

ಮುಂಬೈ: ಕಳೆದ ವರ್ಷ ಅಕ್ಟೋಬರ್ 27ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆದ ವಿದು ವಿನೋದ್ ಚೋಪ್ರಾ ನಿರ್ದೇಶನದ '12 ಫೇಲ್' ಚಿತ್ರವು ಸದ್ದಿಲ್ಲದೇ ಸಿನಿಪ್ರೇಕ್ಷಕರ ಮನಗೆದ್ದು, ತದನಂತರದಲ್ಲಿ ಸಿನಿಪ್ರೇಕ್ಷಕರಿಂದಲೇ ಸ್ವಪ್ರಚಾರ ಪಡೆಯುತ್ತ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಗಳಿಕೆ ಕಂಡಿತು. ಇದರೊಟ್ಟಿಗೆ ವಿಮರ್ಶಕರಿಂದ ಕೂಡ ಭಾರೀ ಪ್ರಶಂಸೆ ಪಡೆದುಕೊಂಡ ಚಿತ್ರವು, ಊರು ಬಿಟ್ಟು ಐಎಎಸ್, ಐಪಿಎಸ್ ಕನಸೊತ್ತು ಬರುವ ಅದೆಷ್ಟೋ ಅಭ್ಯರ್ಥಿಗಳ ಜೀವನಕ್ಕೆ ಸ್ಪೂರ್ತಿ ನೀಡುವ ಚಿತ್ರವಾಗಿ ಹೊರಹೊಮ್ಮಿದೆ.
ಐಪಿಎಸ್ ಅಧಿಕಾರಿಯಾದ ಮನೋಜ್ ಶರ್ಮಾ ಅವರ ಜೀವನಗಾಥೆ ಆಧರಿತ '12 ಫೇಲ್' ಚಿತ್ರಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆಗಳು ಹರಿದುಬಂದಿದ್ದು, ಜಗತ್ತಿನ ಅತೀ ಕಷ್ಟಕರವಾದ ಪರೀಕ್ಷೆ ಎಂದೇ ಕರೆಯಲ್ಪಟ್ಟ ಯುಪಿಎಸ್ಸಿ ಎಕ್ಸಮ್ ಕುರಿತಾದ ವಿಷಯಗಳನ್ನು ಪರೆದೆಯ ಮೇಲೆ ಕಟ್ಟಿಕೊಟ್ಟ ರೀತಿ ಸಿನಿಮಾದ ಯಶಸ್ಸಿಗೆ ಬಲವಾದ ಕಾರಣವಾಯಿತು.
ಐಪಿಎಸ್ ಮನೋಜ್ ಶರ್ಮಾ ಮತ್ತು ಅವರ ಪತ್ನಿ ಶ್ರದ್ಧಾ ಜೋಶಿ ಪಾತ್ರದಲ್ಲಿ ನಟಿಸಿದ ವಿಕ್ರಾಂತ್ ಮಾಸ್ಸೆ ಮತ್ತು ಮೇಧಾ ಶಂಕರ್ ಜೋಡಿ ಪ್ರೇಕ್ಷಕರ ಮನಸೂರೆಗೊಳಿಸಿದ್ದು, ಪ್ರೀತಿ ಮಾಡಿದರೆ ಹೀಗಿರಬೇಕು, ಇವರ ರೀತಿ ಬದುಕಿ ಬಾಳಬೇಕು ಎಂಬ ಅಭಿಪ್ರಾಯವನ್ನು ಮೂಡಿಸಿದ್ದಂತು ನಿಜ.
ಸದ್ಯ ಈ ಸಿನಿಮಾ ಹಿಟ್ ಆದ ಬೆನ್ನಲ್ಲೇ ನಟಿ ಮೇಧಾಗೆ ಸಾಕಷ್ಟು ಆಫರ್ಗಳು ಒಲಿದು ಬರುತ್ತಿದ್ದು, ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ನಡುವೆ ಇತ್ತೀಚಿನ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಟ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮೇಧಾ, "ನನಗೆ ಶಾರುಖ್ ಖಾನ್ ಅವರು ಬಹಳ ಇಷ್ಟವಾಗುತ್ತಾರೆ" ಎಂದರು.
"ನನಗೆ ಎಸ್ಆರ್ಕೆ ತುಂಬ ಇಷ್ಟವಾಗ್ತಾರೆ. ನಾನು ಅವರ ದೊಡ್ಡ ಅಭಿಮಾನಿ. ನನ್ನ ಬಳಿ ಅವರು ನಟಿಸಿದ ಹಲವಾರು ಸಿನಿಮಾಗಳ ಲಿಸ್ಟ್ ಇವೆ. ಅದರಲ್ಲಿ ನೆಚ್ಚಿನ ಚಿತ್ರಗಳು ಎಂದರೆ 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್', 'ಕಲ್ ಹೋ ನಾ ಹೋ' ಸೇರಿದಂತೆ ಮುಂತಾದ ಸಿನಿಮಾಗಳು ನನ್ನ ಫೇವರೇಟ್" ಎಂದಿದ್ದಾರೆ,(ಏಜೆನ್ಸೀಸ್).