More

  ಮುಖ್ಯಕೇಂದ್ರವಾಗಿದ್ದ ಮುಳ್ಳುಸೋಗೆ

  ಕೆ.ಎಸ್.ನಾಗೇಶ್ ಕುಶಾಲನಗರ
  ಕುಶಾಲನಗರ ಮುಖ್ಯ ಪಟ್ಟಣವಾಗಿ ಮಾರ್ಪಾಡಾಗುವ ಮೊದಲು ಪ್ರಮುಖ ಕೇಂದ್ರವಾಗಿ ಗುರುತಿಸಿಕೊಂಡಿದ್ದ ಮುಳ್ಳುಸೋಗೆ ಅನೇಕ ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

  ವಿವಿಧ ಜಾತಿ ಜನಾಂಗದವರು ಒಟ್ಟಾಗಿ ನೆಲೆಸುವ ಮೂಲಕ ಭಾವೈಕ್ಯತೆಗೆ ಹೆಸರಾಗಿತ್ತು. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸುವ ಮೂಲಕ ಊರಿನೆಲ್ಲೆಡೆ ಸಂಭ್ರಮ ಮನೆಮಾಡುತ್ತಿತ್ತು. ಎರಡು ವರ್ಷಕ್ಕೊಮ್ಮೆ ಗ್ರಾಮ ದೇವತೆ ದೊಡ್ಡಮ್ಮ ತಾಯಿಯ ಉತ್ಸವ ಅದ್ದೂರಿಯಾಗಿ ನಡೆಸಲಾಗುತ್ತಿತ್ತು. ಪ್ರತಿ ಮನೆಗೆ ದೂರದೂರುಗಳಿಂದ ನೆಂಟರಿಸ್ಟರು, ಬಂಧುಗಳು ಬಂದು ಸಂಭ್ರಮಿಸುತ್ತಿದ್ದರು.

  ಗ್ರಾಮದಲ್ಲಿ ಉಂಟಾದ ಸಣ್ಣ-ಪುಟ್ಟ ಕಲಹಗಳು, ವ್ಯಾಜ್ಯಗಳು ಪೊಲೀಸ್ ಠಾಣಾ ಮೆಟ್ಟಿಲೇರುವುದೇ ವಿರಳವಾಗಿದ್ದವು. ಎಲ್ಲವೂ ಗ್ರಾಮದ ಪ್ರಮುಖರ, ಹಿರಿಯರ ಸಮ್ಮುಖದಲ್ಲಿ ಬಗೆಹರಿದು ಹೋಗುತ್ತಿದ್ದವು.

  ಹಿಂದೆ ಪಟೇಲರ ಮುಂದಾಳತ್ವದಲ್ಲಿ ದೊಡ್ಡಮ್ಮ ತಾಯಿಯ ದೇಗುಲ ಮುಂಭಾಗದಲ್ಲಿ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲಾಗುತ್ತಿತ್ತು. ಆದರೆ, ಪಟ್ಟಣ ಬೆಳೆದಂತೆ ಪರಿಸ್ಥಿತಿ ಹಾಗೆ ಉಳಿದಿಲ್ಲ.

  ಮುಳ್ಳುಸೋಗೆ ಗ್ರಾಮ ಬಹುತೇಕ ಈಗ ಕುಶಾಲನಗರ ಪಟ್ಟಣದಲ್ಲಿ ಒಂದಾಗಿ ಹೋಗಿದೆ. ಅಭಿವೃದ್ಧಿಹೊಂದಿದ ಬಳಿಕ ಗ್ರಾಮದಲ್ಲಿನ ವಾತಾವರಣವೂ ಬದಲಾಗಿ ಹೋಗಿದೆ. ಪ್ರೀತಿ ವಿಶ್ವಾಸ ದೂರವಾಗಿ ಒಬ್ಬರಿಗೊಬ್ಬರಿಗೆ ನಂಬಿಕೆಯೂ ದೂರವಾಗಿದೆ. ಪ್ರತಿ ವಿಷಯಕ್ಕೂ ರಾಜಕೀಯ ನುಸುಳಿ ಸಾಮಾಜಿಕ ವಾತಾವರಣ ಬದಲಾವಣೆಯಾಗಿದೆ.

  ಜಮೀನುಗಳು ಲೇಔಟ್‌ಗಳಾಗಿ ಬದಲಾವಣೆ ಹೊಂದಿವೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಕ್ಕರೂ, ಮೌಲ್ಯಗಳು ಉಳಿದಿಲ್ಲ. ಎಲ್ಲವೂ ಲೆಕ್ಕಾಚಾರ, ರಾಜಕೀಯವಾಗಿ ಬಿಟ್ಟಿದೆ ಎಂದು ಗ್ರಾಮದ ಹಿರಿಯರು ಬೇಸರ ವ್ಯಕ್ತಪಡಿಸುತ್ತಾರೆ.

  ಹಿಂದೆ ಗ್ರಾಮದ ಪ್ರತಿ ಮನೆಯಲ್ಲೂ 8ರಿಂದ 10 ಹಸುಗಳನ್ನು ಸಾಕಲಾಗುತ್ತಿದ್ದು, ಕೊಟ್ಟಿಗೆಗಳಿದ್ದವು. ಪ್ರತಿ ಮನೆಯಲ್ಲೂ ಹೇರಳವಾಗಿ ಹಾಲು, ಗೊಬ್ಬರ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಕೊಟ್ಟಿಗೆಗಳು ಕೂಡ ಮನೆಗಳಾಗಿ ಮಾರ್ಪಾಡಿವೆ ಎಂಬುದು ವಿಪರ್ಯಾಸವಾಗಿದೆ.

  ಚಿತ್ರಣವೇ ಬದಲಾಗಿದೆ: ಮುಳ್ಳುಸೋಗೆ ಗ್ರಾಮದಲ್ಲಿ ಸುಮಾರು ನೂರು ಮನೆಗಳಿದ್ದು, ವಿವಿಧ ಜಾತಿ, ಜನಾಂಗದವರು ನೆಲೆಸಿದ್ದಾರೆ. ಹಿಂದೆ ಕುಶಾಲನಗರ ಭಾಗಕ್ಕೆ ಮುಳ್ಳುಸೋಗೆ ಗ್ರಾಮವೇ ಪ್ರಮುಖ ಕೇಂದ್ರವಾಗಿದೆ. ಕಂದಾಯ ಇಲಾಖೆಯ ದಾಖಲೆಯ ಪ್ರಕಾರ ಈಗಲೂ ಮುಳ್ಳುಸೋಗೆ ಪಟ್ಟಣ ಎಂದೇ ನಮೂದಾಗಿದೆ. ಹಿಂದೆ ಹಳ್ಳಿಯ ಮಾದರಿಯಲ್ಲಿ ಇದ್ದ ಸಣ್ಣ ರಸ್ತೆಗಳು ಈಗ ದೊಡ್ಡ-ದೊಡ್ಡ ಕಾಂಕ್ರೀಟ್ ರಸ್ತೆಗಳಾಗಿ ಮಾರ್ಪಾಡಾಗಿವೆ. ಒಟ್ಟಿನಲ್ಲಿ ಗ್ರಾಮದ ಪೂರ್ಣ ಚಿತ್ರಣವೇ ಬದಲಾಗಿದೆ.

  ಅಧಿಕೃತ ಗ್ರಾಮ ಇಲ್ಲ: ಹಿಂದೆ ದಲಿತ ಜನಾಂಗದವರೇ ಹೆಚ್ಚಾಗಿ ನೆಲೆಸಿದ್ದ ಗ್ರಾಮವಾಗಿದ್ದ ಮುಳ್ಳುಸೋಗೆ, ಪಟ್ಟಣ ಬೆಳೆಯುತ್ತಿದ್ದಂತೆ ಇತರ ಎಲ್ಲ ಸಮುದಾಯದವರು ನೆಲೆಸುವಂತಾಗಿದೆ. ಪ್ರತೇಕವಾಗಿದ್ದ ಕಾಲನಿ ಈಗ ಪಟ್ಟಣದ ಹೃದಯಭಾಗವಾಗಿ ಮಾರ್ಪಾಡಾಗಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯಿಂದ ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸುವ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿಯನ್ನು ವಿಲೀನ ಮಾಡಿಕೊಳ್ಳಲಾಯಿತು. ಈಗ ಅಧಿಕೃತವಾಗಿ ಮುಳ್ಳುಸೋಗೆ ಗ್ರಾಮ ಇಲ್ಲದಂತಾಗಿದೆ.

  ಎರಡು ವರ್ಷಕ್ಕೊಮ್ಮೆ ನಡೆಯುವ ದೊಡ್ಡಮ್ಮ ತಾಯಿಯ ಉತ್ಸವದಲ್ಲಿ ದಲಿತರು, ಒಕ್ಕಲಿಗರು, ಲಿಂಗಾಯತರು, ಮುಸ್ಲಿಂ, ಕ್ರೈಸ್ತರು ಎಲ್ಲರೂ ಪಾಲ್ಗೊಳ್ಳುತ್ತಾರೆ. ಗ್ರಾಮದಲ್ಲಿ ಒಂದು ಪ್ರಾಥಮಿಕ ಶಾಲೆ ಇದೆ. ನೂರಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts