

ಮಂಗಳೂರು: ದಲಿತ ದೌರ್ಜನ್ಯ, ಅತ್ಯಾಚಾರ, ಅತ್ಯಾಚಾರಯತ್ನದಂತಹ ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಪಡಿಸುವಂತಿಲ್ಲ. ಎಫ್ಐಆರ್ ದಾಖಲಿಸಿ ಕಾನೂನು ಪ್ರಕಾರವೇ ಪೂರಕ ಪ್ರಕ್ರಿಯೆ ನಡೆಯಬೇಕು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ ಗೋಯಲ್ ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ, ಎಸ್ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು. ಇಂತಹ ಪ್ರಕರಣಗಳಲ್ಲಿ ದಲಿತ ಮುಖಂಡರು ಕೂಡ ರಾಜಿ ಇತ್ಯರ್ಥಕ್ಕೆ ಪ್ರಯತ್ನಿಸಬಾರದು ಎಂದರು.
ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ ಹಾಗೂ ಪೋಕ್ಸೋ ಕೇಸುಗಳಲ್ಲಿ ಎಸ್ಪಿ ಹಂತದ ಅಧಿಕಾರಿಯೇ ತನಿಖಾಧಿಕಾರಿ ಆಗಿರುತ್ತಾರೆ. ಹಾಗಾಗಿ ಈ ಎರಡು ಪ್ರಕರಣಗಳಿಗೂ ಎಸಿಪಿಯೇ ತನಿಖಾಧಿಕಾರಿ ಆಗಿರುತ್ತಾರೆ ಎಂದು ತಿಳಿಸಿದರು.
ಕೇಸು ದಾಖಲಿಸಲು ಪ್ರತ್ಯೇಕ ವ್ಯವಸ್ಥೆ
ಎಸ್ಸಿ, ಎಸ್ಟಿ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳ ದೂರು ಇನ್ನು ಮುಂದೆ ಸರ್ಕಾರದ ಸೂಚನೆಯಂತೆ ಆಯಾ ಜಿಲ್ಲೆಗಳಲ್ಲಿ ಹೊಸದಾಗಿ ಸ್ಥಾಪನೆಯಾಗುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಠಾಣೆಗಳಲ್ಲಿ ದಾಖಲಾಗಲಿದೆ. ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ ಹಾಗೂ ದ.ಕ. ಜಿಲ್ಲೆಗೆ ಸಂಬಂಧಿಸಿ ಪ್ರಾದೇಶಿಕ ಕಚೇರಿ ಕೂಡ ಮಂಗಳೂರಿನಲ್ಲೇ ಇರಲಿದೆ. ದ.ಕ. ಜಿಲ್ಲೆಯ ಕಚೇರಿಯೂ ಮಂಗಳೂರಿನ ಮೂಡಾ ಕಟ್ಟಡದಲ್ಲೇ ಒಂದೇ ಕಡೆ ಇರಲಿದೆ. ಹಾಲಿ ಕಚೇರಿಯನ್ನು ಪೊಲೀಸ್ ಠಾಣೆಯಾಗಿ ಪರಿವರ್ತಿಸಲು ಸಿದ್ಧತೆ ನಡೆಯುತ್ತಿದೆ. ಸಿಬ್ಬಂದಿ ನೇಮಕ, ಮೂಲಸೌಕರ್ಯಗಳ ಅಳವಡಿಕೆ ಪೂರ್ಣಗೊಂಡು ಏಪ್ರಿಲ್ನಿಂದ ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.