುವಂತಹ ಭಯಾನಕ ಘಟನೆಯೊಂದು ಮಧ್ಯಪ್ರದೇಶದಲ್ಲಿ ಹಾಡಹಗಲಲ್ಲೇ ನಡೆದಿದೆ. ಆಸ್ಪತ್ರೆಗೆ ನುಗ್ಗಿದ ಯುವಕನೊಬ್ಬ, ಜನರ ನಡುವೆಯೇ 19 ವರ್ಷದ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ವೇಳೆ ಯಾರೊಬ್ಬರು ಕೂಡ ಆತನನ್ನು ತಡೆಯಲು ಪ್ರಯತ್ನಿಸದೇ ಸುಮ್ಮನೇ ನೋಡುತ್ತಾ ನಿಂತಿದ್ದು ನಿಜಕ್ಕೂ ಕಳವಳಕಾರಿಯಾಗಿದೆ.

ಈ ಭೀಕರ ಘಟನೆ ಜೂನ್​ 27ರಂದು ಮಧ್ಯಪ್ರದೇಶದ ನರಸಿಂಗಪುರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಸಂಧ್ಯಾ ಚೌಧರಿ ಎಂದು ಗುರುತಿಸಲಾಗಿದೆ. ಈಕೆ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಅಭಿಷೇಕ್​ ಕೋಸ್ತಿ ಎಂಬಾತ ಸಾರ್ವಜನಿಕವಾಗಿಯೇ ಸಂಧ್ಯಾಳನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಇನ್ನು ಈ ಘಟನೆ ಸಂಬಂಧಿಸಿದ ಭಯಾನಕ ವಿಡಿಯೋ ಸೋಮವಾರ ಬೆಳಕಿಗೆ ಬಂದಿದೆ. ದುಷ್ಟ ಅಭಿಷೇಕ್​, ಸಂಧ್ಯಾಳ ಎದೆಯ ಮೇಲೆ ಕುಳಿತು ಆಕೆಯ ಕತ್ತು ಸೀಳುತ್ತಿದ್ದರೂ ಆಸ್ಪತ್ರೆಯ ಒಳಗಿದ್ದ ಯಾರೊಬ್ಬರು ಬಿಡಿಸುವ ಪ್ರಯತ್ನ ಮಾಡದೇ ನೋಡುತ್ತಾ ನಿಂತಿದ್ದರು. ಅಲ್ಲದೆ, ಆಸ್ಪತ್ರೆಯ ನೆಲದ ಮೇಲೆ ಸಂಧ್ಯಾ ರಕ್ತಸ್ರಾವವಾಗಿ ನೋವಿನಿಂದ ನರಳುತ್ತಾ ಸಾಯುತ್ತಿರುವಾಗ ಕೆಲವರು ಏನೂ ಆಗೇ ಇಲ್ಲ ಎಂಬಂತೆ ನಡೆದುಕೊಂಡು ಹೋಗುತ್ತಿದ್ದಿದ್ದು ನಿಜಕ್ಕೂ ನೋವಿನ ಸಂಗತಿಯಾಗಿದೆ.

ಸಾವು-ಬದುಕಿನ ನಡುವೆ ಹೋರಾಡುವ ಮಂದಿಗೆ ಪುನರ್ಜನ್ಮ ನೀಡುವ ಪವಿತ್ರ ಸ್ಥಳವು ಅಕ್ಷರಶಃ ಕೊಲೆಯ ದೃಶ್ಯವಾಗಿ ಮಾರ್ಪಟ್ಟಿತು. ಕಪ್ಪು ಶರ್ಟ್ ಧರಿಸಿದ ಅಭಿಷೇಕ್, ಸಂಧ್ಯಾಳಿಗೆ ಕಪಾಳಮೋಕ್ಷ ಮಾಡಿ, ನೆಲಕ್ಕೆ ತಳ್ಳಿ, ಆಕೆಯ ಎದೆಯ ಮೇಲೆ ಕೂತು, ನಂತರ ಚಾಕುವಿನಿಂದ ಕುತ್ತಿಗೆ ಕತ್ತರಿಸುತ್ತಿರುವುದು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳಲ್ಲಿ ಕಂಡುಬಂದಿದೆ. ಇದೆಲ್ಲವೂ ಹಗಲು ಹೊತ್ತಿನಲ್ಲಿ, ತುರ್ತು ವಿಭಾಗದ ಒಳಗೆ, ವೈದ್ಯರು ಮತ್ತು ಭದ್ರತಾ ಸಿಬ್ಬಂದಿ ಇದ್ದ ಕೆಲವೇ ಮೀಟರ್ ದೂರದಲ್ಲಿ ನಡೆದಿದೆ. ಈ ದಾಳಿ ಸುಮಾರು 10 ನಿಮಿಷಗಳ ಕಾಲ ನಡೆಯಿತು. ನಂತರ ಆರೋಪಿ ಅಭಿಷೇಕ್​, ತನ್ನ ಗಂಟಲನ್ನು ತಾನೇ ಸೀಳಿಕೊಳ್ಳಲು ಪ್ರಯತ್ನಿಸಿದ. ಆದರೆ, ಅದು ಸಾಧ್ಯವಾಗಲಿಲ್ಲ. ಬಳಿಕ ಆಸ್ಪತ್ರೆಯಿಂದ ಪರಾರಿಯಾಗಿ, ಹೊರಗೆ ನಿಲ್ಲಿಸಿದ್ದ ಬೈಕನ್ನು ಸ್ಟಾರ್ಟ್ ಮಾಡಿ, ನಾಪತ್ತೆಯಾದನು.

ಕೊಲೆ ನಡೆದ ಸಮಯದಲ್ಲಿ, ಟ್ರಾಮಾ ಸೆಂಟರ್ ಹೊರಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಒಳಗೆ, ವೈದ್ಯರು, ದಾದಿಯರು ಮತ್ತು ವಾರ್ಡ್ ಬಾಯ್ಸ್ ಸೇರಿದಂತೆ ಹಲವಾರು ಆಸ್ಪತ್ರೆ ಸಿಬ್ಬಂದಿ ಇದ್ದರು. ಯಾರೂ ದಾಳಿಕೋರನನ್ನು ತಡೆಯಲು ಸಾಧ್ಯವಾಗಲಿಲ್ಲ ಮತ್ತು ಪ್ರಯತ್ನಿಸಲೂ ಇಲ್ಲ. ಆಸ್ಪತ್ರೆಯಲ್ಲಿ ಭದ್ರತೆಯೇ ಇಲ್ಲದಿರುವುದು ರೋಗಿಗಳು ಮತ್ತು ಅವರ ಕುಟುಂಬಗಳನ್ನು ಮತ್ತಷ್ಟು ಭಯಭೀತಗೊಳಿಸಿದೆ. ಕೊಲೆಯ ಆಘಾತದಿಂದ ವಾರ್ಡ್‌ನಲ್ಲಿ ದಾಖಲಾಗಿದ್ದ 11 ರೋಗಿಗಳಲ್ಲಿ ಎಂಟು ಮಂದಿ ಅದೇ ದಿನ ಡಿಸ್ಚಾರ್ಜ್ ಆಗಿದ್ದು, ಉಳಿದವರು ಮರುದಿನ ಬೆಳಗ್ಗೆ ಆಸ್ಪತ್ರೆಯಿಂದ ಹೋಗಿದ್ದಾರೆ.

ಹೆರಿಗೆ ವಾರ್ಡ್‌ನಲ್ಲಿರುವ ಫ್ರೆಂಡ್​ ಅತ್ತಿಗೆಯನ್ನು ಭೇಟಿ ಮಾಡುತ್ತಿರುವುದಾಗಿ ತನ್ನ ಕುಟುಂಬಕ್ಕೆ ತಿಳಿಸಿ, ಆ ದಿನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಂಧ್ಯಾ ಮನೆಯಿಂದ ಹೊರಟಳು. ಇತ್ತ ಆರೋಪಿ ಅಭಿಷೇಕ್ ಕೋಸ್ತಿ, ಮಧ್ಯಾಹ್ನದಿಂದಲೂ ಆಸ್ಪತ್ರೆಯ ಸುತ್ತಲೂ ಓಡಾಡುತ್ತಿದ್ದ. ಬಹುಶಃ ಆತ ಸಂಧ್ಯಾಗಾಗಿಯೇ ಕಾಯುತ್ತಿದ್ದ ಎಂದು ವರದಿಯಾಗಿದೆ. ಇಬ್ಬರು ನಡುವಿನ ಘರ್ಷಣೆ ತಾರಕಕ್ಕೇರುವ ಮುನ್ನ ಇಬ್ಬರೂ ಆಸ್ಪತ್ರೆಯ ಕೊಠಡಿ ಸಂಖ್ಯೆ 22ರ ಹೊರಗೆ ಸ್ವಲ್ಪ ಹೊತ್ತು ಮಾತನಾಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ನೋಡು ನೋಡುತ್ತಿದ್ದಂತೆ ಅಭಿಷೇಕ್​, ಸಂಧ್ಯಾಳನ್ನು ಕೊಂದೇ ಬಿಟ್ಟ. ತೀವ್ರ ರಕ್ತಸ್ರಾವದಿಂದ ಸಂಧ್ಯಾ ಸ್ಥಳದಲ್ಲೇ ಮೃತಪಟ್ಟಳು.

ಹುಡುಗಿಯ ಕುಟುಂಬಕ್ಕೆ ಮಧ್ಯಾಹ್ನ 3.30 ರ ಸುಮಾರಿಗೆ ಮಾಹಿತಿ ನೀಡಲಾಯಿತು. ಪಾಲಕರು ಆಸ್ಪತ್ರೆಗೆ ತಲುಪುವ ಹೊತ್ತಿಗೆ, ಆಕೆಯ ದೇಹವು ಇನ್ನೂ ಅಪರಾಧ ಸ್ಥಳದಲ್ಲೇ ಇತ್ತು. ಇದರಿಂದ ಕೋಪಗೊಂಡ ಕುಟುಂಬ, ಆಸ್ಪತ್ರೆಯ ಹೊರಗೆ ರಸ್ತೆ ತಡೆ ನಡೆಸಿತು. ಪ್ರತಿಭಟನೆ ರಾತ್ರಿ 10.30 ರ ಹೊತ್ತಿಗೆ ಶಾಂತವಾಯಿತು. ಆದರೆ, ಅಧಿಕಾರಿಗಳು ಈ ತಪ್ಪಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡುವವರೆಗೂ ಬೆಳಗಿನ ಜಾವ 2 ಗಂಟೆಯವರೆಗೆ ಮತ್ತೆ ಗದ್ದಲ ನಡೆಯಿತು. ಕೊನೆಯಲ್ಲಿ ಎಲ್ಲವೂ ತಣ್ಣಗಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net