ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟ ಎಂದ ಮಾಯಾವತಿ! ರಾಜಕೀಯ ನಿವೃತ್ತಿ ಬಗ್ಗೆ ಕೊಟ್ಟ ಉತ್ತರವಿದು

ವಿಜಯವಾಣಿ - 2024-01-15T125225.371
Published on

ಹೊಸದಿಲ್ಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ತಮ್ಮ ಪಕ್ಷ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ ಬಹುಜನ ಸಮಾಜ ಪಕ್ಷ (BSP) ಮುಖ್ಯಸ್ಥೆ ಮಾಯಾವತಿ, ತಮ್ಮ ರಾಜಕೀಯ ನಿವೃತ್ತಿ ಬಗ್ಗೆ ಕೂಡ ಮಾತನಾಡಿದ್ದಾರೆ.

"ಬಿಎಸ್‌ಪಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಆದರೆ ಚುನಾವಣೋತ್ತರ ಮೈತ್ರಿಗೆ ಆಯ್ಕೆ ಮುಕ್ತವಾಗಿದೆ. ಉತ್ತರಪ್ರದೇಶದಲ್ಲಿ ನಮ್ಮ ಪಕ್ಷವು ಮತ್ತೊಂದು ಪಾರ್ಟಿಯೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗಳನ್ನು ಎದುರಿಸಿದಾಗ, ಮತಗಳು ಮೈತ್ರಿಗೆ ವರ್ಗಾವಣೆಯಾಗುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು" ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಮಾಯಾವತಿ, ಸೋಮವಾರ 68ನೇ ವರ್ಷಕ್ಕೆ ಕಾಲಿಟ್ಟ ಸಂಭ್ರಮದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು. ಈ ವೇಳೆ ರಾಜಕೀಯದಿಂದ ನಿವೃತ್ತಿಯಾಗುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ ಅವರು, "ಬಿಜೆಪಿ ಜಾತಿವಾದ ಮತ್ತು ಕೋಮುವಾದದ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ಅವರು ಅಧಿಕಾರದಲ್ಲಿ ಇರುವುದನ್ನು ನೋಡಲು ಜನರು ಬಯಸುವುದಿಲ್ಲ" ಎಂದು ನೇರ ವಾಗ್ದಾಳಿ ನಡೆಸಿದರು.

"ಉದ್ಯೋಗ ನೀಡುವ ಬದಲು ಅಲ್ಪ ಪ್ರಮಾಣದ ಉಚಿತ ಪಡಿತರ ಕೊಡುವ ಮೂಲಕ ಜನರನ್ನು ಅವಲಂಬಿತರನ್ನಾಗಿ ಮಾಡುತ್ತಿದೆ" ಎಂದು ಆರೋಪಿಸಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net