ಬೇಕಾಬಿಟ್ಟಿ ಬೈಕ್​ ಚಾಲನೆ ಜತೆಗೆ ಅಪಾಯಕಾರಿ ಸಾಹಸ ಮಾಡ್ತಿದ್ದ ಮಿಸ್ಟರ್​ ಕ್ರೇಜಿ ಈಗ ಪೊಲೀಸರ ಅತಿಥಿ!

Bike Rider
Published on

ಬೆಂಗಳೂರು: ಬೈಕ್​ ಇದೆ ಅಂತ ರೀಲ್ಸ್​ ಮಾಡುವುದಕ್ಕಾಗಿ ಬೇಕಾ ಬಿಟ್ಟಿ ಚಾಲನೆ ಮಾಡಿದರೆ ಪೊಲೀಸರು ನಿಮ್ಮ ಬೆನ್ನ ಹಿಂದೆ ಬೀಳುವುದು ಗ್ಯಾರಂಟಿ. ಇಲ್ಲೊಬ್ಬ ಕ್ರೇಜಿ ಬೈಕ್​ ರೈಡರ್​ ಪೊಲೀಸರ ಅತಿಥಿಯಾಗಿದ್ದು, ಆತನ ಬೈಕ್​ ಕೂಡ ಜಪ್ತಿಯಾಗಿದೆ.

ಕೆಐಎಎಲ್ ಏರ್ಪೋರ್ಟ್ ರಸ್ತೆಯಲ್ಲಿ ಇತ್ತೀಚೆಗೆ ಸಿಗ್ನಲ್‌ ಜಂಪ್ ಮಾಡಿ ಬೈಕ್​ಗೆ ಕಾರೊಂದು ಡಿಕ್ಕಿ ಹೊಡೆದಿತ್ತು. ಬಳಿಕ ಕಾರನ್ನು ಹಿಂಬಾಲಿಸಿದ ಬೈಕ್​ ಸವಾರ ಕಾರಿನ ಕನ್ನಡಿ ಹೊಡೆದು ಹಾಕಿದ್ದ. ನಂತರ ಓನ್ ವೇನಲ್ಲಿ ಬೈಕ್ ತಿರುಗಿಸಿಕೊಂಡು ಎಸ್ಕೇಪ್ ಆಗಿದ್ದ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದ.

ವಿಡಿಯೋ ಗಮನಿಸಿ ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದರು. ಇದೊಂದೆ ವಿಡಿಯೋ ಅಲ್ಲದೆ, ತನ್ನ ಎಲ್ಲ ಸ್ಟಂಟ್​ ವಿಡಿಯೋಗಳನ್ನು ಬೈಕ್​ ಸವಾರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ಅಲ್ಲದೆ, ತನ್ನ ಬೈಕ್​ ಅನ್ನು ವಿಚಿತ್ರವಾಗಿ ಮಾರ್ಪಾಡು ಮಾಡಿಕೊಂಡಿದ್ದ. ವಿಡಿಯೋ ಪರಿಶೀಲನೆ ನಡೆಸಿದ ಯಲಹಂಕ ಪೊಲೀಸರು ಇದೀಗ ಬೈಕ್ ಮತ್ತು ಸವಾರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಬೆಂಗಳೂರು (ಉತ್ತರ) ಉಪ ಪೊಲೀಸ್ ಕಮಿಷನರ್ ಸಚಿನ್ ಘೋರ್ಪಡೆ ಅವರು ಟ್ವೀಟ್​ ಮಾಡಿದ್ದು, ತನ್ನ ಅಕ್ರಮ ಸ್ಟಂಟ್​ಗಳಿಂದಾಗಿ ಮಿಸ್ಟರ್​ ಕ್ರೇಜಿ ಈಗ ನಮ್ಮ ಅತಿಥಿಯಾಗಿದ್ದಾನೆ. ಸಂಚಾರಿ ನಿಯಮ ಉಲ್ಲಂಘನೆಗಾಗಿ ಆತನ ಬೈಕ್​ ಅನ್ನು ಜಪ್ತಿ ಮಾಡಿದ್ದೇವೆ. ಚಾಲಕನ ವಿನಾಶಕಾರಿ ಹಾಗೂ ಹಿಂಸೆಯ ವರ್ತನೆ ಹಿನ್ನೆಲೆಯಲ್ಲಿ ಆತನ ವಿರುದ್ಧ ಕ್ರಮ ಜರುಗಿಸಲಿದ್ದೇವೆ. ಇಂತ ಅಪರಾಧ ಚಟುವಟಿಕೆಗಳಲ್ಲಿ ಯಾರೂ ತೊಡಗಿಸಿಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net