ಪಾಕಿಸ್ತಾನದಲ್ಲಿ ಒಂದೂವರೆ ಲಕ್ಷ ಸರ್ಕಾರಿ ಉದ್ಯೋಗಗಳು ರದ್ದು! ಅಚ್ಚರಿಯ ಕಾರಣ ಹೀಗಿದೆ… Pakistan

Pakistan
Published on

ಇಸ್ಲಮಾಬಾದ್​: ನೆರೆಯ ರಾಷ್ಟ್ರ ಪಾಕಿಸ್ತಾನ ( Pakistan ) ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಎಷ್ಟರಮಟ್ಟಿಗೆ ಅಂದರೆ, ಮತ್ತೊಂದು ಹೊಸ ಸಾಲ ಸಿಗದಿದ್ದರೆ ಸರಕಾರ ನಡೆಸಲಾಗದ ಸ್ಥಿತಿಯನ್ನು ತಲುಪಿದೆ. ಹೀಗಾಗಿ ದೇಶದ ಆರ್ಥಿಕ ವೆಚ್ಚವನ್ನು ತಗ್ಗಿಸಲು ಸುಮಾರು ಒಂದೂವರೆ ಲಕ್ಷ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸಲು ನಿರ್ಧಾರ ಮಾಡಿದೆ. ಅಲ್ಲದೆ, ಆರು ಸಚಿವಾಲಯಗಳನ್ನು ಸಹ ರದ್ದುಗೊಳಿಸಿ, ಇನ್ನೆರಡು ಸಚಿವಾಲಯಗಳ ವಿಲೀನ ಮಾಡುವ ನಿರ್ಧಾರವನ್ನು ಸಹ ಪಾಕ್​ ಸರ್ಕಾರ ಘೋಷಣೆ ಮಾಡಿದೆ.

ಕೆಲವು ಖರ್ಚುಗಳನ್ನು ಕಡಿತಗೊಳಿಸಲು, ತೆರಿಗೆ-ಜಿಡಿಪಿ ಅನುಪಾತವನ್ನು ಹೆಚ್ಚಿಸಲು, ಕೃಷಿ ಮತ್ತು ರಿಯಲ್ ಎಸ್ಟೇಟ್‌ನಂತಹ ಸಾಂಪ್ರದಾಯಿಕವಲ್ಲದ ವಲಯಗಳಿಗೆ ತೆರಿಗೆ ವಿಧಿಸಲು, ಸಬ್ಸಿಡಿಗಳನ್ನು ಮಿತಿಗೊಳಿಸಲು ಮತ್ತು ಕೆಲವು ಹಣಕಾಸಿನ ಜವಾಬ್ದಾರಿಗಳನ್ನು ಆಯಾ ಪ್ರಾಂತ್ಯಗಳಿಗೆ ವರ್ಗಾಯಿಸಲು ಪಾಕ್​ ಸರ್ಕಾರ ಬದ್ಧವಾಗಿರುವುದಾಗಿ ಘೋಷಣೆ ಮಾಡಿದ ಬಳಿಕ ಆರ್ಥಿಕ ನೆರವು ನೀಡಲು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ( IMF ) ಸೆ.26ರಂದು ಒಪ್ಪಿಗೆ ಸೂಚಿಸಿದೆ. ಅಲ್ಲದೆ, ಮೊದಲ ಕಂತಿನಲ್ಲಿ 1 ಬಿಲಿಯನ್​ ಡಾಲರ್​ ಹಣವನ್ನು IMF ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಸಾಲ ಪಡೆದ ನಂತರ, ಪಾಕಿಸ್ತಾನವು ದೇಶದಲ್ಲಿ ಆರ್ಥಿಕ ಸುಧಾರಣೆಯತ್ತ ಕ್ರಮಗಳನ್ನು ಕೈಗೊಂಡಿದೆ. ದೇಶದ ಸ್ಥಿತಿಯನ್ನು ಮತ್ತೆ ಹಳಿಗೆ ತರಲು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಾಧ್ಯಮಗಳಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪಾಕಿಸ್ತಾನ ಐಎಂಎಫ್​ನಿಂದ ಏಳು ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಡೆಯಲಿದೆ.

ಅಮೆರಿಕದಿಂದ ವಾಪಸಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್, ಐಎಂಎಫ್‌ನೊಂದಿಗೆ ಸಾಲ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಮತ್ತು ಇದಕ್ಕಾಗಿ ನಾವು ಕೆಲವು ಕಾರ್ಯವಿಧಾನಗಳನ್ನು ಜಾರಿಗೆ ತರಬೇಕಾಗಿದೆ. ಅಲ್ಲದೆ, ಜಿ20 ಸೇರಬೇಕಾದರೆ ದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರಬೇಕಿದೆ. ಆರು ಸಚಿವಾಲಯಗಳನ್ನು ರದ್ದುಪಡಿಸುವ ಸರ್ಕಾರದ ನಿರ್ಧಾರವನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಮತ್ತು ಎರಡು ಸಚಿವಾಲಯಗಳನ್ನು ವಿಲೀನಗೊಳಿಸಲಾಗುವುದು. ಇದಿಷ್ಟೇ ಅಲ್ಲದೆ, ವಿವಿಧ ಸಚಿವಾಲಯಗಳಲ್ಲಿನ 1,50,000 ಹುದ್ದೆಗಳನ್ನು ರದ್ದುಪಡಿಸಲಾಗುವುದು ಎಂದು ಘೋಷಿಸಿದರು.

ನಾವು ತೆರಿಗೆ ಆದಾಯವನ್ನು ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದೇವೆ. ಕಳೆದ ವರ್ಷ ಸರಿಸುಮಾರು 3,00,000 ಹೊಸ ತೆರಿಗೆದಾರರು ಇದ್ದರು ಮತ್ತು ಈ ವರ್ಷ 7,32,000 ಹೊಸ ತೆರಿಗೆದಾರರು ನೋಂದಾಯಿಸಿಕೊಂಡಿದ್ದಾರೆ. ದೇಶದಲ್ಲಿ ಒಟ್ಟು ತೆರಿಗೆದಾರರ ಸಂಖ್ಯೆ 1.6 ಮಿಲಿಯನ್‌ನಿಂದ 3.2 ಮಿಲಿಯನ್‌ಗೆ ಹೆಚ್ಚಿದ್ದಾರೆ. ತೆರಿಗೆ ಪಾವತಿಸದವರಿಗೆ ಇನ್ನು ಮುಂದೆ ಆಸ್ತಿ ಅಥವಾ ವಾಹನಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ ಎಂದು ಔರಂಗಜೇಬ್ ಹೇಳಿದರು.

ಸದ್ಯ ದೇಶದ ಆರ್ಥಿಕತೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಮತ್ತು ದೇಶದ ವಿದೇಶಿ ವಿನಿಮಯ ಸಂಗ್ರಹವು ಅತ್ಯಧಿಕ ಮಟ್ಟವನ್ನು ತಲುಪಿದೆ. ರಾಷ್ಟ್ರೀಯ ರಫ್ತು ಮತ್ತು ಐಟಿ ರಫ್ತು ಎರಡರಲ್ಲೂ ಗಮನಾರ್ಹ ಬೆಳವಣಿಗೆಯನ್ನು ಕಂಡಿದ್ದೇವೆ. ಆರ್ಥಿಕತೆಯ ಬಲದ ಬಗ್ಗೆ ಹೂಡಿಕೆದಾರರ ವಿಶ್ವಾಸವೇ ನಮ್ಮ ಪ್ರಮುಖ ಯಶಸ್ಸು ಎಂದು ಸಚಿವ ಔರಂಗಜೇಬ್ ತಿಳಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net