

Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್ ರಜಪುತ್ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್ನಲ್ಲಿರಿಸಿ, ಅದರ ಮೇಲೆ ಸಿಮೆಂಟ್ನಿಂದ ಮುಚ್ಚಿಟ್ಟ ಘಟನೆ ಇಡೀ ಮೀರತ್ ನಗರ ನಿವಾಸಿಗಳನ್ನೇ ಬೆಚ್ಚಿಬೀಳಿಸಿದೆ.
ಪ್ರಸ್ತುತ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್, ಪ್ರತ್ಯೇಕ ಸೆಲ್ಗಳಲ್ಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಇಬ್ಬರೂ ಒಬ್ಬರನೊಬ್ಬರು ಮಾತನಾಡಿಸದೆ ಮೌನಕ್ಕೆ ಶರಣಾಗಿದ್ದು, ಪೊಲೀಸ್ ಅಧಿಕಾರಿಗಳ ಬಳಿ ಹೆಚ್ಚೇನೂ ಕೇಳದೆ, ಹೇಳದೆ, ತಿಂಡಿ-ಊಟ ತೊರೆದು ಸುಮ್ಮನಿದ್ದಾರೆ. ಈ ಕುರಿತಂತೆ ಜೈಲಾಧಿಕಾರಿಗಳು ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ನಿಯಮದಂತೆ ಇಬ್ಬರೂ ಪ್ರತ್ಯೇಕ ಸೆಲ್ನಲ್ಲಿದ್ದಾರೆ. ಸಾಹಿಲ್ ಮತ್ತು ಮುಸ್ಕಾನ್ ಒಬ್ಬರನ್ನೊಬ್ಬರು ಮಾತನಾಡಿಸುವ ಪ್ರಯತ್ನ ಕೂಡ ಮಾಡಿಲ್ಲ. ಮುಖ್ಯವಾಗಿ ಇಲ್ಲಿ ಅದು ಸಾಧ್ಯವಿಲ್ಲ. ವೈದ್ಯಕೀಯ ಪರೀಕ್ಷೆಗಳು ಅವರಿಬ್ಬರು ಮಾದಕ ವ್ಯಸನಿಗಳು ಎಂಬುದನ್ನು ಸಾಬೀತುಪಡಿಸಿದೆ. ಕೆಲವು ರೋಗ ಲಕ್ಷಣಗಳಿಂದ ನರಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಚಿಕಿತ್ಸೆ ಕೂಡ ಕೊಡಿಸಲಾಗಿದೆ" ಎಂದು ಹಿರಿಯ ಬಂಧಿಖಾನೆ ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ ಹೇಳಿದ್ದಾರೆ.
ಇದೆಲ್ಲದರ ಮಧ್ಯೆ ಹಿರಿಯ ಅಧಿಕಾರಿಗಳ ಬಳಿ ವಿಶೇಷ ಮನವಿ ಮಾಡಿಕೊಂಡಿರುವ ಮುಸ್ಕಾನ್, "ಈ ಕೇಸ್ನಲ್ಲಿ ನನ್ನ ಪರ ವಾದಿಸಲು ಕುಟುಂಬಸ್ಥರು ಯಾವ ವಕೀಲಯರನ್ನೂ ನೇಮಕ ಮಾಡುವುದಿಲ್ಲ. ಹೀಗಾಗಿ ಕೊಲೆ ಪ್ರಕರಣದಲ್ಲಿ ನನ್ನ ಪರ ವಾದಿಸಲು ಒಬ್ಬ ಸರ್ಕಾರಿ ವಕೀಲರ ಅಗತ್ಯವಿದೆ. ದಯವಿಟ್ಟು ಇದರ ವ್ಯವಸ್ಥೆಗೆ ಮುಂದಾಗಿ" ಎಂದು ಕೇಳಿಕೊಂಡಿರುವುದಾಗಿ ವರದಿಯಾಗಿದೆ,(ಏಜೆನ್ಸೀಸ್).
ಉತ್ತರಪ್ರದೇಶ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್ನಲ್ಲಿ ಸಿಮೆಂಟ್ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಈ ವೇಳೆ ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು. ಅಂತಿಮವಾಗಿ ಡ್ರಮ್ನಲ್ಲಿದ್ದ ಸಿಮೆಂಟ್ ಅನ್ನು ಹೊಡೆದಾಗ ಸೌರಭ್ ಮೃತದೇಹ ಪತ್ತೆಯಾಯಿತು.