ದೇಹದ ಬಣ್ಣ, ಹಲ್ಲಿನದ್ದೇ ಚಿಂತೆ! ನನ್ನಮ್ಮ ತಬ್ಬಿಕೊಂಡು ಹೇಳಿದ ಮಾತೇ ಮಿಥುನ್​ಗೆ ಸ್ಫೂರ್ತಿ ನೀಡಿತ್ತೆಂದ ಶಬಾನಾ ಅಜ್ಮಿ | Mithun Chakraborty

Mithun Chakraborty
Published on

ಮುಂಬೈ: ಬಾಲಿವುಡ್​ ಹಿರಿಯ ನಟ ಮಿಥುನ್​ ಚಕ್ರವರ್ತಿ ( Mithun Chakraborty ) ಅವರು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ( Dadasaheb Phalke Award ) ಗೆ ಭಾಜನರಾಗಿದ್ದು, ಅ.8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನವಾಗಲಿದೆ. ಇದರ ಬೆನ್ನಲ್ಲೇ ಮಿಥುನ್​ ಚಕ್ರವರ್ತಿ ಅವರ ಬಗ್ಗೆ ಅನೇಕ ಆಸಕ್ತಿಕರ ಸಂಗತಿಗಳು ವರದಿಯಾಗುತ್ತಿವೆ.

ಭಾರತೀಯ ಸಿನಿಮಾ ರಂಗದ ಲೆಜೆಂಡರಿ ನಟಿಯರಲ್ಲಿ ಶಬಾನಾ ಅಜ್ಮಿ ಕೂಡ ಒಬ್ಬರು. ತಮ್ಮ ಅತ್ಯುತ್ತಮ ನಟನೆಗಾಗಿ ಐದು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಭಿನಯ ಶಾರದೆ ಎನಿಸಿಕೊಂಡಿರುವ ಶಬಾನಾ ಅಜ್ಮಿ ಪುಣೆಯ ಪ್ರತಿಷ್ಠಿತ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (FTII) ಯ ಹಳೆಯ ವಿದ್ಯಾರ್ಥಿ ಎಂಬುದು ಗಮನಾರ್ಹ. ಎಫ್‌ಟಿಐಐನಲ್ಲಿ ಶಬಾನಾ ಅಜ್ಮಿ ಅವರು ಮಿಥುನ್ ಚಕ್ರವರ್ತಿಯ ಸೀನಿಯರ್​ ಆಗಿದ್ದರು. ಬಳಿಕ ಇಬ್ಬರು ಬಾಲಿವುಡ್​ನಲ್ಲಿ ಮಿಂಚಿದರು. ಅಂದಿನಿಂದ ಇಬ್ಬರ ನಡುವೆ ನಿಕಟ ಬಾಂಧವ್ಯವಿದೆ. ಇತ್ತೀಚೆಗೆ, ಮಿಥುನ್​ ಚಕ್ರವರ್ತಿ ಬಗ್ಗೆ ಅನೇಕ ಆಸಕ್ತಿಕರ ಸಂಗತಿಗಳನ್ನು ಶಬಾನಾ ಅಜ್ಮಿ ಹಂಚಿಕೊಂಡಿದ್ದಾರೆ. ಚಕ್ರವರ್ತಿ ಅವರಿಗೆ ಆರಂಭದ ದಿನಗಳಲ್ಲಿ ತಮ್ಮ ಚರ್ಮದ ಬಣ್ಣದ ಬಗ್ಗೆ ಅಭದ್ರತೆಯ ಭಾವನೆ ಕಾಡಿತ್ತಂತೆ. ಈ ವೇಳೆ ಅವರಿಗೆ ಸ್ಫೂರ್ತಿ ತುಂಬಿದ್ದು ಬೇರೆ ಯಾರೂ ಅಲ್ಲ ಶಬಾನಾ ಅಜ್ಮಿ ಅವರ ತಾಯಿ, ಲೆಜೆಂಡರಿ ರಂಗಭೂಮಿ ಕಲಾವಿದೆ ಮತ್ತು ಚಲನಚಿತ್ರ ನಟಿ ಶೌಕತ್ ಕೈಫಿ ಅವರು.

ಮಿಥುನ್ ಚಕ್ರವರ್ತಿ ಅವರು ಎಫ್‌ಟಿಐಐನಲ್ಲಿ ನನ್ನ ಜೂನಿಯರ್ ಆಗಿದ್ದರು. ಈ ಸಂದರ್ಭದಲ್ಲಿ ಅವರು ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ತನ್ನ ಮೈಬಣ್ಣ ಆಕರ್ಷಕವಾಗಿಲ್ಲ ಮತ್ತು ಹಲ್ಲುಗಳು ವಿಲಕ್ಷಣವಾಗಿದೆ ಅಂತ ತನ್ನಲ್ಲೇ ಅಭದ್ರತೆಯ ಭಾವನೆ ಬೆಳೆಸಿಕೊಂಡಿದ್ದರು. ಅಲ್ಲದೆ, ಅದರ ಬಗ್ಗೆ ಸದಾ ಚಿಂತಿಸುತ್ತಿದ್ದರು. ಈ ವೇಳೆ ನನ್ನ ತಾಯಿ ಅವರನ್ನು ಬಿಗಿಯಾಗಿ ತಬ್ಬಿಕೊಂಡು, ಇಂತಹ ವಿಷಯಗಳ ಬಗ್ಗೆ ಚಿಂತಿಸಬೇಡ, ನೀನು ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಿದ್ದೀಯಾ ಎಂದು ಪ್ರೋತ್ಸಾಹಿಸಿ, ಬೆನ್ನುತಟ್ಟಿ ಹುರಿದುಂಬಿಸಿದರು ಎಂದು ಅರ್ಬಾಜ್ ಖಾನ್ ಅವರ ಸೆಲೆಬ್ರಿಟಿ ಟಾಕ್ ಶೋ ದಿ ಇನ್ವಿನ್ಸಿಬಲ್ಸ್ ಸರಣಿಯ ಚಾಟ್‌ನಲ್ಲಿ ಶಬಾನಾ ಅಜ್ಮಿ ಹೇಳಿದ್ದರು.

ಚಕ್ರವರ್ತಿ ಅವರು ಕೂಡ ಈ ಹಿಂದೆ ತಮ್ಮ ಚರ್ಮದ ಬಣ್ಣ ಮತ್ತು ಅಭದ್ರತೆಯ ಬಗ್ಗೆ ಮಾತನಾಡಿದ್ದರು. ನನ್ನ ಮೈಬಣ್ಣವು ಕಪ್ಪಾಗಿದ್ದರಿಂದ ನನ್ನ ಮೇಲೆ ನನಗೆ ಅಭದ್ರತೆ ಅಥವಾ ಕೀಳರಿಮೆ ಕಾಡುತ್ತಿತ್ತು. ನನ್ನ ಚರ್ಮದ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ನಾನು ಚಲನಚಿತ್ರಗಳಲ್ಲಿ ವಿಲನ್ ಆಗಿ ನಟಿಸಬಹುದು ಎಂದು ಭಾವಿಸಿದೆ. ನಾನು ಫಿಲ್ಮ್ ಇನ್‌ಸ್ಟಿಟ್ಯೂಟ್‌ಗೆ ಹೋಗಿ ಉತ್ತಮ ತರಬೇತಿಯೊಂದಿಗೆ ಹಿಂತಿರುಗಿದೆ ಎಂದು ಸಿನಿಮಾ ಪತ್ರಕರ್ತ ಕೋಮಲ್ ನಹತಾ ಅವರೊಂದಿಗೆ ಈ ಹಿಂದಿನ ಸಂದರ್ಶನದಲ್ಲಿ ಹೇಳಿದ್ದರು.

ನನ್ನ ಮೈಬಣ್ಣದ ಬಗ್ಗೆ ನನಗೆ ಬೇಸರವಿತ್ತು. ಆದರೆ, ನಾನು ಚೆನ್ನಾಗಿ ಡ್ಯಾನ್ಸ್ ಮಾಡಬಹುದು, ಫೈಟ್ ಸೀಕ್ವೆನ್ಸ್‌ಗಳನ್ನು ಚೆನ್ನಾಗಿ ಮಾಡಬಹುದು ಎಂದು ಭಾವಿಸಿದೆ. ನನ್ನ ಮೈಬಣ್ಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವಂತಹ ಏನನ್ನಾದರೂ ಮಾಡಲು ನಾನು ಬಯಸಿದ್ದೆ. ಹೀಗಾಗಿ ನಾನು ಅದನ್ನು ನಿಖರವಾಗಿ ಮಾಡಿದೆ. ನಾನು ನನ್ನದೇ ಆದ ನೃತ್ಯ ಶೈಲಿಯನ್ನು ರಚಿಸಿದೆ ಮತ್ತು ಅದರ ಮೂಲಕ ಜನರ ಮನಸ್ಸನ್ನು ಗೆದ್ದೆ ಎಂದು ಚಕ್ರವರ್ತಿಯವರು ಹೇಳಿದ್ದರು.

ಅಂದಹಾಗೆ ಚಕ್ರವರ್ತಿ ಅವರು ಖ್ಯಾತ ಚಲನಚಿತ್ರ ನಿರ್ದೇಶಕರಾದ ಮೃಣಾಲ್ ಸೇನ್ ಅವರ ಮೃಗಯಾ (1976) ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು ಮತ್ತು ಮೊದಲ ಸಿನಿಮಾದಲ್ಲಿನ ಅವರ ಅಭಿನಯಕ್ಕೆ ಅತ್ಯುತ್ತಮ ನಟನೆಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ಗೆದ್ದುಕೊಂಡರು. ಅಜ್ಮಿ ಮತ್ತು ಚಕ್ರವರ್ತಿ, ಹಮ್ ಪಾಂಚ್ (1980), ಸಮೀರಾ (1981), ಅಶಾಂತಿ (1982), ನಸಿಹತ್ (1986), ಮತ್ತು ಜೂಥಿ ಶಾನ್ (1991) ನಂತಹ ಚಲನಚಿತ್ರಗಳಲ್ಲಿ ಒಟ್ಟಾಗಿ ನಟಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net