Sudeep Max: ಕನ್ನಡ ಚಿತ್ರರಂಗದ ಬಾದ್ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಮ್ಯಾಕ್ಸ್’ (Max) ಇದೇ ಡಿಸೆಂಬರ್ 25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿ, ಸದ್ಯ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿ ಪುಡಿ ಮಾಡುವತ್ತ ಮುನ್ನುಗ್ಗುತ್ತಿದೆ. ಕನ್ನಡದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರಗಳನ್ನು ಸದ್ಯ ಹಿಂದಿಕ್ಕಿರುವ ಸುದೀಪ್ ಮ್ಯಾಕ್ಸ್, ಇಂದು ಕೂಡ ಚಿತ್ರಮಂದಿರಗಳಲ್ಲಿ ಉತ್ತಮ ಗಳಿಕೆಯನ್ನು ಕಂಡಿದೆ.
ಮ್ಯಾಕ್ಸಿಮಮ್ ಮಾಸ್
ಎರಡೂವರೆ ವರ್ಷಗಳ ನಂತರ ಚಿತ್ರಮಂದಿರಗಳಿಗೆ ಮಾಸ್ ಆಗಿ ಎಂಟ್ರಿ ಕೊಟ್ಟಿರುವ ಸುದೀಪ್, ತಮ್ಮ ಅಭಿಮಾನಿಗಳಿಗೆ ಹಾಗೂ ಚಿತ್ರರಸಿಕರಿಗೆ ಭರಪೂರ ಮನರಂಜನೆ ನೀಡುವಲ್ಲಿ ಸಫಲರಾಗಿದ್ದಾರೆ. ಸಿನಿ ವರದಿಗಳ ಪ್ರಕಾರ, 2024ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಲನಚಿತ್ರಗಳ ಪೈಕಿ ‘ಮ್ಯಾಕ್ಸ್’ ಮೊದಲಿಗಿದೆ. ನಿರ್ದೇಶಕ ಉಪೇಂದ್ರ ನಿರ್ದೇಶಿಸಿ, ನಟಿಸಿದ ‘ಯುಐ’ ಚಿತ್ರ ರಿಲೀಸ್ ಆದ ಐದು ದಿನಗಳ ನಂತರ ತೆರೆಗೆ ಅಪ್ಪಳಿಸಿದ ಆ್ಯಕ್ಷನ್-ಥ್ರಿಲ್ಲರ್ ಮ್ಯಾಕ್ಸ್, ಹೆಚ್ಚುವರಿ ಥಿಯೇಟರ್ಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರ ಜತೆಗೆ ಪ್ರೇಕ್ಷಕರನ್ನು ಚಿತ್ರಮಂದಿರ, ಮಲ್ಟಿಪ್ಲೆಕ್ಸ್ನತ್ತ ಕೈಬೀಸಿ ಕರೆಯುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಉತ್ತಮ ಬೆಳವಣಿಗೆಯಾಗಿ ಪರಿಣಮಿಸಿದೆ.
ಲಾಭದ ಗಳಿಕೆ ಬಾಕಿ!
‘ಕೊಯಿಮೊಯ್’ ಸಿನಿ ವರದಿ ಪ್ರಕಾರ, ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಸುದೀಪ್ ಮ್ಯಾಕ್ಸ್ ಚಿತ್ರವು, ಸದ್ಯ ಹೂಡಿರುವ ಬಜೆಟ್‌ನಲ್ಲಿ ಶೇ. 50ರಷ್ಟು ಮಾತ್ರ ಗಳಿಸಿದೆ ಎಂದು ತಿಳಿಸಿದೆ. ಬಾಕ್ಸ್ ಆಫೀಸ್‌ನಲ್ಲಿ ನಿರ್ದೇಶಕ ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಸಿನಿಮಾ ಒಂದು ವಾರದಲ್ಲಿ 32.35 ಕೋಟಿ ರೂ.ಗಳನ್ನು ಗಳಿಸಿದೆ. ಇದು ‘ಪುಷ್ಪ 2’ (ಕನ್ನಡ), ‘ಭೀಮಾ’, ‘ಬಘೀರಾ’ ಮತ್ತು ‘ಮಾರ್ಟಿನ್’ ಚಿತ್ರಗಳನ್ನು ಹಿಂದಿಕ್ಕಿ 2024ರ ಸ್ಯಾಂಡಲ್ವುಡ್ನ ಅತೀ ಹೆಚ್ಚು ಗಳಿಕೆ ಕಂಡ ಚಲನಚಿತ್ರವಾಗಿ ಹೊರಹೊಮ್ಮಿದೆ. ಯುಐಗೆ ಹೋಲಿಸಿದರೆ, ಮ್ಯಾಕ್ಸ್ ಮೊದಲ ವಾರದಲ್ಲಿ ಶೇ.41ರಷ್ಟು ಹೆಚ್ಚಿನ ಕಲೆಕ್ಷನ್ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.
It has been a tremendous response towards #MaxTheMovie from you all ♥️.
1st week closed wth a great numbers, and I wholeheartedly thank you all for this luv.Thank you @Karthik1423, Jayanna nad Yogi for putting ur sould into this.
Thank u, #RocklineVenkatesh, sir… this… pic.twitter.com/Gnkgqmp4Rx— Kichcha Sudeepa (@KicchaSudeep) January 3, 2025
ಮುನ್ನುಗ್ಗಿದ ‘ಮ್ಯಾಕ್ಸ್’
ವರದಿಗಳ ಅನುಸಾರ, ಪ್ರಚಾರ ವೆಚ್ಚವನ್ನು ಸೇರಿದಂತೆ ಒಟ್ಟು 60 ಕೋಟಿ ರೂ.ಗಳ ಅಂದಾಜು ಬಜೆಟ್‌ನಲ್ಲಿ ‘ಮ್ಯಾಕ್ಸ್’ ಚಿತ್ರವನ್ನು ರೂಪಿಸಲಾಗಿದೆ. ಲೆಕ್ಕಾಚಾರದ ಪ್ರಕಾರ, ಪ್ರಸ್ತುತ ಸುದೀಪ್ ಚಿತ್ರವು ಹಾಕಿರುವ ಬಜೆಟ್‌ನಲ್ಲಿ ಈಗ ಶೇ.49.76ರಷ್ಟು ಆದಾಯವನ್ನು ಎತ್ತಿಕೊಂಡಿದೆ. ಪೂರ್ಣಕ್ಕೆ ಇನ್ನೂ 32.65 ಕೋಟಿ ರೂ. ಅಗತ್ಯವಿದ್ದು, ಅದನ್ನು ಗಳಿಸಿದ ನಂತರವೇ ಅಸಲಿ ಆಟ ಅಂದರೆ ಲಾಭದ ಲೆಕ್ಕಾಚಾರ ಶುರುವಾಗುವುದು ಎಂದು ವರದಿ ಉಲ್ಲೇಖಿಸಿದೆ. ಒಟ್ಟಾರೆ ಮ್ಯಾಕ್ಸ್ ಸಿನಿಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸಿ, ಕೌತುಕವನ್ನು ಹೆಚ್ಚಿಸುವಲ್ಲಿ ಯಶಸ್ಸು ಸಾಧಿಸಿದ್ದು, ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿದೆ, (ಏಜೆನ್ಸೀಸ್).