ವಿರಾಟ್ ಕೊಹ್ಲಿ ದಾಖಲೆ ಮುರಿದ ಹ್ಯಾರಿ ಬ್ರೂಕ್: ಇಂಗ್ಲೆಂಡ್ ಎದುರು ಸರಣಿ ಗೆದ್ದ ಆಸೀಸ್

New-Project-2-11
Published on

ಬ್ರಿಸ್ಟಲ್: ಆರಂಭಿಕ ಬೆನ್ ಡಕೆಟ್ (107 ರನ್, 91 ಎಸೆತ, 13 ಬೌಂಡರಿ, 2 ಸಿಕ್ಸರ್) ಶತಕದ ಹೊರತಾಗಿಯೂ ಆತಿಥೇಯ ಇಂಗ್ಲೆಂಡ್ ತಂಡ ಮಳೆಬಾಧಿತ ನಿರ್ಣಾಯಕ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ 49 ರನ್‌ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು ಆಸೀಸ್ 3-2ರಿಂದ ಗೆದ್ದುಕೊಂಡಿದೆ.

ಕೌಂಟಿ ಗ್ರೌಂಡ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್‌ಗೆ ಫಿಲ್ ಸಾಲ್ಟ್ (45) ಹಾಗೂ ಡಕೆಟ್ ಉತ್ತಮ ಆರಂಭ ಒದಗಿಸಿದರು. ಬಳಿಕ 3ನೇ ವಿಕೆಟ್‌ಗೆ ಡಕೆಟ್-ನಾಯಕ ಹ್ಯಾರಿ ಬ್ರೂಕ್ (72 ರನ್, 52 ಎಸೆತ,3 ಬೌಂಡರಿ, 7 ಸಿಕ್ಸರ್) ಜತೆಯಾಟದ ನೆರವಿನಿಂದ 2 ವಿಕೆಟ್‌ಗೆ 202 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ ಟ್ರಾವಿಸ್ ಹೆಡ್ (28ಕ್ಕೆ 4) ದಾಳಿಗೆ ದಿಢೀರ್ ಕುಸಿತ ಕಂಡು 49.2 ಓವರ್‌ಗಳಲ್ಲಿ 309 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಆಸೀಸ್ 20.4 ಓವರ್‌ಗಳಲ್ಲಿ 2 ವಿಕೆಟ್‌ಗೆ 165 ರನ್‌ಗಳಿಸಿದಾಗ ಮಳೆ ಅಡಚಣೆ ತಂದಿತು. ಆಗ ಡಿಎಲ್‌ಎಸ್ ನಿಯಮದನ್ವಯ ಆಸೀಸ್ 49 ರನ್ ಮುನ್ನಡೆ ಸಾಧಿಸಿತ್ತು.

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ನಾಯಕನಾಗಿ ಗರಿಷ್ಠ ರನ್‌ಗಳಿಸಿದ ವಿರಾಟ್ ಕೊಹ್ಲಿ (310) ದಾಖಲೆಯನ್ನು ಹ್ಯಾರಿ ಬ್ರೂಕ್ (312) ಮುರಿದರು.

ಇಂಗ್ಲೆಂಡ್: 49.2 ಓವರ್‌ಗಳಲ್ಲಿ 309 (ಸಾಲ್ಟ್ 46, ಡಕೆಟ್ 107, ಬ್ರೂಕ್ 72, ಲಿವಿಂಗ್‌ಸ್ಟೋನ್ 0, ಬೆತೆಲ್ 13, ರಶೀದ್ 36*, ಟ್ರಾವಿಸ್ ಹೆಡ್ 28ಕ್ಕೆ 4, ಹಾರ್ಡಿ 38ಕ್ಕೆ 2). ಆಸೀಸ್: 20.4 ಓವರ್‌ಗಳಲ್ಲಿ 2 ವಿಕೆಟ್‌ಗೆ 165 (ಶಾರ್ಟ್ 58, ಟ್ರಾವಿಸ್ ಹೆಡ್ 31, ಸ್ಮಿತ್ 36*, ಇಂಗ್ಲಿಸ್ 28*).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net