

ತಿರುವನಂತಪುರಂ: ಆಫರ್ ನೋಡಿದ ಕೂಡಲೇ ಆನ್ಲೈನ್ನಲ್ಲಿ ಆರ್ಡರ್ ( Online Order ) ಮಾಡುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ಈ ಸುದ್ದಿಯನ್ನು ನೀವು ಪೂರ್ತಿಯಾಗಿ ಓದಲೇಬೇಕು. ಪ್ರಮುಖ ಆನ್ಲೈನ್ ಇ-ಕಾಮರ್ಸ್ ವೆಬ್ಸೈಟ್ಗಳ ಸೋಗಿನಲ್ಲಿ ನಕಲಿ ಶಾಪಿಂಗ್ ಸೈಟ್ಗಳನ್ನು ಸ್ಥಾಪಿಸಿ ಹಣ ಸುಲಿಗೆ ಮಾಡುವ ಗ್ಯಾಂಗ್ ವಿರುದ್ಧ ಕೇರಳದ ಸೈಬರ್ ಪೊಲೀಸರು ಸಮರ ಸಾರಿದ್ದಾರೆ. ಹಣ ಕಳೆದುಕೊಂಡವರ ದೂರಿನ ಮೇರೆಗೆ ಕೇರಳದ ಸೈಬರ್ ಪೊಲೀಸರು ನಡೆಸಿದ ತನಿಖೆಯಲ್ಲಿ ಪ್ರಾಥಮಿಕವಾಗಿ 155 ನಕಲಿ ವೆಬ್ಸೈಟ್ಗಳು ಪತ್ತೆಯಾಗಿದ್ದು, ಅವುಗಳನ್ನು ತೆಗೆದುಹಾಕುವ ಪ್ರಕ್ರಿಯೆಯನ್ನು ಪೊಲೀಸರು ಪ್ರಾರಂಭಿಸಿದ್ದಾರೆ.
ಪ್ರಮುಖ ಆನ್ಲೈನ್ ಇ-ಕಾಮರ್ಸ್ ಕಂಪನಿಗಳು ತಮ್ಮ ಸೈಟ್ಗಳ ಮೂಲಕ ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ಭಾರಿ ರಿಯಾಯಿತಿಯಲ್ಲಿ ಮಾರಾಟ ಮಾಡುತ್ತಿವೆ. ಇದನ್ನೇ ಬಂಡವಾಳ ಮಾಡಿಕೊಂಡು ಅನೇಕ ನಕಲಿ ಸೈಟ್ಗಳು ಕಾರ್ಯಾಚರಣೆ ಮಾಡುತ್ತಿದ್ದು, ಜನರನ್ನು ವಂಚಿಸುತ್ತಿವೆ. ಸಾಕಷ್ಟು ಹಣ ವಂಚನೆ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ನಕಲಿ ವೆಬ್ಸೈಟ್ ಪತ್ತೆಹಚ್ಚುವ ಕ್ರಮ ಕೈಗೊಂಡಿದ್ದಾರೆ.
ಮೇಲ್ನೋಟಕ್ಕೆ ಕಂಪನಿಗಳ ನೈಜ ವೆಬ್ಸೈಟ್ಗಳಂತೆ ಕಾಣುವ ನಕಲಿ ವೆಬ್ಸೈಟ್ಗಳು ಸಾಮಾಜಿಕ ಜಾಲತಾಣಗಳ ಮೂಲಕ ಜಾಹೀರಾತು ನೀಡಿ ಸಂತ್ರಸ್ತರನ್ನು ವಂಚಿಸುತ್ತಿವೆ. ನಕಲಿ ಸೈಟ್ಗಳಿಗೆ ಭೇಟಿ ನೀಡಿ ಉತ್ಪನ್ನಗಳನ್ನು ಆರ್ಡರ್ ಮಾಡಿದರೆ ಹಣ ಕಳೆದುಕೊಳ್ಳುವ ಅಪಾಯವಿದೆ ಎಂದು ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ. ರಿಯಾಯಿತಿ ನೀಡುವ ವೆಬ್ಸೈಟ್ಗಳ ಸತ್ಯಾಸತ್ಯತೆ ಮತ್ತು ಕಾನೂನುಬದ್ಧತೆಯನ್ನು ಪರಿಶೀಲಿಸಿದ ನಂತರವೇ ಉತ್ಪನ್ನಗಳನ್ನು ಆರ್ಡರ್ ಮಾಡಿ ಹಣ ವಿನಿಮಯ ಮಾಡಿಕೊಳ್ಳಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ವೆಬ್ಸೈಟ್ಗಳ ದೃಢೀಕರಣವನ್ನು ಗುರುತಿಸಲು ವಿಳಾಸವನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಎಸ್ಎಂಎಸ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸಿದ ಲಿಂಕ್ಗಳನ್ನು ಕ್ಲಿಕ್ ಮಾಡುವ ಮೂಲಕ ಇ-ಕಾಮರ್ಸ್ ವೆಬ್ಸೈಟ್ಗಳನ್ನು ಪ್ರವೇಶಿಸದಂತೆ ಪೊಲೀಸರು ಎಚ್ಚರಿಸಿದ್ದಾರೆ. ನೀವು ಆನ್ಲೈನ್ ಹಣಕಾಸು ವಂಚನೆಗೆ ಬಲಿಯಾಗಿದ್ದೀರಿ ಎಂದು ನಿಮಗೆ ಮನವರಿಕೆಯಾದಲ್ಲಿ, ನೀವು ತಕ್ಷಣವೇ 1930ಗೆ ವರದಿ ಮಾಡಬೇಕು. ಹಣ ಕಳೆದುಕೊಂಡ ಒಂದು ಗಂಟೆಯೊಳಗೆ ಈ ಸಂಖ್ಯೆಗೆ ದೂರು ಬಂದರೆ ಹಣ ವಸೂಲಿಯನ್ನು ತಡೆಯುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಪೊಲೀಸರು.
ನಕಲಿ ವೆಬ್ಸೈಟ್ಗಳ ಜಾಲಕ್ಕೆ ಬಿದ್ದು ಅನೇಕ ಮಂದಿ ಲಕ್ಷಗಟ್ಟಲೆ ಹಣ ನಷ್ಟ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಕೇರಳದ ಒಟ್ಟಪಾಲಂನಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಗೆ 8.35 ಲಕ್ಷ ರೂ. ವಂಚನೆ ಮಾಡಿದ್ದಾರೆ. ಸೂಕ್ತ ವಧುವಿಗಾಗಿ ಮಗನ ವಿವರಗಳನ್ನು ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ ಅಪ್ಡೇಟ್ ಮಾಡಲಾಗಿತ್ತು. ಅಲ್ಲಿಗೆ ನುಸುಳಿದ ವಂಚಕರು, ಪ್ರೊಫೈಲ್ನಲ್ಲಿ ನೀಡಿದ್ದ ಮೊಬೈಲ್ ಫೋನ್ ನಂಬರ್ ಅನ್ನು ಪಡೆದು ನಿವೃತ್ತ ಅಧಿಕಾರಿನ್ನು ಸಂಪರ್ಕಿಸಿದ್ದಾರೆ. ಬಳಿಕ ಟ್ರೇಡಿಂಗ್ ಆ್ಯಪ್ನಲ್ಲಿ ಹಣ ತೊಡಗಿಸಿದರೆ ಉತ್ತಮ ಲಾಭ ಸಿಗುತ್ತದೆ ಎಂದು ನಂಬಿಸಿದ್ದಾರೆ. ಅಲ್ಲದೆ, ತಮ್ಮ ಬ್ಯಾಂಕ್ ಖಾತೆಗೆ ಮೊದಲು 40 ಸಾವಿರ ರೂ. ಜಮಾ ಮಾಡಿಸಿಕೊಂಡಿದ್ದು, ಅದೇ ದಿನ ಲಾಭಾಂಶವಾಗಿ 6000 ರೂ.ಗಳನ್ನು ನಿವೃತ್ತ ಅಧಿಕಾರಿ ಖಾತೆಗೆ ಮತ್ತೆ ಜಮಾ ಮಾಡುವ ಮೂಲಕ ವಿಶ್ವಾಸ ಗಳಿಸಿದ್ದಾರೆ. ಇದಾದ ಬಳಿಕ ಉಳಿದ ಮೊತ್ತವನ್ನು ವಂಚಕರು ಸೂಚಿಸಿದ ಬ್ಯಾಂಕ್ ಖಾತೆಗಳಿಗ ವಿವಿಧ ಹಂತಗಳಲ್ಲಿ ನಿವೃತ್ತಿ ಅಧಿಕಾರಿ ಜಮಾ ಮಾಡಿದ್ದಾರೆ. ಆದರೆ, ನಂತರದ ದಿನಗಳಲ್ಲಿ ತನ್ನ ಬಂಡವಾಳ ಮತ್ತು ಲಾಭ ಸಿಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್ನಲ್ಲಿ ನಿವೃತ್ತ ಅಧಿಕಾರಿ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮೂಲಕ ಒಟ್ಟಪಾಲಂ ಪೊಲೀಸರಿಗೆ ದೂರನ್ನು ರವಾನಿಸಿದ ನಂತರ, ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಉತ್ತರ ಪ್ರದೇಶದ ಆಗ್ರಾ ಮತ್ತು ನೋಯ್ಡಾದ ಬ್ಯಾಂಕ್ ಖಾತೆಗಳಿಗೆ ಆ ಹಣ ಜಮಾಯಾಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೀಗಾಗಿ ಆನ್ಲೈನ್ನಲ್ಲಿ ವ್ಯವಹರಿಸುವ ಮುನ್ನ ತುಂಬಾ ಹುಷಾರಾಗಿರಿ ಎಂದು ಪೋಲಿಸರು ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)