

ಜಕಾರ್ತ: ಇಂಡೋನೇಷ್ಯಾದ ಐವರು ಮಿಸ್ ಯೂನಿವರ್ಸ್ ಸ್ಪರ್ಧಿಗಳು ಆಯೋಜಕರ ವಿರುದ್ಧ ಪೊಲೀಸ್ ಠಾಣೆಯ ಮೆಟ್ಟಿಲೇರಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ. ದೇಹ ಪರಿಶೀಲನೆ ಹೆಸರಲ್ಲಿ ಟಾಪ್ಲೆಸ್ ಆಗುವಂತೆ ಆದೇಶಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸ್ಪರ್ಧಿಗಳು ನೀಡಿರುವ ವರದಿಯ ಆಧಾರದ ಮೇಲೆ ತನಿಖೆ ನಡೆಸಲಾಗುವುದು ಎಂದು ಇಂಡೋನೇಷ್ಯಾ ಪೊಲೀಸರು ಖಚಿತಪಡಿಸಿದ್ದಾರೆ. ಜುಲೈ 29ರಿಂದ ಆಗಸ್ಟ್ 3ರವರೆಗೆ ರಾಜಧಾನಿ ಜಕಾರ್ತದಲ್ಲಿ ಇಂಡೋನೇಷ್ಯಾ ಸೌಂದರ್ಯ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಪುರುಷರೂ ಸೇರಿ 20ಕ್ಕೂ ಹೆಚ್ಚು ಜನರಿರುವ ಕೊಠಡಿಯೊಂದರಲ್ಲಿ ನಮ್ಮ ಒಳಉಡುಪುಗಳನ್ನು ತೆಗೆಯುವಂತೆ ಆಯೋಜಕರು ಕೇಳಿದರು ಎಂದು ಐವರು ಸ್ಪರ್ಧಿಗಳು ಆರೋಪ ಮಾಡಿದ್ದಾರೆ.
ಐವರು ಸ್ಪರ್ಧಿಗಳ ಟಾಪ್ಲೆಸ್ ಫೋಟೋಗಳನ್ನು ಸೆರೆಹಿಡಿಯಲಾಗಿದೆ ಎಂದು ಸಂತ್ರಸ್ತ ಸ್ಪರ್ಧಿಗಳ ಪರ ವಕೀಲೆ ಮೆಲ್ಲಿಸಾ ಆಂಗ್ರೇನಿ ತಿಳಿಸಿದ್ದು, ಇಂತಹ ದೇಹ ಪರಿಶೀಲನೆ ಬೇಕಿರಲಿಲ್ಲ ಎಂದಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಓರ್ವ ಸಂತ್ರಸ್ತೆ, ಕಾಲುಗಳನ್ನು ಅಗಲಿಸಿ, ವಿಚಿತ್ರವಾಗಿ ಪೋಸ್ ನೀಡುವಂತೆ ಒತ್ತಾಯಿಸಿದರು ಎಂದು ದೂರಿದ್ದಾರೆ. ಫೋಸ್ ನೀಡುವ ವೇಳೆ ನನ್ನನ್ನು ಇಣುಕಿ ನೋಡುತ್ತಿರುವಂತೆ ಭಾಸವಾಯಿತು. ನಾನು ತುಂಬಾ ಗೊಂದಲಕ್ಕೆ ಒಳಗಾದೆ ಮತ್ತು ಮುಜಗರವಾಯಿತು ಎಂದು ಹೆಸರೇಳಲು ಇಚ್ಛಿಸಿದ ಸಂತ್ರಸ್ತೆ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ಪಡೆದುಕೊಳ್ಳಲು ಮಿಸ್ ಯೂನಿವರ್ಸ್ ಇಂಡೋನೇಷ್ಯಾ ಸೌಂದರ್ಯ ಸ್ಪರ್ಧೆ ಆಯೋಜನೆ ಮಾಡುವ ಪಿಟಿ ಕ್ಯಾಪೆಲ್ಲಾ ಸ್ವಸ್ತಿಕ ಕರ್ಯ ಮತ್ತು ಕಂಪನಿಯ ಸಂಸ್ಥಾಪಕ ಪಾಪಿ ಕ್ಯಾಪೆಲ್ಲಾ ಅವರನ್ನು ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸುದ್ದಿ ಸಂಸ್ಥೆ ರಾಯಿಟರ್ಸ್ ಸಂಪರ್ಕಿಸಲು ಪಯತ್ನ ಮಾಡಿದ್ದು, ಈವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದುಬಂದಿದೆ.
ಜಕಾರ್ತ ಪೊಲೀಸ್ ವಕ್ತಾರ ಟ್ರುನೊಯುಡೊ ವಿಸ್ನು ಆಂಡಿಕೊ ಅವರು ಸೋಮವಾರ ಸ್ಪರ್ಧಿಗಳಿಂದ ವರದಿಯನ್ನು ಸ್ವೀಕರಿಸಿದ್ದಾರೆ ಮತ್ತು ಅದನ್ನು ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆಯುಳ್ಳ ಇಂಡೋನೇಷ್ಯಾದ ಧಾರ್ಮಿಕ ಗುಂಪುಗಳು ಸೌಂದರ್ಯ ಸ್ಪರ್ಧೆಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬರುತ್ತಿದೆ. ಈ ವರ್ಷದ ಕೊನೆಯಲ್ಲಿ ಎಲ್ ಸಾಲ್ವಡಾರ್‌ನಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಸ್ಪರ್ಧೆಗೆ ಇಂಡೋನೇಷ್ಯಾದ ಪ್ರವೇಶವನ್ನು ಆಯ್ಕೆ ಮಾಡಲು ಜಕಾರ್ತದಲ್ಲಿ ಈ ಸ್ಪರ್ಧೆಯನ್ನು ನಡೆಸಲಾಯಿತು.
ಮಿಸ್ ಯೂನಿವರ್ಸ್ ಸ್ಪರ್ಧೆಯನ್ನು ಮಿಸ್ ಯೂನಿವರ್ಸ್ ಸಂಸ್ಥೆ ನಡೆಸುತ್ತಿದೆ ಮತ್ತು 1996 ಮತ್ತು 2002 ರ ನಡುವೆ ಡೊನಾಲ್ಡ್ ಟ್ರಂಪ್ ಅವರು ಸಹ-ಮಾಲೀಕತ್ವವನ್ನು ಹೊಂದಿದ್ದರು. (ಏಜೆನ್ಸೀಸ್)