ಕುಟುಂಬದ ಸಾವು, ಸ್ನೇಹಿತರಿಲ್ಲ: ಫ್ಲ್ಯಾಟ್​ನಲ್ಲಿ 3 ವರ್ಷ ಏಕಾಂಗಿಯಾಗಿ ಬದುಕಿದ ವ್ಯಕ್ತಿ, ಮಲದಿಂದಲೇ ತುಂಬಿತ್ತು ರೂಮ್​! Man Locks Himself

Man Locks Himself
Published on

Man Locks Himself : ಒಂಟಿತನ ಎಂಬುದು ತುಂಬಾ ಭಯಾನಕ. ಅದು ವ್ಯಕ್ತಿಯನ್ನು ತೀವ್ರ ಹತಾಶೆ ಮತ್ತು ಖಿನ್ನತೆಗೆ ದೂಡುತ್ತದೆ. ಒಂಟಿ ತುಂಬಾ ಅಪಾಯಕಾರಿ. ಅದು ಆತನನ್ನು ಜೀವನದಲ್ಲಿ ಭರವಸೆ ಕಳೆದುಕೊಳ್ಳುವಂತೆ ಮಾಡುತ್ತದೆ. ಯಾಕೆ ಬದುಕಬೇಕು? ಯಾರಿಗಾಗಿ ಬದುಕಬೇಕು? ಎಂಬ ಪ್ರಶ್ನೆ ಆತನಲ್ಲಿ ಮೂಡಿ ಜೀವನದ ಮೇಲೆಯೇ ಜಿಗುಪ್ಸೆ ಮೂಡುತ್ತದೆ. ಮುಂಬೈನಲ್ಲಿ ಇತ್ತೀಚೆಗೆ ನಡೆದ ಘಟನೆ ಇದಕ್ಕೆ ತಾಜಾ ಸಾಕ್ಷಿ.

ಜುಯಿನಗರದ ಸೆಕ್ಟರ್ 24ರಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ತನ್ನ ಫ್ಲ್ಯಾಟ್‌ನಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾನೆ. ಈ ಮೂರು ವರ್ಷಗಳಲ್ಲಿ, ಆತ ಒಮ್ಮೆಯೂ ಹೊರಗೆ ಬಂದಿಲ್ಲ. ಅಲ್ಲದೆ, ಆತ ಯಾರೊಂದಿಗೂ ಮಾತನಾಡಿಲ್ಲ. ಒಳಗಿನಿಂದ ಲಾಕ್ ಮಾಡಿಕೊಂಡು ಒಬ್ಬಂಟಿಯಾಗಿ ಜೀವಿಸಿದ್ದಾನೆ. ಊಟಕ್ಕಾಗಿ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುತ್ತಿದ್ದ. ಕಳೆದ ಮೂರು ವರ್ಷಗಳನ್ನು ಆತ ಇದೇ ರೀತಿ ಕಳೆದಿದ್ದಾನೆ. ಇದರ ಪರಿಣಾಮವಾಗಿ, ಆತನ ಇಡೀ ಕೋಣೆ ಮಾನವ ಮಲದಿಂದ ತುಂಬಿತ್ತು. ಅಲ್ಲದೆ, ಆ ಕೋಣೆಯಿಂದ ಭಯಾನಕ ವಾಸನೆ ಬರುತ್ತಿತ್ತು.

ಅಂದಹಾಗೆ, ಆ ವ್ಯಕ್ತಿಯ ಹೆಸರು ಅನೂಪ್ ಕುಮಾರ್ ನಾಯರ್. ವಯಸ್ಸು 55. ನವಿ ಮುಂಬೈನ ಜುಯಿನಗರದಲ್ಲಿ ವಾಸಿಸುತ್ತಿದ್ದಾರೆ. ಒಂಟಿತನ, ಹತಾಶೆ ಮತ್ತು ಅಪನಂಬಿಕೆ ಅನೂಪ್ ಕುಮಾರ್ ನಾಯರ್ ಅವರನ್ನು ತೀವ್ರವಾಗಿ ಬಾಧಿಸಿವೆ. ಹೀಗಾಗಿ ಕಳೆದ ಮೂರು ವರ್ಷಗಳಿಂದ ತಮ್ಮ ಫ್ಲ್ಯಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಆನ್​ಲೈನ್​ನಲ್ಲಿ ಆರ್ಡರ್​ ಮಾಡಿದ ಆಹಾರ ಬಂದಾಗ ಮಾತ್ರ ಬಾಗಿಲು ತೆರೆಯುತ್ತಿದ್ದರು. ಆರ್ಡರ್ ತೆಗೆದುಕೊಂಡ ಕೂಡಲೇ ಬಾಗಿಲು ಮುಚ್ಚುತ್ತಿದ್ದರು.

ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ​​ಫಾರ್ ಲವ್ (ಸೀಲ್) ಎಂಬ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ವ್ಯಕ್ತಿಯೊಬ್ಬ ತನ್ನ ಫ್ಲಾಟ್‌ನಲ್ಲಿ ಮೂರು ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿದ್ದಾನೆಂಬ ಮಾಹಿತಿ ತಿಳಿದುಕೊಂಡ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ನಾಯರ್ ಅವರನ್ನು ನೋಡಿದಾಗ ಅವರು ಭಯಾನಕ ಸ್ಥಿತಿಯಲ್ಲಿದ್ದರು. ಕೂದಲು ಮತ್ತು ಗಡ್ಡ ಅತಿಯಾಗಿ ಬೆಳೆದಿತ್ತು. ಅಲ್ಲದೆ, ಆತನ ಕೋಣೆ ಮಲದಿಂದ ತುಂಬಿ ಕೆಟ್ಟ ವಾಸನೆ ಬರುತ್ತಿತ್ತು. ಅದನ್ನು ನೋಡಿ ಸೀಲ್​ ಸಂಘನೆಯ ಕಾರ್ಯಕರ್ತರಿಗೆ ಒಂದು ಕ್ಷಣ ಶಾಕ್​ ಆಯಿತು. ಈ ವೇಳೆ ನಾಯರ್​ ಜತೆ ಮಾತನಾಡಿ, ಅವರಿಗೆ ಆರಾಮದಾಯಕ ಭಾವನೆ ಮೂಡಿಸಿದ ಕಾರ್ಯಕರ್ತರು ಅವರನ್ನು ಹೊರ ಜಗತ್ತಿಗೆ ಕರೆತಂದಿದ್ದಾರೆ. ಅಲ್ಲದೆ, ತಮ್ಮ ಆಶ್ರಮಕ್ಕೆ ಕರೆದೊಯ್ದಿದ್ದಾರೆ. ಈ ವೇಳೆ ನಾಯರ್​ ಅವರು ಪಾದದ ಸೋಂಕಿನಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ನೀಡಲಾಗಿದೆ. ನಾಯರ್​, ತಮ್ಮ ಕುಟುಂಬವನ್ನು ಕಳೆದುಕೊಂಡ ನಂತರ ತೀವ್ರ ಜಿಗುಪ್ಸೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಸೀಲ್​ ಸಂಘಟನೆ ಕಾರ್ಯಕರ್ತರು ನಾಯರ್ ಅವರನ್ನು ಹೊರಗೆ ಕರೆದೊಯ್ದು ಕ್ಷೌರ ಮಾಡಿಸಿ, ಸ್ನಾನ ಮಾಡಿಸಿದ್ದಾರೆ. ಇದೀಗ, ನಾಯರ್​ ಸಹಜ ಸ್ಥಿತಿಗೆ ಮರಳಿದ್ದಾರೆ.

ಅಂದಹಾಗೆ, ನಾಯರ್​, ಈ ಹಿಂದೆ ಕಂಪ್ಯೂಟರ್ ಪ್ರೋಗ್ರಾಮರ್ ಆಗಿ ಕೆಲಸ ಮಾಡುತ್ತಿದ್ದರು. ನಾಯರ್ ಅವರ ತಾಯಿ ಪೂನಮ್ಮ ನಾಯರ್ ಭಾರತೀಯ ವಾಯುಪಡೆಯಲ್ಲಿ (ದೂರಸಂಪರ್ಕ ಶಾಖೆ) ಕೆಲಸ ಮಾಡುತ್ತಿದ್ದರು. ಅವರ ತಂದೆ ಕುಟ್ಟಿ ಕೃಷ್ಣನ್ ನಾಯರ್ ಮುಂಬೈನ ಟಾಟಾ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಾಲಕರು ಆರು ವರ್ಷಗಳ ಅವಧಿಯಲ್ಲಿ ನಿಧನರಾದರು. ಅನೂಪ್ ಅವರ ಸಹೋದರ 20 ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡರು. ಅಲ್ಲದೆ, ಅನೂಪ್​ ಅವರಿಗೆ ಸ್ನೇಹಿತರು ಯಾರೂ ಇರಲಿಲ್ಲ. ಇದು ಅನೂಪ್ ಅವರನ್ನು ಒಂಟಿತನಕ್ಕೆ ದೂಡಿತು. ತೀವ್ರ ಖಿನ್ನತೆಯಲ್ಲಿಯೇ ಇದ್ದರು. ಇದರಿಂದಾಗಿ ತಮ್ಮ ಫ್ಲ್ಯಾಟ್‌ನಿಂದ ಹೊರಬರಲು ನಿರಾಕರಿಸಿದರು. ಕಳೆದ ಮೂರು ವರ್ಷಗಳಿಂದ ಅನೂಪ್​ ಅವರು ಒಬ್ಬಂಟಿಯಾಗಿ ಕಳೆದಿದ್ದಾರೆ.

ನಾಯರ್ ತಮ್ಮ ಕೋಣೆಯಲ್ಲಿ ಕುರ್ಚಿಯ ಮೇಲೆ ಮಾತ್ರ ಮಲಗಿದ್ದನ್ನು ನೋಡಿ ನಮಗೆ ಆಘಾತವಾಯಿತು. ಅವರ ಕಾಲಿನಲ್ಲಿ ಸೋಂಕು ಇರುವುದು ಕಂಡುಬಂದಿದೆ. ನಾವು ತಕ್ಷಣ ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಿದ್ದೇವೆ. ಅವರ ಪಾಲಕರು ನಿಧನರಾದ ನಂತರ, ಕೆಲವು ಸಂಬಂಧಿಕರು ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ನಾಯರ್ ಯಾರನ್ನೂ ನಂಬಲಿಲ್ಲ. ಅವರು ಒಬ್ಬಂಟಿಯಾಗಿದ್ದರು. ನಾವು ಈಗ ಅವರನ್ನು ಪನ್ವೇಲ್‌ನಲ್ಲಿರುವ ನಮ್ಮ ಆಶ್ರಮಕ್ಕೆ ಸ್ಥಳಾಂತರಿಸಿದ್ದೇವೆ ಎಂದು ಸೀಲ್ ಕಾರ್ಯಕರ್ತರು ಹೇಳಿದರು.

ನಾಯರ್ ತನ್ನ ಫ್ಲಾಟ್‌ನ ಬಾಗಿಲು ವಿರಳವಾಗಿ ತೆರೆಯುತ್ತಿದ್ದರು. ಅವರು ಎಂದಿಗೂ ಹೊರಗೆ ಬರುತ್ತಿರಲಿಲ್ಲ. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅವರು ತಮ್ಮ ಕಸವನ್ನು ಸಹ ತೆಗೆಯುತ್ತಿರಲಿಲ್ಲ. ಕೆಲವೊಮ್ಮೆ, ಸೊಸೈಟಿ ಸದಸ್ಯರು ಅವರ ಕಸವನ್ನು ತೆಗೆಯುತ್ತಿದ್ದರು. ನಾವು ಅವರ ಪೋಷಕರ ಸ್ಥಿರ ಠೇವಣಿಯನ್ನು ಅವರ ಖಾತೆಗೆ ವರ್ಗಾಯಿಸಲು ಸಹ ಸಹಾಯ ಮಾಡಿದ್ದೇವೆ ಎಂದು ನಾಯರ್ ಅವರ ನೆರೆಹೊರೆಯವರು ಹೇಳಿದರು. ನನಗೆ ಸ್ನೇಹಿತರಿಲ್ಲ. ನನ್ನ ಪೋಷಕರು ಮತ್ತು ಸಹೋದರ ಈಗಾಗಲೇ ನಿಧನರಾಗಿದ್ದಾರೆ. ನನ್ನ ಅನಾರೋಗ್ಯದ ಕಾರಣ, ನನಗೆ ಹೊಸ ಕೆಲಸ ಸಿಗುತ್ತಿಲ್ಲ ಎಂದು ನಾಯರ್ ಹೇಳಿದರು.

ಒಬ್ಬ ವ್ಯಕ್ತಿ ತಮ್ಮ ಹತ್ತಿರದ ವ್ಯಕ್ತಿಯನ್ನು ಕಳೆದುಕೊಂಡಾಗ, ಒಂಟಿತನ ಕಾಡುತ್ತದೆ. ಮಾನಸಿಕ ಯಾತನೆ ಅನುಭವಿಸುವುದು ಸಹಜ. ಖಿನ್ನತೆ ಹೆಚ್ಚಾದಂತೆ, ಹೊರಗಿನ ಪ್ರಪಂಚದಿಂದ ದೂರ ಸರಿಯಲು ಪ್ರಾರಂಭಿಸುತ್ತಾನೆ ಎಂದು ಮುಂಬೈ ಮನೋವೈದ್ಯೆ ಪ್ರಿಯಾಂಕಾ ಅವರು ಹೇಳಿದರು.

ಈ ಜನದಟ್ಟಣೆಯ ನಗರಗಳಲ್ಲಿ, ನಾಯರ್‌ನಂತಹ ಅನೇಕ ಜನರು ಯಾವುದೇ ಸಹಾಯವಿಲ್ಲದೆ ಏಕಾಂಗಿಯಾಗಿ ವಾಸಿಸುತ್ತಿದ್ದಾರೆ. ಅವರು ತೀವ್ರ ಹತಾಶೆ ಮತ್ತು ಖಿನ್ನತೆಯಲ್ಲಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಅದೃಷ್ಟವಶಾತ್, ನಾಯರ್ ಅವರನ್ನು ರಕ್ಷಿಸಲಾಯಿತು. ಆದರೆ ಬೀಗ ಹಾಕಿದ ಫ್ಲ್ಯಾಟ್‌ಗಳಲ್ಲಿ ಸಾಯುತ್ತಿರುವ ಲೆಕ್ಕವಿಲ್ಲದಷ್ಟು ಜನರಿದ್ದಾರೆ. ಅವರ ಶವಗಳು ದಿನಗಳ ನಂತರ ಪತ್ತೆಯಾಗಿವೆ ಎಂದು ಸಾಮಾಜಿಕ ಸಂಘಟನೆ ಸೀಲ್‌ನ ಮುಖ್ಯಸ್ಥ ಅಬ್ರಹಾಂ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net