

ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲರಿಗೂ ಸುಲಭವಾಗಿ ಸಿಗುವ ಹಣ್ಣೆಂದರೆ ಅದು ಬಾಳೆಹಣ್ಣು ( Banana ). ಇದರ ಬೆಲೆ ಇತರೆ ಹಣ್ಣುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಅದಕ್ಕಾಗಿಯೇ ಪ್ರತಿಯೊಬ್ಬರ ಮನೆಯಲ್ಲೂ ಬಾಳೆಹಣ್ಣು ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಹಣ್ಣುಗಳು ವರ್ಷವಿಡೀ ನಮಗೆ ಲಭ್ಯವಿವೆ. ಕೆಲವರು ಹಣ್ಣಿನ ರೂಪದಲ್ಲಿ ತಿಂದರೆ, ಇನ್ನು ಕೆಲವರು ಮಿಲ್ಕ್‌ಶೇಕ್, ಸ್ಮೂಥಿ ಹಾಗೂ ಪ್ಯಾನ್‌ಕೇಕ್‌ಗಳನ್ನು ತಯಾರಿಸಿ ತಿನ್ನುತ್ತಾರೆ.
ಇನ್ನು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಬಾಳೆಹಣ್ಣುಗಳಿವೆ. ರೋಬಸ್ಟಾ, ರಸ್ತಾಲಿ, ಪೂವನ್, ಕೆಂಪು ಬಾಳೆಹಣ್ಣು, ಮೊಂಥನ್, ಮಲ್ಭೋಗ್ ಹಾಗೂ ಏಲಕ್ಕಿ ಸೇರಿದಂತೆ ಅನೇಕ ಬಗೆಯ ಬಾಳೆಹಣ್ಣುಗಳು ಭಾರತದಲ್ಲಿವೆ. ಆದರೀಗ ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಬಾಳೆಹಣ್ಣಿನ ಫೋಟೋವೊಂದು ಭಾರಿ ವೈರಲ್ ಆಗುತ್ತಿದೆ. ಅದು ನೀಲಿ ಬಣ್ಣದ ಬಾಳೆಹಣ್ಣು. ಅಚ್ಚರಿಯ ಸಂಗತಿ ಏನೆಂದರೆ, ಈ ಹಣ್ಣು ವೆನಿಲ್ಲಾ ಐಸ್ ಕ್ರೀಮ್ ಸುವಾಸನೆ ಹೊಂದಿದೆ. ಇದನ್ನು ಬ್ಲೂ ಜಾವಾ ಬನಾನಾ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಇನ್ನಷ್ಟು ತಿಳಿಯೋಣ.
ಈ ಬಾಳೆಹಣ್ಣು ಇಂಡೋನೇಷ್ಯಾದಲ್ಲಿ ಹೇರಳವಾಗಿ ಕಂಡುಬರುತ್ತದೆ. ಈ ಹಣ್ಣು ವೆನಿಲ್ಲಾ ಪರಿಮಳವನ್ನು ಹೊಂದಿರುತ್ತದೆ. ಸಿಪ್ಪೆಯ ಒಳಗಿರುವ ಹಣ್ಣುಗಳು ತೆಳು ನೀಲಿ ಮತ್ತು ಬೆಳ್ಳಿಯ ಬಣ್ಣವನ್ನು ಹೊಂದಿರುತ್ತವೆ ಮತ್ತು ಹಣ್ಣಾದಾಗ ಸಂಪೂರ್ಣವಾಗಿ ನೀಲಿ ಬಣ್ಣಕ್ಕೆ ತಿರುಗುತ್ತವೆ. ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಇತರ ಬಾಳೆಹಣ್ಣುಗಳಿಗಿಂತಲೂ ಇದು ಹೆಚ್ಚು ಗಮನ ಸೆಳೆಯುತ್ತದೆ.
ನೀಲಿ ಬಾಳೆಹಣ್ಣು ಸಾಕಷ್ಟು ಫೈಬರ್ ಅನ್ನು ಹೊಂದಿದ್ದು, ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ, ವಿಟಮಿನ್ ಬಿ6 ಮತ್ತು ಪೊಟ್ಯಾಶಿಯಂನಂತಹ ಪೋಷಕಾಂಶಗಳು ಹೇರಳವಾಗಿವೆ. ದೇಹಕ್ಕೆ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಬಾಳೆಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಹಸಿವನ್ನು ತಡೆಯುತ್ತದೆ. (ಏಜೆನ್ಸೀಸ್)