

ಬಡವರು, ಮಧ್ಯಮ ವರ್ಗದವರು ಹಾಗೂ ಶ್ರೀಮಂತರು ಎಲ್ಲರಿಗೂ ಸುಲಭವಾಗಿ ಸಿಗುವ ಹಣ್ಣೆಂದರೆ ಅದು ಬಾಳೆಹಣ್ಣು. ಇದರ ಬೆಲೆ ಇತರೆ ಹಣ್ಣುಗಳಿಗೆ ಹೋಲಿಸಿದರೆ ತುಂಬಾ ಕಡಿಮೆ. ಅದಕ್ಕಾಗಿಯೇ ಪ್ರತಿಯೊಬ್ಬರ ಮನೆಯಲ್ಲೂ ಬಾಳೆಹಣ್ಣು ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಹಣ್ಣುಗಳು ವರ್ಷವಿಡೀ ನಮಗೆ ಲಭ್ಯವಿವೆ. ಕೆಲವರು ಹಣ್ಣಿನ ರೂಪದಲ್ಲಿ ತಿಂದರೆ, ಇನ್ನು ಕೆಲವರು ಮಿಲ್ಕ್‌ಶೇಕ್, ಸ್ಮೂಥಿ ಹಾಗೂ ಪ್ಯಾನ್‌ಕೇಕ್‌ಗಳನ್ನು ತಯಾರಿಸಿ ತಿನ್ನುತ್ತಾರೆ.
ಬಾಳೆಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತವೆ. ಈ ಹಣ್ಣುಗಳಲ್ಲಿರುವ ನಾರಿನಂಶವು ತಿಂದ ಆಹಾರವನ್ನು ತ್ವರಿತವಾಗಿ ಜೀರ್ಣಿಸುತ್ತದೆ. ಮಲಬದ್ಧತೆ ಬಾಧಿಸದಂತೆ ನೋಡಿಕೊಳ್ಳುತ್ತದೆ. ಹಾಗೆಯೇ ಬಹಳ ಹೊತ್ತು ಆಹಾರ ತೆಗೆದುಕೊಳ್ಳದಿದ್ದರೂ ಹಸಿವಾಗದಂತೆ ತಡೆಯುತ್ತದೆ.
ಬಾಳೆ ಹಣ್ಣುಗಳು ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಒಂದು ಮಧ್ಯಮ ಗಾತ್ರದ ಬಾಳೆಹಣ್ಣು 27 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಫೈಬರ್ ಮತ್ತು 14 ಗ್ರಾಂ ನೈಸರ್ಗಿಕ ಸಕ್ಕರೆಯನ್ನು ಹೊಂದಿರುತ್ತದೆ. ಇದರಿಂದ ನಮಗೆ 105 ಕ್ಯಾಲೋರಿ ದೊರೆಯುತ್ತದೆ. ಅದಕ್ಕಾಗಿಯೇ ಅನೇಕ ಜನರು ಊಟದ ನಡುವೆ ಹಸಿವನ್ನು ಹೋಗಲಾಡಿಸಲು ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುತ್ತಾರೆ.
ಯಾವುದೇ ಆಹಾರವಾಗಲಿ ಮಿತಿಯಾಗಿ ಸೇವಿಸಬೇಕು. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಬಾಳೆಹಣ್ಣು ತುಂಬಾ ರುಚಿಯಾಗಿರುವುದರಿಂದ ಮತ್ತು ಬೆಲೆ ಕಡಿಮೆ ಇರುವುದರಿಂದ ಒಂದು ದಿನಕ್ಕೆ ಸಿಕ್ಕಾಪಟ್ಟೆ ಬಾಳೆಹಣ್ಣು ತಿನ್ನುವವರು ಕೂಡ ಇದ್ದಾರೆ. ಆದರೆ, ಆ ರೀತಿ ಮಾಡಬಾರದು. ಮಿತಿಯಾಗಿ ಸೇವಿಸಬೇಕು. ಹಾಗಾದರೆ ಒಂದು ದಿನಕ್ಕೆ ಎಷ್ಟು ಬಾಳೆಹಣ್ಣು ತಿನ್ನಬೇಕು? ಎಂಬ ಪ್ರಶ್ನೆ ಹಲವರಲ್ಲಿ ಮೂಡುತ್ತದೆ. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆರೋಗ್ಯ ತಜ್ಞರ ಪ್ರಕಾರ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಆರೋಗ್ಯವಂತ ಜನರು ದಿನಕ್ಕೆ ಗರಿಷ್ಠ ಎರಡು ದೊಡ್ಡ ಬಾಳೆಹಣ್ಣುಗಳನ್ನು ತಿನ್ನಬಹುದು ಅಥವಾ 3 ಮಧ್ಯಮ ಗಾತ್ರದ ಬಾಳೆಹಣ್ಣುಗಳು ಹಾಗೂ 5 ಸಣ್ಣ ಬಾಳೆಹಣ್ಣುಗಳನ್ನು ತಿನ್ನಬಹುದು. ಮಧುಮೇಹ ಇರುವವರು ಯಾವುದೇ ಕಾರಣಕ್ಕೂ ಬಾಳೆಹಣ್ಣು ತಿನ್ನಲೇಬಾರದು. ಏಕೆಂದರೆ, ಬಾಳೆಹಣ್ಣಿನಲ್ಲಿರುವ ದೊಡ್ಡ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳು ಗ್ಲೂಕೋಸ್ ಆಗಿ ಪರಿವರ್ತನೆಗೊಂಡು ರಕ್ತದಲ್ಲಿ ತಕ್ಷಣವೇ ಬೆರೆತುಹೋಗುತ್ತದೆ. ಈ ಕಾರಣದಿಂದಾಗಿ, ಸಕ್ಕರೆಯ ಪ್ರಮಾಣವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಇದರಿಂದ ಸಮಸ್ಯೆಗಳು ಉಂಟಾಗುತ್ತವೆ. ಹಾಗಾಗಿ ಮಧುಮೇಹ ಇರುವವರು ಬಾಳೆಹಣ್ಣು ತಿನ್ನಬಾರದು.
ಹೆಚ್ಚು ಬಾಳೆಹಣ್ಣು ತಿಂದರೆ ಏನಾಗುತ್ತದೆ?
ಹೆಚ್ಚು ಬಾಳೆಹಣ್ಣುಗಳನ್ನು ತಿನ್ನುವುದು ಹೈಪರ್‌ಕೆಲೆಮಿಯಾಕ್ಕೆ ಕಾರಣವಾಗಬಹುದು. ಇದು ದೇಹದಲ್ಲಿ ಹೆಚ್ಚು ಪೊಟ್ಯಾಶಿಯಂ ಇದ್ದಾಗ ಸಂಭವಿಸುವ ಸ್ಥಿತಿಯಾಗಿದೆ. ಇದು ಹೃದಯಾಘಾತ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದಿನಕ್ಕೆ 18 ಗ್ರಾಂ ಗಿಂತ ಹೆಚ್ಚು ಪೊಟ್ಯಾಶಿಯಂ ಸೇವಿಸುವುದರಿಂದ ಹೈಪರ್‌ಕೆಲೆಮಿಯಾ ಉಂಟಾಗುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಇನ್ನು ಬಾಳೆಹಣ್ಣಿನಲ್ಲಿ ಪಿಷ್ಟವೂ ಅಧಿಕವಾಗಿದ್ದು, ಇದು ದಂತಕ್ಷಯಕ್ಕೆ ಕಾರಣವಾಗಬಹುದು. ಹೆಚ್ಚುವರಿಯಾಗಿ, ಬಾಳೆಹಣ್ಣುಗಳು ಅಲರ್ಜಿಯ ಪ್ರತಿಕ್ರಿಯೆಗಳಾದ ಗಂಟಲಿನ ತುರಿಕೆ, ಅಜೀರ್ಣ, ಸೆಳೆತ, ಅತಿಸಾರ, ವಾಂತಿ, ಊದಿಕೊಂಡ ತುಟಿಗಳು ಹಾಗೂ ಉಬ್ಬಸಕ್ಕೆ ಕಾರಣವಾಗಬಹುದು. ಹೀಗಾಗಿ ಆರೋಗ್ಯಕರ, ಸಮತೋಲಿತ ಆಹಾರದ ಭಾಗವಾಗಿ ಬಾಳೆಹಣ್ಣುಗಳನ್ನು ಮಿತವಾಗಿ ತಿನ್ನಬೇಕು.
ಆರೋಗ್ಯ ಪ್ರಯೋಜನವೇನು?
ಬಾಳೆಹಣ್ಣನ್ನು ಮಿತವಾಗಿ ಸೇವಿಸುವುದರಿಂದ ಅನೇಕ ಆರೋಗ್ಯ ಲಾಭಗಳನ್ನು ಪಡೆಯಬಹುದು. ಬಾಳೆಹಣ್ಣುಗಳು ತಮ್ಮ ಪೌಷ್ಠಿಕಾಂಶಗಳು ಮತ್ತು ರುಚಿಯಿಂದಾಗಿ ಅನೇಕ ಜನರ ನೆಚ್ಚಿನ ಹಣ್ಣಾಗಿದೆ. ಈ ಹಣ್ಣು, ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಸರಿಯಾದ ಸ್ನಾಯುವಿನ ಕಾರ್ಯನಿರ್ವಹಣೆಗೆ ಮತ್ತು ಆರೋಗ್ಯಕರ ರಕ್ತದೊತ್ತಡದ ಮಟ್ಟವನ್ನು ಕಾಪಾಡಿಕೊಳ್ಳಲು ಇದು ಅವಶ್ಯಕವಾಗಿದೆ. ಬಾಳೆಹಣ್ಣಿನಲ್ಲಿ ಹೆಚ್ಚಾಗಿ ನಾರಿನಂಶವೂ ಇದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಇದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದ್ದು, ಸ್ವತಂತ್ರ ರಾಡಿಕಲ್ಗಳಿಂದ ಉಂಟಾಗುವ ಹಾನಿಯಿಂದ ದೇಹವನ್ನು ರಕ್ಷಿಸುತ್ತದೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವೂ ಇದೆ. ಇದು ಮನಸ್ಥಿತಿಯನ್ನು ಸುಧಾರಿಸಲು ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.