

ಕೊಚ್ಚಿ: ತಾಯಿಯಾಗುವುದು ಮಹಿಳೆಯ ಬಹಳ ದೊಡ್ಡ ಕನಸಾಗಿರುತ್ತದೆ. ಪ್ರತಿಯೊಂದು ಹೆಣ್ಣು ಮಗು ಹುಟ್ಟಿದಾಗಿನಿಂದ ಜೀವನದ ಕ್ಷಣಗಳನ್ನೂ ಕನಸು ಕಾಣುವುದರಲ್ಲಿ ಕಳೆಯುತ್ತಾಳೆ. ಆದರೆ, ಇಲ್ಲೊಬ್ಬ ಮಹಿಳೆ ತಾನು ಹೆತ್ತ ಮಗುವನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಘಟನೆ ಸಂಬಂಧ ಪೊಲೀಸರು 23 ವರ್ಷದ ಮಹಿಳೆಯನ್ನು ವಶಕ್ಕೆ ಪಡೆದಿದ್ದು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಮಹಿಳೆ ತಾನು ಗರ್ಭಿಣಿಯಾಗಿರುವ ವಿಚಾರವನ್ನು ಮನೆಯಲ್ಲಿ ತಿಳಿಸಿಲ್ಲ. ಶುಕ್ರವಾರ ಬೆಳಿಗ್ಗೆ ತನ್ನ ಬಾತ್ ರೂಂನಲ್ಲೇ ಮಗುವಿಗೆ ಜನ್ಮ ನೀಡಿದ್ದು, ತನಗೆ ಮಗು ಹುಟ್ಟಿದಾಗ ನಡುಗುತ್ತಿದ್ದ ಆಕೆ ಏನು ಮಾಡುವುದೆಂದು ಗೊತ್ತಾಗದೆ ಕೃತ್ಯ ಎಸಗಿದ್ದಾಳೆ.
ಮಗುವಿಗೆ ಜನ್ಮ ನೀಡಿದ ವೇಳೆ ಮಹಿಳೆಯ ತಾಯಿ ಆಕೆಯ ರೂಮಿನ ಬಾಗಿಲು ತಟ್ಟಿದ್ದಾಳೆ. ಅಮ್ಮನಿಗೆ ತಾನು ಮಗು ಹೆತ್ತಿರುವ ವಿಷಯ ಗೊತ್ತಾಗುತ್ತದೆ ಎಂಬ ಭಯದಲ್ಲಿ ಆ ಮಹಿಳೆ ನವಜಾತ ಶಿಶುವನ್ನು ಕೊರಿಯರ್ ಕವರ್‌ನಲ್ಲಿ ತುಂಬಿ, ಆ ಮಗುವಿನ ಬಾಯಿಗೆ ಬಟ್ಟೆ ತುರುಕಿದ್ದಾಳೆ. ಅಲ್ಲದೇ, ಆ ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿ ಮೃತದೇಹವನ್ನು ರಸ್ತೆಗೆ ಎಸೆದಿದ್ದಾಳೆ.
ಬಾಕ್ಸ್ ಒಂದನ್ನು ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಎಸೆಯುತ್ತಿರುವುನ್ನು ಗಮನಿಸಿದ ಸ್ಥಳೀಯರು ಕೂಡಲೇ ಅದನ್ನು ತೆರೆದು ಪರಿಶೀಲಿಸಿದಾಗ ನವಜಾತ ಶಿಶು ಇರುವುದು ಕಂಡು ಬಂದಿದೆ. ಕೂಡಲೇ ಮಾಹಿತಿಯನ್ನು ಪೊಲೀಸರಿಗೆ ಸ್ಥಳೀಯರು ತಿಳಿಸಿದ್ದು, ವಿಚಾರಣೆ ನಡೆಸಿದಾಗ ಆ ಮಹಿಳೆ ತಾನೇ ತನ್ನ ಮಗುವನ್ನು ರಸ್ತೆಗೆ ಎಸೆದಿರುವುದನ್ನು ಒಪ್ಪಿಕೊಂಡಿದ್ದಾಳೆ. ಆಕೆಯ ಪೋಷಕರು ತಮ್ಮ ಮಗಳು ಏನು ಮಾಡಿದ್ದಾಳೆ, ಆಕೆಗೆ ಯಾವಾಗ ಡೆಲಿವರಿ ಆಯಿತು ಎಂಬುದರ ಬಗ್ಗೆ ಸುಳಿವು ಕೂಡ ತಮಗೆ ಇಲ್ಲ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತ್ರಿಶ್ರೂರ್ ಮೂಲದ ಯುವಕನಿಗಾಗು ಹುಡುಕಾಟ ನಡೆಸಲಾಗುತ್ತಿದ್ದು, ಆಕೆ ಅತ್ಯಾಚಾರ ಸಂತ್ರಸ್ತೆಯೇ ಎಂಬ ವಿಚಾರ ತನಿಖೆಯ ಬಳಿಕ ಬೆಳಕಿಗೆ ಬರಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಮತ್ತಷ್ಟು ಮಾಹಿತಿ ನೀಡಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.