ಪ್ರೀತಿಯಿಂದ ಸಾಕಿದ್ದ 125 ಮೊಸಳೆಗಳನ್ನು ಕೊಂದುಹಾಕಿದ ರೈತ! ಕಾರಣ ಕೇಳಿದ್ರೆ ಮನಕಲಕುತ್ತೆ! Crocodiles

Crocodiles
Published on

ಬ್ಯಾಂಕಾಕ್: ದೂರದ​ ಥಾಯ್ಲೆಂಡ್ ದೇಶದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ರೈತನೊಬ್ಬ ತಾನು ಪ್ರೀತಿಯಿಂದ ಸಾಕಿ ಸಲುಹಿದ್ದ ಮೊಸಳೆ ( Crocodiles ) ಗಳನ್ನು ತನ್ನ ಕೈಯಾರೆ ಸಾಯಿಸಿದ್ದಾನೆ. ಅಲ್ಲಿನ ಸರ್ಕಾರದ ಆದೇಶಕ್ಕೆ ತಲೆಬಾಗಿ, ತನ್ನ ಇಚ್ಛೆಗೆ ವಿರುದ್ಧವಾಗಿ ಈ ಕೆಲಸವನ್ನು ಮಾಡಿದ್ದಾನೆ. ಇದಕ್ಕೆಲ್ಲ ಕಾರಣ ಥಾಯ್ಲೆಂಡ್​ನಲ್ಲಿ ಸುರಿದ ಭಾರಿ ಮಳೆ.

ಹೌದು, ಥಾಯ್ಲೆಂಡ್​ನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲ ಪ್ರದೇಶಗಳು ಮುಳುಗಡೆಯಾಗಿದ್ದು, ಲಂಫೂನ್‌ನಲ್ಲಿನಲ್ಲಿರುವ ಮೊಸಳೆಗಳಿರುವ ಆವರಣಗಳೂ ಹಾಳಾಗಿವೆ. ಇಲ್ಲಿನ ತಡೆಗೋಡೆ ಕುಸಿದರೆ ಮೊಸಳೆಗಳು ಹೊರಬಂದು ಜನರ ಮೇಲೆ ದಾಳಿ ಮಾಡುವ ಮತ್ತು ಇತರ ಪ್ರಾಣಿಗಳನ್ನು ಕೊಲ್ಲುವ ಅಪಾಯವಿತ್ತು. ಇದನ್ನು ಅರಿತ ಅಲ್ಲಿನ ಸರ್ಕಾರ ಮೊಸಳೆಗಳನ್ನು ಕೊಲ್ಲಲು ಆದೇಶಿಸಿತು. ಬೇರೆ ದಾರಿ ಇಲ್ಲದೆ, ಅನಿವಾರ್ಯ ಕಾರಣದಿಂದ ತಾನು ಸಾಕಿದ್ದ ಮೊಸಳೆಗಳನ್ನು ರೈತ ಕೊಂದುಹಾಕಿದ್ದಾನೆ. ಈ ಕುರಿತು ಕಳೆದ ಶುಕ್ರವಾರ ಸಿಎನ್‌ಎನ್ ಸುದ್ದಿ ಸಂಸ್ಥೆ ಸುದ್ದಿ ಪ್ರಕಟಿಸಿದೆ.

Crocodiles

ಲಂಫೂನ್‌ನಲ್ಲಿನ ಮೊಸಳೆ ಸಾಕಣೆಯ ಮಾಲೀಕ ನತ್ತಪಾಕ್ ಖುಮ್ಕಾಡ್ ಮಾತನಾಡಿ, ಭಾರಿ ಮಳೆಯಿಂದಾಗಿ ಮೊಸಳೆಗಳಿರುವ ಆವರಣ ತೀವ್ರವಾಗಿ ಹಾನಿಯಾಗಿದೆ. ಬೇಲಿ ಮುರಿದರೆ ಜನರಿಗೆ ಎಷ್ಟರಮಟ್ಟಿಗೆ ಹಾನಿಯಾಗುತ್ತದೆ ಎಂಬುದನ್ನು ಯಾರಿಂದಲೂ ಊಹಿಸಲು ಸಾಧ್ಯವಾಗಲಿಲ್ಲ. ಸರ್ಕಾರದ ಆದೇಶದಂತೆ ಮೊಸಳೆಗಳನ್ನು ಕೊಲ್ಲಬೇಕಾಯಿತು ಎಂದು ನೋವಿನಿಂದ ಹೇಳಿದರು. ಇನ್ನು ಭಾರಿ ಮಳೆಯಿಂದ ಉಂಟಾದ ಪ್ರವಾಹದಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರು ಈವರೆಗೆ ಮೃತಪಟ್ಟಿದ್ದಾರೆ.

ಈ ಬಗ್ಗೆ ನತ್ತಪಾಕ್ ಖುಮ್ಕಾಡ್ ತನ್ನ ಫೇಸ್‌ಬುಕ್‌ನಲ್ಲಿ ಪೋಸ್ಟ್ ಕೂಡ ಹಾಕಿದ್ದಾರೆ. ಅದರಲ್ಲಿ ಮೊಸಳೆಗಳ ಕೊಳದ ಬಳಿ ಇರುವ ತಡೆಗೋಡೆಗಳು ಎಷ್ಟರಮಟ್ಟಿಗೆ ಹಾನಿಗೆ ಒಳಗಾಗಿವೆ ಎಂಬುದು ಗೋಚರವಾಗುತ್ತದೆ. ಇನ್ನೇನು ಒಡೆದು ಹೋಗುವ ಹಂತದಲ್ಲಿದೆ ಎಂದು ನತ್ತಪಾಕ್ ಖುಮ್ಕಾಡ್ ಹೇಳಿದ್ದಾರೆ. ಸತತ ಮಳೆಯಾಗುತ್ತಿರುವುದರಿಂದ ಮೊಸಳೆಗಳ ಕೊಳವನ್ನು ದುರಸ್ತಿ ಮಾಡುವುದು ತುಂಬಾ ಅಪಾಯಕಾರಿ, ಹಾಗಾಗಿ ಮೊಸಳೆಗಳನ್ನು ಕೊಲ್ಲದೆ ನನಗೆ ಬೇರೆ ದಾರಿಯಿಲ್ಲ, ಇದು ತುಂಬಾ ಕಷ್ಟಕರವಾದ ನಿರ್ಧಾರವಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ಇದು ಸರಿಯಾದ ಮಾರ್ಗವಾಗಿದೆ. ನಿಮ್ಮ ಪ್ರೋತ್ಸಾಹ ಮತ್ತು ತಿಳುವಳಿಕೆಗಾಗಿ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Crocodiles

ಮೊಸಳೆ ( Crocodiles ) ಸಾಕಾಣೆ ಉದ್ಯಮ

ಸಾಯಿಸಿದ ಮೊಸಳೆಗಳನ್ನು ಹಿಟಾಚಿ ನೆರವಿನಿಂದ ಬೇರೆಡೆ ಸಾಗಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೊಲ್ಲಲ್ಪಟ್ಟ ಸಯಾಮಿ ಮೊಸಳೆಗಳು ತೀವ್ರವಾಗಿ ಅಳಿವಿನಂಚಿನಲ್ಲಿವೆ ಆದರೆ, ಈ ಮೊಸಳೆಗಳನ್ನು ಥಾಯ್ಲೆಂಡ್‌ನಲ್ಲಿ ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ ಮತ್ತು ಬೆಳೆಸಲಾಗುತ್ತದೆ. ಮೊಸಳೆ ಸಾಕಣೆಯು ಅಲ್ಲಿ ಲಾಭದಾಯಕ ಉದ್ಯಮವಾಗಿದೆ. ಸುಮಾರು 1,100 ನೋಂದಾಯಿತ ವಾಣಿಜ್ಯ ಫಾರ್ಮ್‌ಗಳು ವಾರ್ಷಿಕವಾಗಿ 6 ​ ರಿಂದ ಮತ್ತು 7 ಬಿಲಿಯನ್ ಥಾಯ್ ಬಹ್ತ್ (215 ಮಿಲಿಯನ್ ಡಾಲರ್) ಆದಾಯವನ್ನು ಉತ್ಪಾದಿಸುತ್ತವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net