More

    ಬಡತನ ಅಳತೆಗೋಲು, ಬಹುಮುಖಿ ಆಯಾಮ: ಭಾರತದ ಬಡವರ ಸಂಖ್ಯೆಯಲ್ಲಿ 13.5 ಕೋಟಿ ಇಳಿಮುಖ

    2019-21ರವರೆಗಿನ ಐದು ವರ್ಷಗಳ ಅವಧಿಯಲ್ಲಿ ಅಂದಾಜು 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ ಹೇಳುತ್ತದೆ.

    ಬಡವರು ಯಾರು?

    ಈ ಪ್ರಶ್ನೆಗೆ ಸರಳ ಉತ್ತರವೆಂದರೆ ಆದಾಯ ಕಡಿಮೆ ಇರುವವರು ಎಂಬುದು. ಇದೇ ಮಾನದಂಡವನ್ನು ಆಧರಿಸಿ ಈ ಹಿಂದಿನಿಂದಲೂ ಬಡತನವನ್ನು ಅಳೆಯಲು ಆದಾಯದ ಏಕೈಕ ಸೂಚಕವನ್ನೇ ಕೇಂದ್ರೀಕರಿಸಿಕೊಂಡು ಬರಲಾಗಿದೆ. ಅಂದರೆ, ವಿತ್ತೀಯ ಮತ್ತು ಬಳಕೆ ಸಾಮರ್ಥ್ಯದ ಅಂಶಗಳು ಮಾತ್ರ ಬಡತನ ಅಳೆಯುವ ಮಾನದಂಡಗಳಾಗಿದ್ದವು. ಹೀಗಾಗಿ, ವಿತ್ತೀಯವಲ್ಲದ ಇತರ ಅಂಶಗಳ ಕೊರತೆಯು ಜೀವನಮಟ್ಟದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬುದನ್ನು ಗುರುತಿಸಲು ಈ ಮಾನದಂಡಗಳು ವಿಫಲವಾಗಿವೆ ಎಂಬ ಟೀಕೆ ಕೇಳಿಬರುತ್ತಿತ್ತು.

    ಈ ಹಿನ್ನೆಲೆಯಲ್ಲಿ ಭಾರತದ ನೀತಿ ಆಯೋಗವು ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ಮಾದರಿಯಲ್ಲಿ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವನ್ನು ಅಳವಡಿಸಿಕೊಂಡು ವರದಿ ಸಿದ್ಧಪಡಿಸಿದೆ. ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕವನ್ನು ಆಕ್ಸ್​ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಇನಿಶಿಯೇಟಿವ್ (ಒಪಿಎಚ್​ಐ) ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ) ಜಂಟಿಯಾಗಿ ರೂಪಿಸಿವೆ. ಇದು ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದಲ್ಲಿನ ಅಭಾವಗಳನ್ನು ಗಮನಿಸುತ್ತದೆ.

    ಕೇಂದ್ರ ಸರ್ಕಾರದ ವಿವಿಧ ಕ್ಷೇತ್ರಗಳ ತಜ್ಞರುಗಳನ್ನು ಒಳಗೊಂಡ ತಂಡವಾದ ನೀತಿ ಆಯೋಗವು 2021ರ ನವೆಂಬರ್​ನಲ್ಲಿ ಭಾರತದ ಮೊದಲ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕ ಕುರಿತ ಅಡಿಪಾಯದ ವರದಿಯನ್ನು ಪ್ರಕಟಿಸಿದೆ. ಒಪಿಎಚ್​ಐ ಮತ್ತು ಯುಎನ್​ಡಿಪಿ ಇದರ ದರ ತಾಂತ್ರಿಕ ಪಾಲುದಾರರಾಗಿದ್ದರು.

    ಸಾಮಾನ್ಯ ಅಳತೆಗಳಿಗಿಂತ ಇದು ಹೇಗೆ ಭಿನ್ನ?

    ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ರೀತಿಯಲ್ಲಿ, ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಆರೋಗ್ಯ, ಶಿಕ್ಷಣ ಮತ್ತು ಜೀವನ ಮಟ್ಟ- ಈ ಮೂರು ಸಮಾನ ತೂಕದ ಆಯಾಮಗಳನ್ನು ಹೊಂದಿದೆ. 12 ಸೂಚಕಗಳು ಈ ಆಯಾಮಗಳನ್ನು ಪ್ರತಿನಿಧಿಸುತ್ತವೆ. ಇವುಗಳಲ್ಲಿ ಪೌಷ್ಟಿಕತೆ, ಮಗು ಮತ್ತು ಹದಿಹರೆಯದವರ ಮರಣ, ತಾಯಿಯ ಆರೋಗ್ಯ, ಶಾಲಾ ಶಿಕ್ಷಣ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಆಸ್ತಿಗಳು ಮತ್ತು ಬ್ಯಾಂಕ್ ಖಾತೆಗಳು ಸೇರಿವೆ. ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಮೊದಲನೇ ವರದಿಯು 2015-16ರ ನಡುವಿನ ಅವಧಿಯ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯನ್ನು (ಎನ್​ಎಫ್​ಎಚ್​ಎಸ್) ಆಧರಿಸಿದೆ. ಇದೇ ರೀತಿ ಎರಡನೇ ವರದಿಯು 2019-21ರ ನಡುವಿನ ಅವಧಿಯ ಎನ್​ಎಫ್​ಎಚ್​ಎಸ್ ಆಧರಿಸಿದೆ. 2015-16ರ ಅವಧಿಯ ಎನ್​ಎಫ್​ಎಚ್​ಎಸ್ 4 ಮತ್ತು 2019-21ರ ಅವಧಿಯ ಎನ್​ಎಫ್​ಎಚ್​ಎಸ್ 5 ಈ ಎರಡೂ ಸಮೀಕ್ಷೆಗಳ ನಡುವಿನ ವಿವರಗಳನ್ನು ಹೋಲಿಕೆಯ ಮೂಲಕ ಬಹುಆಯಾಮದ ಬಡತನವನ್ನು ಕಡಿಮೆ ಮಾಡುವಲ್ಲಿ ಭಾರತವು ಸಾಧಿಸಿದ ಪ್ರಗತಿಯನ್ನು ಕಂಡುಕೊಳ್ಳಲಾಗಿದೆ. ಇದನ್ನು ಆಧರಿಸಿಯೇ ನವೆಂಬರ್ 2021ರಲ್ಲಿ ಬಿಡುಗಡೆಯಾದ ಭಾರತದ ರಾಷ್ಟ್ರೀಯ ಬಹುಆಯಾಮದ ಬಡತನ ಸೂಚ್ಯಂಕವು ಅಡಿಪಾಯದ ವರದಿಯನ್ನು ರೂಪಿಸಲಾಗಿದೆ. 2030ರ ವೇಳೆಗೆ ಬಡತನ ಪ್ರಮಾಣವನ್ನು ಇನ್ನೂ ಅರ್ಧದಷ್ಟು ಕಡಿಮೆ ಮಾಡುವ ಗುರಿಯನ್ನು ಭಾರತ ಹೊಂದಿದೆ.

    ಯುಎನ್​ಡಿಪಿ ವರದಿಯಿಂದಲೂ ದೃಢೀಕರಣ: ಕಳೆದ ಜುಲೈ ತಿಂಗಳ ಆರಂಭದಲ್ಲಿ ತನ್ನ ಜಾಗತಿಕ ಬಹುಆಯಾಮದ ಬಡತನ ಸೂಚ್ಯಂಕ ವರದಿಯನ್ನು ಯುಎನ್​ಡಿಪಿ ಬಿಡುಗಡೆ ಮಾಡಿದೆ. ಭಾರತದಲ್ಲಿ 15 ವರ್ಷಗಳ ಅವಧಿಯಲ್ಲಿ (2005-06 ಮತ್ತು 2019-21ರ ನಡುವೆ) ಅಂದಾಜು 41.5 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ಈ ವರದಿ ಹೇಳಿದೆ. ಈ ಮೂಲಕ ಬಡತನ ಕಡಿಮೆಯಾಗಿರುವುದು ವಿಶ್ವ ಸಂಸ್ಥೆ ವರದಿ ಕೂಡ ದೃಢಪಡಿಸಿದೆ.

    ಪ್ರಗತಿಗೆ ಕಾರಣಗಳೇನು?: ಭಾರತದಲ್ಲಿ ಬಹುಆಯಾಮದ ಬಡತನ ಪ್ರಮಾಣ ಕಡಿಮೆಯಾಗಿರುವುದರ ಶ್ರೇಯಸ್ಸನ್ನು ನೀತಿ ಆಯೋಗದ ವರದಿಯು ಸರ್ಕಾರದ ಉದ್ದೇಶಿತ ನೀತಿಗಳು, ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡುತ್ತದೆ. ಶಿಕ್ಷಣ, ಪೋಷಣೆ, ನೀರು, ನೈರ್ಮಲ್ಯ, ಅಡುಗೆ ಇಂಧನ, ವಿದ್ಯುತ್ ಮತ್ತು ವಸತಿ ಮೊದಲಾದ ನಿರ್ಣಾಯಕ ಕ್ಷೇತ್ರಗಳಲ್ಲಿ ಹೂಡಿಕೆಯ ಮೇಲೆ ಸರ್ಕಾರದ ಗಮನವು ಈ ಸಕಾರಾತ್ಮಕ ಫಲಿತಾಂಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಪ್ರಮುಖ ಸರ್ಕಾರಿ ಯೋಜನೆಗಳಾದ ಸ್ವಚ್ಛ ಭಾರತ್ ಮಿಷನ್ , ಜಲ ಜೀವನ್ ಮಿಷನ್ , ಪೋಶಣ್ ಅಭಿಯಾನ, ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ), ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮುಂತಾದವುಗಳು ಈ ಪ್ರಗತಿಗೆ ಗಣನೀಯ ಕೊಡುಗೆ ನೀಡಿವೆ ಎಂದು ನೀತಿ ಆಯೋಗ ಹೇಳಿದೆ.

    ಬಹು ಆಯಾಮದ ಬಡತನ ವರದಿಯ ಅಂಶಗಳು

    • ಬಹು ಆಯಾಮದ ಬಡತನದ ನೀತಿ ಆಯೋಗದ ವರದಿಯ ಅನುಸಾರವಾಗಿ ಎಲ್ಲ 12 ಸೂಚಕಗಳಲ್ಲಿ ಭಾರತವು ಪ್ರಗತಿಯನ್ನು ದಾಖಲಿಸಿದೆ.
    • ಭಾರತದ ರಾಷ್ಟ್ರೀಯ ಬಹು ಆಯಾಮದ ಬಡತನದ ಮೌಲ್ಯವು ಅಂದಾಜು 0.117 ರಿಂದ 0.066ಕ್ಕೆ, ಅಂದರೆ ಬಹುತೇಕವಾಗಿ ಅರ್ಧದಷ್ಟು ಕಡಿಮೆಯಾಗಿದೆ.
    • ಬಡತನದಲ್ಲಿರುವವರ ಜನಸಂಖ್ಯೆಯ ಪ್ರಮಾಣವು 2015-16 ಮತ್ತು 2019-21 ರ ನಡುವೆ ಶೇಕಡಾ 24.85 ರಿಂದ ಶೇಕಡಾ 14.96ಕ್ಕೆ ಕಡಿಮೆಯಾಗಿದೆ. ಈ ಶೇಕಡಾ 9.89 ಅಂಕಗಳ ಇಳಿಕೆಯು 2021ರಲ್ಲಿ ಅಂದಾಜಿಸಿದ ಜನಸಂಖ್ಯೆಯ ಅನುಸಾರವಾಗಿ, ಈ ಐದು ವರ್ಷಗಳ ಅವಧಿಯಲ್ಲಿ ಅಂದಾಜು 135.5 ದಶಲಕ್ಷ (13.5 ಕೋಟಿ) ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ಸೂಚಿಸುತ್ತದೆ.
    • ಬಹುಆಯಾಮದ ಬಡತನದಲ್ಲಿ ಇರುವ ಜನರಲ್ಲಿ ಸರಾಸರಿ ಅಭಾವವನ್ನು ಅಳೆಯುವ ಬಡತನದ ತೀವ್ರತೆಯು ಸಹ ಶೇಕಡಾ 47.14 ರಿಂದ ಶೇಕಡಾ 44.39 ಕ್ಕೆ ಕಡಿಮೆಯಾಗಿದೆ.
    • ಗ್ರಾಮೀಣ ಪ್ರದೇಶಗಳಲ್ಲಿ ಬಡತನದ ಪ್ರಮಾಣವು ಶೇಕಡಾ 32.59 ರಿಂದ ಶೇಕಡಾ 19.28ಕ್ಕೆ ಇಳಿಕೆಯಾಗಿದೆ.
    • ನಗರ ಪ್ರದೇಶಗಳಲ್ಲಿ ಕೂಡ ಬಡತನದ ಪ್ರಮಾಣವು ಶೇಕಡಾ 8.65 ರಿಂದ ಶೇಕಡಾ 5.27ಕ್ಕೆ ಕಡಿಮೆಯಾಗಿದೆ.
    • ಉತ್ತರ ಪ್ರದೇಶದಲ್ಲಿ 3.43 ಕೋಟಿ ಜನರು ಬಹುಆಯಾಮದ ಬಡತನದಿಂದ ಹೊರಬರುವುದರೊಂದಿಗೆ ಅತಿಹೆಚ್ಚಿನ ಸಂಖ್ಯೆಯಲ್ಲಿ ಬಡತನ ಇಳಿಮುಖ ದಾಖಲಿಸಿದ ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಬಿಹಾರ (2.25 ಕೋಟಿ ಬಡವರ ಸಂಖ್ಯೆ ಇಳಿಮುಖ) ಮತ್ತು ಮಧ್ಯಪ್ರದೇಶ (1.36 ಕೋಟಿ ಬಡವರ ಸಂಖ್ಯೆ ಇಳಿಕೆ) ರಾಜ್ಯಗಳಿವೆ.

     

    ಡಾ.ರಾಜ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರ ಸಾವು; ಕಾರಣ ತಿಳಿಯಲು ಸದ್ಯದಲ್ಲೇ ಅಷ್ಟಮಂಗಲ ಪ್ರಶ್ನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts