ರೇಪ್​ ಮಾಡಿ ಜೈಲು ಸೇರಿದ್ದವ ಜಾಮೀನಿನ ಮೇಲೆ ಹೊರಬಂದು ಅತ್ಯಾಚಾರ ಸಂತ್ರಸ್ತೆಯನ್ನೇ ಕೊಂದ!

rape
Published on

ಜೈಪುರ: ಮಹಿಳೆಯೊಬ್ಬಳನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಆರೋಪಿ, ಜಾಮೀನು ಪಡೆದು ಜೈಲಿನಿಂದ ಹೊರಬಂದು ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ರಾಜಸ್ಥಾದನ ಸಿರೋಹಿ ಜಿಲ್ಲೆಯಲ್ಲಿ ನಡೆದಿದೆ.

ಆ ಮಹಿಳೆ ಅಂಗವಾಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಮದುವೆಯಾಗಿ ಎರಡು ಮಕ್ಕಳಿದ್ದ ಆಕೆ 2017ರಲ್ಲಿಯೇ ಗಂಡನಿಂದ ದೂರಾಗಿದ್ದಳು. ಒಂಟಿಯಾಗಿ ಬದುಕುತ್ತಿದ್ದ ಆಕೆಯ ಮೇಲೆ ಅದೇ ಊರಿನ ಕಾಮುಕನೊಬ್ಬನ ಕಣ್ಣು ಬಿದ್ದಿದೆ. ಆಕೆಯನ್ನು 2017ರಲ್ಲಿಯೇ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದ. ಆಗ ತಪ್ಪಿಸಿಕೊಂಡಿದ್ದ ಮಹಿಳೆ ಪೊಲೀಸ್​ ದೂರು ದಾಖಲಿಸಿದ್ದಳು. ಅದಾದ ಮೇಲೆ ಸುಮ್ಮನಾಗಿದ್ದ ಆತ 2020ರಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿ ತನ್ನ ಹಠ ಸಾಧಿಸಿದ್ದ. ಈ ವಿಚಾರದಲ್ಲಿ ಮತ್ತೊಮ್ಮೆ ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.

ಆದರೆ ಆ ಆರೋಪಿಗೆ ಇತ್ತೀಚೆಗೆ ಜಾಮೀನು ಸಿಕ್ಕಿದ್ದು, ಹೊರಬಂದ ಆತ ಮಹಿಳೆಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದಾನೆ. ಭಾನುವಾರ ರಾತ್ರಿ ಮಾರುವೇಷದಲ್ಲಿ ಸಂತ್ರಸ್ತೆಯ ಮನೆಗೆ ನುಗ್ಗಿದ ಆತ ಮಲಗಿದ್ದ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲೇ ಆಕೆಯ ಸಹೋದರಿಯೂ ಇದ್ದು, ಇಬ್ಬರನ್ನೂ ಚಾಕುವಿನಿಂದ ಇರಿದಿದ್ದಾನೆ. ಮಹಿಳೆಯರು ಕೂಗಾಡುವುದನ್ನು ಕೇಳಿ ಓಡಿಬಂದ ಗ್ರಾಮಸ್ಥರು ತಕ್ಷಣ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯಾಗಿದ್ದ ಮಹಿಳೆಗೆ ಹೆಚ್ಚಿನ ಗಾಯವಾಗಿದ್ದರಿಂದಾಗಿ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಆಕೆಯ ಸಹೋದರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಮೃತ ಮಹಿಳೆ ಕರೊನಾದ ಕಾಲದಲ್ಲಿ ಫ್ರಂಟ್​ ಲೈನ್​ ವಾರಿಯರ್​ ಆಗಿ ಕೆಲಸ ಮಾಡಿದ್ದಳು. ಅವಳಿಗಾದ ಅನ್ಯಾಯಕ್ಕೆ ನ್ಯಾಯ ಕೊಡಿಸಬೇಕು ಎಂದು ಊರವರು ಒತ್ತಾಯಿಸಿದ್ದಾರೆ. ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net