ಇನ್ಮುಂದೆ ಕೇರಳ ಅಂತ ಕರೆಯುವಂತಿಲ್ಲ… ರಾಜ್ಯದ ಹೆಸರು ಬದಲಾಯಿಸುವ ನಿರ್ಣಯ ಅಂಗೀಕಾರ

Kerala
Published on

ತಿರುವನಂತಪುರಂ: ದೇವರ ನಾಡು ಕೇರಳ ರಾಜ್ಯದ ಅಧಿಕೃತ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಬದಲಾಯಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು ಕೇರಳ ವಿಧಾನಸಭೆ ನಿನ್ನೆ (ಆಗಸ್ಟ್​ 09) ಅಂಗೀಕರಿಸಿದೆ.

ಈ ನಿರ್ಣಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ಕೇರಳದ ವಿಧಾನಭೆಯಲ್ಲಿ ಪ್ರಸ್ತುತಪಡಿಸಿದರು. ಈ ನಿರ್ಣಯವನ್ನು ಸರ್ವ ಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು. ಭಾರತೀಯ ಸಂವಿಧಾನದ ಎಂಟನೇ ಶೆಡ್ಯೂಲ್ ಮತ್ತು ಎಲ್ಲ ಅಧಿಕೃತ ದಾಖಲೆಗಳಲ್ಲಿ ಹೆಸರು ಬದಲಿಸಲು ಕೇರಳ ಸರ್ಕಾರ ಕೋರಿದೆ.

ಭಾರತ ಸಂವಿಧಾನದಲ್ಲಿ ರಾಜ್ಯದ ಹೆಸರನ್ನು ಕೇರಳ ಎಂದು ಬರೆಯಲಾಗಿದೆ. ಅದಕ್ಕೆ ತಿದ್ದುಪಡಿ ತಂದು ‘ಕೇರಳಂ’ ಮಾಡುವಂತೆ ಸದನವು ಕೇಂದ್ರ ಸರಕಾರವನ್ನು ಕೋರಿದೆ. ಮುಖ್ಯಮಂತ್ರಿ ಮಂಡಿಸಿದ ನಿರ್ಣಯ ಅಂಗೀಕಾರವಾದ ನಂತರ ಸರ್ಕಾರಿ ದಾಖಲೆಗಳಲ್ಲಿ ಕೇರಳಂ ಹೆಸರು ಬಳಕೆಯಾಗುತ್ತದೆ. ಈ ಬದಲಾವಣೆಯು ಸಂವಿಧಾನದಲ್ಲಿ ಪ್ರತಿಫಲಿಸುತ್ತದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿಯೂ ಬರೆಯಲಾಗುತ್ತದೆ.

ರಾಜ್ಯದ ಹೆಸರು ಮಲಯಾಳಂನಲ್ಲಿ ಕೇರಳಂ ಎಂದೇ ಕರೆಯಲಾಗುತ್ತದೆ. 1956ರ ನವೆಂಬರ್ 1ರಂದು ಭಾಷಾವಾರು ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಯಿತು. ಮಲಯಾಳಂ ಮಾತನಾಡುವ ಎಲ್ಲ ಜನರಿಗೆ ಅಖಂಡ ಕೇರಳ ರಾಜ್ಯ ರಚನೆಯಾಯಿತು. ಆದರೆ ಸಂವಿಧಾನದ ಮೊದಲ ಶೆಡ್ಯೂಲ್​ನಲ್ಲಿ ರಾಜ್ಯದ ಹೆಸರನ್ನು ‘ಕೇರಳ’ ಎಂದು ನಮೂದಿಸಲಾಗಿದೆ. ರಾಜ್ಯದ ಅಧಿಕೃತ ಹೆಸರನ್ನು ಎಲ್ಲ ಅಧಿಕೃತ ಭಾಷೆಗಳಲ್ಲಿ 'ಕೇರಳಂ' ಎಂದು ಬದಲಾಯಿಸಲು ಸಂವಿಧಾನದ ಎಂಟನೇ ಶೆಡ್ಯೂಲ್ ಅಡಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುವಂತೆ ವಿಧಾನಸಭೆಯು ಕೇಂದ್ರ ಸರ್ಕಾರವನ್ನು ಸರ್ವಾನುಮತದಿಂದ ವಿನಂತಿಸುತ್ತದೆ ಎಂದು ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net