

Weight loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.
ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.
ಕೆಲವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸೆಲೆಬ್ರಿಟಿಗಳು ತೂಕ ಇಳಿಕೆ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿ ನೀಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ಅದೇ ವರ್ಗಕ್ಕೆ ಸೇರಿದ್ದಾಳೆ. ಆಕೆಯ ತೂಕ ಇಳಿಸುವ ಪ್ರಯಾಣವನ್ನು ನೋಡಿದರೆ, ಖಂಡಿತವಾಗಿಯೂ ನೀವು ಮೂಕವಿಸ್ಮಿತರಾಗುತ್ತೀರಿ. ಅದು ಹೇಗೆ ಅಷ್ಟೊಂದು ತೂಕ ಇಳಿಸಿಕೊಂಡರು ಎಂದು ನೀವು ಆಶ್ಚರ್ಯ ಪಡುತ್ತೀರಿ. ಕೆಲವೇ ತಿಂಗಳಲ್ಲಿ ಬರೋಬ್ಬರಿ 40 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಇಷ್ಟೊಂದು ತೂಕವನ್ನು ಇಳಿಸಿಕೊಂಡಿದ್ದು ಹೇಗೆ ಎಂಬುದನ್ನು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಯುವತಿ ಹಂಚಿಕೊಂಡಿದ್ದಾಳೆ.
ಯುವತಿ ಹೆಸರು ರಕ್ಷಾ. ಈಕೆ ಪೌಷ್ಟಿಕಾಂಶ ತಜ್ಞೆ ಮತ್ತು ತೂಕ ಇಳಿಸುವ ತರಬೇತುದಾರೆ. ಸದ್ಯ ರಕ್ಷಾ ಅವರು ಹಂಚಿಕೊಂಡಿರುವ ಇನ್ಸ್ಟಾಗ್ರಾಂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ರಕ್ಷಾ ಅವರು 100 ಕೆಜಿಗಿಂತ ಹೆಚ್ಚು ತೂಕವಿದ್ದರು. ಅತಿಯಾದ ಬೊಜ್ಜು, ಕೂದಲು ಉದುರುವಿಕೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ರಕ್ಷಾ ತೊಂದರೆಗೆ ಒಳಗಾಗಿದ್ದರು.
ರಕ್ಷಾ ಅವರ ತೂಕ ಹೆಚ್ಚಾಗಲು ಒಂದು ಪ್ರಮುಖ ಕಾರಣವೆಂದರೆ ಜಂಕ್ ಫುಡ್ ವ್ಯಸನ. ರಕ್ಷಾ ಬಹುತೇಕ ಪ್ರತಿದಿನ ಚಿಪ್ಸ್ ಮತ್ತು ಚಾಕೊಲೇಟ್ ತಿನ್ನುತ್ತಿದ್ದರು. ತಾನು 116 ಕೆಜಿ ತಲುಪಿದಾಗ, ಹೀಗೆ ಮುಂದುವರಿಯಲು ಸಾಧ್ಯವಿಲ್ಲ ಎಂಬ ದೃಢ ನಿಶ್ಚಯಕ್ಕೆ ಬಂದರು. ನಂತರ ತಮ್ಮ ಜೀವನದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಂಡರು. ಈ ಮೂಲಕ ಕೇವಲ 13 ತಿಂಗಳಲ್ಲಿ, ರಕ್ಷಾ 46 ಕೆಜಿ ತೂಕ ಇಳಿಸಿಕೊಂಡು ಈಗ 70 ಕೆಜಿಗೆ ತಲುಪಿದ್ದಾರೆ.
ಈ ಯುವತಿಯ ದೇಹ ಪರಿವರ್ತನೆಯ ರೀಲ್ಸ್ ಈಗಾಗಲೇ ಒಂಬತ್ತು ದಶಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ರಕ್ಷಾ ಅವರು ತೂಕ ಇಳಿಸಿಕೊಳ್ಳಲು ಯಾವುದೇ ಶಾರ್ಟ್ಕಟ್ಗಳನ್ನು ಹುಡುಕಲಿಲ್ಲ. ಬದಲಾಗಿ, ಪೌಷ್ಟಿಕಾಂಶದ ಬಗ್ಗೆ ಕಲಿಯುವ ಮೂಲಕ, ಅನಾರೋಗ್ಯಕರ ಆಹಾರ ಪದ್ಧತಿಯನ್ನು ತ್ಯಜಿಸುವ ಮೂಲಕ ಮತ್ತು ಮನೆಯಲ್ಲಿ ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ತೂಕ ಇಳಿಸಿಕೊಂಡರು.
ತನ್ನ ತೂಕ ಹೆಚ್ಚಾಗಲು ಕಾರಣ ಶಾಲಾ ದಿನಗಳಲ್ಲಿ ಮಾಡಿದ ಮೂರು ಪ್ರಮುಖ ತಪ್ಪುಗಳು ಎಂದು ರಕ್ಷಾ ಹೇಳುತ್ತಾರೆ. ಅಲ್ಲದೆ, ಈ ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ ಎಂದಿದ್ದಾರೆ. ಆ ತಪ್ಪುಗಳು ಯಾವುವು ಎಂಬುದನ್ನು ಸಹ ಬಹಿರಂಗಪಡಿಸಿದ್ದಾರೆ.
ರಕ್ಷಾ ಶಾಲೆಯಲ್ಲಿದ್ದಾಗ ಮಧ್ಯಾಹ್ನದ ಊಟಕ್ಕೆ ನಿಯಮಿತವಾಗಿ 2 ರಿಂದ 3 ಪರೋಟ್ಗಳು ಮತ್ತು ಚಿಪ್ಸ್ ತಿನ್ನುತ್ತಿದ್ದರಂತೆ. ಹೆಚ್ಚಿನ ಕಾರ್ಬೋಹೈಡ್ರೇಟ್ ಹಾಗೂ ಹೆಚ್ಚಿನ ಕೊಬ್ಬಿನ ಆಹಾರವು ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಯಿತು. ಇದನ್ನು ಬಿಟ್ಟು ಫೈಬರ್ಗಾಗಿ ಹಣ್ಣುಗಳನ್ನು, ಪ್ರೋಟೀನ್ಗಾಗಿ ಮೊಟ್ಟೆಗಳು ಅಥವಾ ಪನೀರ್ ಮತ್ತು ಗೋಧಿ ರೊಟ್ಟಿಗಳನ್ನು ತನ್ನ ಆಹಾರದಲ್ಲಿ ಸೇರಿಸಿಕೊಂಡೆ ಎಂದು ಹೇಳಿದ್ದಾರೆ.
ಎರಡನೆಯ ತಪ್ಪು ಎಂದರೆ ಅಧ್ಯಯನ ಮಾಡುವಾಗ ಹೆಚ್ಚು ಚಿಪ್ಸ್ ಮತ್ತು ಬಿಸ್ಕತ್ತುಗಳನ್ನು ತಿನ್ನುವುದು. ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುವ ತಿಂಡಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ತೂಕ ಹೆಚ್ಚಾಗಬಹುದು. ಬದಲಾಗಿ, ನೀವು ಮಖಾನಾ ಮತ್ತು ತಾಜಾ ಹಣ್ಣುಗಳಂತಹ ಆರೋಗ್ಯಕರ ವಸ್ತುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಮಾನಸಿಕ ಒತ್ತಡವು ತೂಕ ಹೆಚ್ಚಾಗಲು ಕಾರಣವಾಗಬಹುದು.
ಶಾಲೆಯಿಂದ ಮನೆಗೆ ಬಂದಾಗ, ಟಿವಿ ನೋಡುವುದು, ಫೋನ್ ಬಳಸುವುದು ಮತ್ತು ಮನೆಕೆಲಸ ಮಾಡುವುದರಲ್ಲಿ ತನ್ನ ಸಮಯವನ್ನು ಕಳೆಯುತ್ತಿದ್ದೆ ಎಂದು ರಕ್ಷಾ ನೆನಪಿಸಿಕೊಳ್ಳುತ್ತಾರೆ. ಆದರೆ ಯಾವುದೇ ವ್ಯಾಯಾಮ ಇರಲಿಲ್ಲ. ಇದು ಬೊಜ್ಜುತನಕ್ಕೂ ಕಾರಣವಾಯಿತು ಎಂದು ರಕ್ಷಾ ಹೇಳಿದ್ದಾರೆ. (ಏಜೆನ್ಸೀಸ್)