ಪೂಜೆ ನೆಪದಲ್ಲಿ UPSC ಆಕಾಂಕ್ಷಿಗೆ ಲೈಂಗಿಕ ದೌರ್ಜನ್ಯ; ಚಿನ್ನಾಭರಣ ಸಮೇತ ಆರೋಪಿ ಪರಾರಿ

Harassment
Published on

ಭೋಪಾಲ್​: ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್​ ಆಗಬೇಕೆಂದರೆ ವಿಶೇಷ ಪೂಜೆ ಮಾಡಿಸಬೇಕು ಎಂದು ಹೇಳಿ ವ್ಯಕ್ತಿಯೋರ್ವ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಭಿಷೇಕ್​ ಜಾಟ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈತನ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಪ್ಲಾನಿ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು, 2020ರಲ್ಲಿ ಸಂತ್ರಸ್ತೆ ಹಾಗೂ ಆರೋಪಿ ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿದ್ದು, ಇಬ್ಬರು ಪ್ರತಿನಿತ್ಯ ಚಾಟಿಂಗ್​ ಮಾಡುತ್ತಿದ್ದರು. ದಿನ ಕಳೆದಂತೆ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದ್ದು, ಆಕೆ ಯುಪಿಎಸ್​ಸಿ ಆಕಾಂಕ್ಷಿ ಎಂಬ ವಿಚಾರವನ್ನು ತಿಳಿದುಕೊಂಡ ಆರೋಪಿ ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದಾನೆ.

ತನಗೆ ಗುರೂಜಿ ಒಬ್ಬರ ಪರಿಚಯವಿದ್ದು, ಅವರ ಬಳಿ ನೀನು ಪೂಜೆ ಮಾಡಿಸಿದರೆ ಯುಪಿಎಸ್​ಸಿ ಪರೀಕ್ಷೆ ಪಾಸ್​ ಆಗುತ್ತೀಯಾ ಎಂದು ನಂಬಿಸಿ ಆಕೆ ಬಳಿ ಇದ್ದ ಚಿನ್ನಾಭರಣಗಳನ್ನು ಪಡೆದು ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ ಆರೋಪಿ ಚಿನ್ನಾಭರಣಗಳ ಸಮೇತ ಪರಾರಿಯಾಗಿದ್ದಾನೆ. ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗಿರುವ ಬಗ್ಗೆ ಕುಟುಂಬಸ್ಥರು ವಿಚಾರಿಸಿದಾಗ ಸಂತ್ರಸ್ತೆ ಘಟನೆ ಬಗ್ಗೆ ತಿಳಿಸಿದ್ದು, ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.

ಆರೋಪಿ ವಿರುದ್ಧ ಭಾರತ ದಂಡ ಸಂಹಿತೆ (IPC Section) 376, 420, 34ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತಲೆಮಾರಿಸಿಕೊಂಡಿರುವ ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ ಎಂದು ಪಿಪ್ಲಾನಿ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net