ನಾಲ್ಕು ವರ್ಷದ ಕಂದಮ್ಮನಿಗೆ ಕ್ರೂರ ಶಿಕ್ಷೆ ಕೊಟ್ಟು ಕೊಂದ ಅಮ್ಮ! ಹಿರಿ ಮಗಳಿಂದ ಬಯಲಾಯಿತು ಭಯಾನಕ ಸತ್ಯ

daughter
Published on

ವಾಷಿಂಗ್ಟನ್: ಅಮ್ಮ ಎಂದರೆ ನಿಷ್ಕಲ್ಮಶ ಪ್ರೀತಿ ಎನ್ನುತ್ತಾರೆ. ಆದರೆ ಅದೇ ಅಮ್ಮ ಯಮನ ರೂಪ ತಾಳಿಬಿಟ್ಟರೆ? ಹೌದು.. ಇನ್ನೂ ಆಟವಾಡುವ ವಯಸ್ಸಿನಲ್ಲದ್ದ ಪುಟ್ಟ ಕಂದಮ್ಮನಿಗೆ ತಾಯಿಯೇ ಕ್ರೂರ ಶಿಕ್ಷೆ ನೀಡಿ ಕೊಲೆ ಮಾಡಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಘಟನೆ ನಡೆದ ಒಂದು ವರ್ಷದ ನಂತರ ಹಿರಿ ಮಗಳು ಹೇಳಿದ ಸತ್ಯದಿಂದಾಗಿ ತಾಯಿ ಜೈಲು ಸೇರುವಂತಾಗಿದೆ.

2020ರ ಆಗಸ್ಟ್ ಸಮಯ. ನಾಲ್ಕು ವರ್ಷದವಳಾಗಿದ್ದ ಮಜೇಲಿಕ್ ಹೆಸರಿನ ಮಗು ಆಟವಾಡಿಕೊಂಡಿತ್ತು. ಆದರೆ ಆ ಮಗು ಒಂದೇ ಒಂದು ಸಣ್ಣ ತಪ್ಪು ಮಾಡಿತೆಂಬ ಸಿಟ್ಟಿಗೆ ಆಕೆಯ ತಾಯಿ ಕಠೋರ ರೂಪ ತಾಳಿದ್ದಾಳೆ. ಮನೆಗ ಲಾಡ್ರಿ ಬಳಿ ಮಜೇಲಿಕ್​ಳನ್ನು ನಿಂತೇ ಇರುವಂತೆ ಶಿಕ್ಷೆ ನೀಡಿದ್ದಾಳೆ. ಬರೋಬ್ಬರಿ ಮೂರು ದಿನಗಳ ಕಾಲ ಆ ಬಾಲಕಿಗೆ ಕೂರಲೂ ಬಿಡದೆ ನಿಂತೇ ಇರುವಂತೆ ನೋಡಿಕೊಂಡಿದ್ದಾಳೆ. ಊಟ ತಿಂಡಿ ಇಲ್ಲದೆ ಮೂರು ದಿನ ನಿಂತಿದ್ದ ಬಾಲಕಿ ಅಲ್ಲೇ ಉಸಿರು ಚೆಲ್ಲಿದ್ದಾಳೆ.

ಮಜೇಲಿಕ್ ಕಾಣೆಯಾಗಿದ್ದಾಗಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ಆದರೆ ಆಕೆ ಸಿಕ್ಕಿಲ್ಲ. ಅದಾದ ಮೇಲೆ ಈ ವರ್ಷ ಮೇ ತಿಂಗಳಲ್ಲಿ ಆಕೆಯ ಅಕ್ಕ ಪಕ್ಕದ ಮನೆಯವರ್ಯಾರೋ ಪೊಲೀಸರಿಗೆ ಮಜೇಲಿಕ್​ ಕೊಲೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಾದ ನಂತರ ಮನೆಗೆ ಬಂದ ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ ಮೃತಳ ಅಕ್ಕ ಬಾಯಿ ಬಿಟ್ಟಿದ್ದಾಳೆ.

ತಂಗಿಯನ್ನು ದಿನಗಟ್ಟಲೆ ನಿಲ್ಲಿಸಿ ಸಾಯುವಂತೆ ಅಮ್ಮ ಮಾಡಿದಳು. ಅದಾದ ಮೇಲೆ ಅವಳ ಹೆಣವನ್ನು ತೊಳೆದು, ಅದನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ಹಾಕಿ ಕಾರಿನಲ್ಲಿಟ್ಟಿದ್ದಳು. ಆ ಹೆಣ ಐದು ದಿನಗಳ ಕಾಲ ಕಾರಿನಲ್ಲೇ ಇತ್ತು. ಅದಾದ ಮೇಲೆ ಅದನ್ನು ಮನೆಯ ಹಿಂದೆಯೇ ಹೂತು ಹಾಕಿದ್ದಾಳೆ ಎಂದು 13 ವರ್ಷದ ಬಾಲಕಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಇದೀಗ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net