More

    ಕಳಾಹೀನ ಕಮಲ: ಬಿಜೆಪಿ ವರಿಷ್ಠರ ನಿರಾಸಕ್ತಿ, ಸೊರಗಿದ ಮುಖಂಡರು

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು 
    ಹೊದ್ದು ಮಲಗಿದ ನಾಯಕತ್ವ, ಸೊರಗಿದ ಮುಖಂಡರು, ಕನಲಿದ ಕಾರ್ಯಕರ್ತರು. ಇದೆಲ್ಲ ಪ್ರಸ್ತುತ ರಾಜ್ಯ ಬಿಜೆಪಿಗೆ ಹೊಂದಿಕೆಯಾಗುವ ವಿಶೇಷಣಗಳಾಗಿವೆ.

    ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್ ಭರದ ಸಿದ್ಧತೆ ನಡೆಸಿರುವಾಗಲೇ ರಾಜ್ಯ ಕಮಲಪಡೆ ಕಳಾಹೀನವಾಗಿ ಮುದುರಿ ಕುಳಿತಿದೆ. ಪಕ್ಷದ ವರಿಷ್ಠರು ಮೈತ್ರಿ ಸರ್ಕಾರ ಪತನ, ಆ ಸಂದರ್ಭಕ್ಕೆ ಬೇಕಾದ ಆಪರೇಷನ್ ಕಮಲ, ಚುನಾವಣೆಗೆ ತೋರಿಸಿದ ಆಸಕ್ತಿಯ ಶೇ.10ರಷ್ಟನ್ನೂ ಪಕ್ಷ ಸೋತು ಕುಳಿತಾಗ ತೋರಿಸದಿರುವುದು ಕಾರ್ಯಕರ್ತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಮಾಡಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕಡೆ ಅಭ್ಯರ್ಥಿ ಹುಡುಕಬೇಕಾದ ಪರಿಸ್ಥಿತಿ ಕಾಂಗ್ರೆಸ್​ಗೆ ಇದ್ದರೂ, ವಿಧಾನಸಭೆ ಚುನಾವಣೆಯ ದೊಡ್ಡ ಗೆಲುವಿನ ಉತ್ಸಾಹದಲ್ಲಿ ಲೋಕಸಭಾ ಚುನಾವಣೆಯಲ್ಲೂ ನಿರೀಕ್ಷೆ ಮೀರಿದ ಫಲಿತಾಂಶ ಪಡೆದೇ ತೀರುವುದಾಗಿ ಠೇಂಕರಿಸುತ್ತಿದೆ. ಅದಕ್ಕೆ ತಕ್ಕಂತೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    28 ಕ್ಷೇತ್ರಗಳ ಸ್ಥಿತಿಗತಿ ಅಧ್ಯಯನ, ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಖುದ್ದು ಮುಖ್ಯಮಂತ್ರಿಯವರಿಂದಲೇ ಶಾಸಕರಿಗೆ ಜವಾಬ್ದಾರಿ ನಿಗದಿ ಮಾಡಲಾಗುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಟಾಸ್ಕ್ ನೀಡಲಾಗಿದೆ. ಗ್ಯಾರಂಟಿ ಯೋಜನೆಗಳ ಜಿಲ್ಲಾ ಸಮಾವೇಶದ ಮೂಲಕ ಪರೋಕ್ಷ ಪ್ರಚಾರ ಹೀಗೆ ವಿವಿಧ ಮಜಲುಗಳಲ್ಲಿ ಕೈ ಪಡೆ ತಯಾರಿ ನಡೆಸಿದೆ.

    ಹತಾಶೆಯಿಂದ ಅಸಹಾಯಕತೆ: ಇನ್ನೊಂದೆಡೆ, ವಿಧಾನಸಭೆ ಚುನಾವಣೆ ಸೋಲಿನ ಹತಾಶೆಯಿಂದ ಹೊರಬರಲು ಸಾಧ್ಯವಾಗದ ಕಮಲ ನಾಯಕರು ಅಸಹಾಯಕತೆಗೆ ಸಿಲುಕಿದ್ದಾರೆ. ಅತ್ತ ದೆಹಲಿ ನಾಯಕರು ಕರ್ನಾಟಕ ತಮಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ನಿರ್ಲಿಪ್ತ, ನಿರ್ವಿಕಾರ ಮನೋಭಾವ ಪ್ರದರ್ಶಿಸುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುವಂತಾಗಿದೆ.

    ಹೊಸ ಸರ್ಕಾರವನ್ನು ಹಣಿಯಲು ಮೇಲಿಂದ ಮೇಲೆ ಸಿಗುತ್ತಿರುವ ಅವಕಾಶಗಳನ್ನು ಬಳಸಿಕೊಳ್ಳಲು ರಾಜ್ಯ ಬಿಜೆಪಿ ಎಡವುತ್ತಿರುವುದು ಕಾರ್ಯಕರ್ತರಿಗೂ ರೇಜಿಗೆ ಹುಟ್ಟಿಸಿರುವುದು ಸುಳ್ಳಲ್ಲ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ತಮ್ಮ ಅಸಹನೆ ಹೊರಹಾಕಿದ್ದೂ ಇದೆ.

    ಹೊಸ ಸರ್ಕಾರ ಮೇಲಿಂದ ಮೇಲೆ ಮಾಡಿಕೊಳ್ಳುತ್ತಿರುವ ಯಡ ವಟ್ಟುಗಳು, ಸರ್ಕಾರದ ವಿರುದ್ಧ ಸ್ವಪಕ್ಷೀಯ ಶಾಸಕರೇ ಸಹಿ ಸಂಗ್ರಹಿಸಿ ಮುಜುಗರಕ್ಕೆ ಈಡು ಮಾಡಿದ್ದು, ವ್ಯಾಪಕ ವರ್ಗಾವಣೆ ದಂಧೆ, ಗುತ್ತಿಗೆದಾರರ ಹೋರಾಟ ಮುಂತಾದ ಪ್ರಕರಣಗಳಿವೆ.

    ಇದಲ್ಲದೆ ತಮ್ಮ ಪಕ್ಷದ ಕಾರ್ಯಕರ್ತರ ಮೇಲಿನ ಪ್ರಕರಣ, ಪರಿವಾರದ ಕಾರ್ಯಕರ್ತರ ಗಡಿಪಾರು, ರಾಜ್ಯದ ವಿವಿಧೆಡೆ ರೈತರು ಎದುರಿಸುತ್ತಿರುವ ಸಮಸ್ಯೆ ಹೀಗೆ ಹತ್ತು ಹಲವು ಹೋರಾಟದ ವಿಷಯಗಳಿದ್ದರೂ ಬಿಜೆಪಿ ರಾಜ್ಯಾಧ್ಯಕ್ಷರಾದಿಯಾಗಿ ಎಲ್ಲ ನಾಯಕರು ಹೊದ್ದು ಮಲಗಿರುವುದು ಸೋಜಿಗವೆನಿಸಿದೆ. ಸಂಘಟನೆ ಇದೆ ಎಂದು ಬಿಂಬಿಸಲು ಸಾಂಕೇತಿಕ ಹೋರಾಟಕ್ಕಷ್ಟೇ ಸೀಮಿತವಾಗಿದೆ.

    | ವರಿಷ್ಠರ ಉದಾಸೀನ

    ಮೇ 13ರಂದು ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ವಿಧಾನಸಭೆಗೆ ಪ್ರತಿಪಕ್ಷ ನಾಯಕನಿಲ್ಲದೆ ನೂರು ದಿನ ಸಮೀಪಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಂತೂ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ತಮಗೂ ಪಕ್ಷಕ್ಕೂ ಸಂಬಂಧವೇ ಇಲ್ಲವೆಂಬಂತೆ ಇದ್ದು ಅಲ್ಲೊಂದು ಇಲ್ಲೊಂದು ಟ್ವೀಟ್ ಮೂಲಕ ತಮ್ಮ ಕರ್ತವ್ಯ ಮಾಡಿ ಮುಗಿಸಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕರ್ನಾಟಕದ ಕಡೆ ತಲೆಹಾಕಿಯೂ ಮಲಗಿರಲಿಕ್ಕಿಲ್ಲ.

    ಬಿಜೆಪಿ ವರಿಷ್ಠರು ಈ ಹಿಂದೆ ಸರ್ಕಾರದ ಆಗುಹೋಗುಗಳಳು, ತೀರ್ಮಾನ ತೆಗೆದುಕೊಳ್ಳುವಾಗ, ಸಂಪುಟ ವಿಸ್ತರಣೆ, ಪುನಾರಚನೆ ಸೇರಿ ಎಲ್ಲ ಸಂದರ್ಭಗಳನ್ನು ಗಂಭೀರವಾಗಿ ಪರಿಗಣಿಸಿದ್ದರು. ತಮ್ಮ ಮೂಗಿನ ನೇರಕ್ಕೇ ನಡೆಯಬೇಕೆಂದು ಲಕ್ಷ್ಮಣ ರೇಖೆ ಎಳೆದಿದ್ದರು. ಆದರೀಗ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪ್ರತಿಪಕ್ಷ ನಾಯಕನ ಆಯ್ಕೆ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.

    ಇನ್ನು, ರಾಜ್ಯ ನಾಯಕರನ್ನು ಈ ಬಗ್ಗೆ ವಿಚಾರಿಸಿದರೆ ದೆಹಲಿ ಕಡೆ ಬೊಟ್ಟುಮಾಡಿ ನುಣುಚಿಕೊಳ್ಳುತ್ತಾರೆ. ಬೂತ್ ಅಧ್ಯಕ್ಷರು, ಬಿಎಲ್​ಎ-2 ಜತೆ ಸಂವಾದ, ವಿಭಜನ್ ವಿಭೀಷಕ್ ದಿವಸ್, ಶಂಖನಾದ ಅಭಿಯಾನ, ಮೇರಿ ಮಾಟಿ ಮೇರಾ ದೇಶ ಅಭಿಯಾನ್ ಸೇರಿ ವಿವಿಧ ಚಟುವಟಿಕೆ ನಡೆಸಲಾಗುತ್ತಿದೆ. ಇವೆಲ್ಲ ಲೋಕಸಭೆ ಚುನಾವಣೆ ತಯಾರಿ ಭಾಗವೇ ಆಗಿದೆ. ಸರಿಯಾದ ನಾಯಕತ್ವ ಇಲ್ಲದೇ ಹೋದರೆ ಕಾರ್ಯಕ್ರಮಕ್ಕೆ ಮಹತ್ವವೇ ಇರುವುದಿಲ್ಲ. ಯಾರೋ ಸೂಚನೆ ಕೊಟ್ಟರು, ನಾವು ಕಾರ್ಯಕ್ರಮ ಮಾಡಿದ್ದೇವೆ ಅಥವಾ ಮಾಡಿಸಿದ್ದೇವೆ ಅಷ್ಟೇ ಎಂಬಂತಾಗುತ್ತದೆ ಎಂದು ಪಕ್ಷದ ಮುಖಂಡರೊಬ್ಬರು ವಿಜಯವಾಣಿಗೆ ತಿಳಿಸಿದರು.

    ಕಾಂಗ್ರೆಸ್ ತಯಾರಿ: ಲೋಕಸಭೆ ಕ್ಷೇತ್ರವಾರು ಮಾಹಿತಿ ತರಿಸಿಕೊಂಡಿದ್ದು, ಕಾರ್ಯಕರ್ತರನ್ನು ಸಕ್ರಿಯವಾಗಿಡುವ ಯೋಜನೆ ಕಾಂಗ್ರೆಸ್​ನಲ್ಲಿ ಸಿದ್ಧವಾಗುತ್ತಿದೆ. ಕ್ಷೇತ್ರದ ಸ್ಥಿತಿಗತಿ ಅಧ್ಯಯನ ನಡೆದಿದ್ದು, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಅವಲೋಕನಗಳು ನಡೆದಿವೆ. ಸರ್ಕಾರದ ಗ್ಯಾರಂಟಿ ಯೋಜನೆಯನ್ನೇ ಬಂಡವಾಳವಾಗಿಸಲು ಶಾಸಕರು, ಸಚಿವರಿಗೆ ಸೂಚನೆ ಕೊಡಲಾಗಿದೆ.

    ಅತ್ತೂ ಕರೆದು ಔತಣ: ಬಿಜೆಪಿ ದೆಹಲಿ ನಾಯಕರಿಗೆ ಅತ್ತೂ ಕರೆದು ಔತಣಕ್ಕೆ ಹೇಳಿಸಿಕೊಳ್ಳುವ ಸ್ಥಿತಿಗೆ ರಾಜ್ಯ ನಾಯಕರು ತಲುಪಿದ್ದಾರೆ. ವಿಧಾನಸಭಾ ಚುನಾವಣೆ ಸೋಲಿನ ನಂತರ ದೆಹಲಿ ನಾಯಕರು ಕರೆದಿಲ್ಲ ಎಂಬ ಟೀಕೆ-ಟಿಪ್ಪಣಿಯಿಂದ ಹೊರಬರುವುದಕ್ಕಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದರು. ಹೇಗಾದರೂ ಮಾಡಿ ವರಿಷ್ಠರ ಭೇಟಿ ಮಾಡಲು ಕಾಲಾವಕಾಶ ಪಡೆಯಲೆಂದು, ಸಂಸದರು ಹೇಳಿದ್ದಕ್ಕೆ ದೆಹಲಿಗೆ ಬಂದಿದ್ದಾಗಿ ತೇಪೆಯನ್ನೂ ಹಚ್ಚಿದರು. ಅಂತಿಮವಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಭೇಟಿಗೆ ಎರಡು ದಿನ ಕಾಯಬೇಕಾಯಿತು. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೂರನೇ ದಿನ ಭೇಟಿಗೆ ಅವಕಾಶ ನೀಡಿದರು. ಒಟ್ಟಾರೆ, ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಸೋಲು ದೆಹಲಿ ನಾಯಕರಿಗೆ ಮರ್ವಘಾತವೇ ನೀಡಿದಂತಿದ್ದು, ಇದು ರಾಜ್ಯ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲಿ ತೋರ್ಪಟ್ಟಿದೆ.

    ಬಿಜೆಪಿ ವಾದವೇನು?: ಚುನಾವಣೆ ತಯಾರಿಗೆ ಸಂಘಟನಾ ಕಾರ್ಯದರ್ಶಿ, ವಿಭಾಗ, ಜಿಲ್ಲಾ ಪ್ರಭಾರಿಗಳ ಸಭೆ ನಡೆದಿದೆ. ಸಂಘಟನೆ ಸಕ್ರಿಯಗೊಳಿಸಲು ನಾಲ್ಕು ಸಮಿತಿ ರಚಿಸಲಾಗಿದೆ. ಈಗಾಗಲೇ 25 ಕ್ಷೇತ್ರಗಳಲ್ಲಿ ಪಕ್ಷದ ಸಂಸದರೇ ಇದ್ದಾರೆ. ಲೋಕಸಭೆ ಚುನಾವಣೆ ರಾಷ್ಟ್ರೀಯ ವಿಚಾರದ ದೃಷ್ಟಿಕೋನದಲ್ಲಿ ನಡೆಯಲಿದೆ. ಅಲ್ಲದೇ ರಾಜ್ಯ ಸರ್ಕಾರದ ವಿರುದ್ಧ ಆರಂಭದಲ್ಲೇ ಅಪಸ್ವರ, ಜನರಲ್ಲಿ ವಿಶ್ವಾಸ ಇಳಿಮುಖವಾಗುತ್ತಿದೆ ಎನ್ನುವುದು ಬಿಜೆಪಿ ನಾಯಕರ ವಾದ.

    ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts