ಟ್ವಿಟರ್​ನಲ್ಲಿ ಮ್ಯಾಕ್ಸಿಮಮ್​ ಟ್ರೆಂಡ್​! ಕುಸಿಯದ 'ಮ್ಯಾಕ್ಸ್'​ ಕ್ರೇಜ್​, ಜಾಲತಾಣದಲ್ಲಿ ಕಿಚ್ಚು ಹೆಚ್ಚಿಸಿದ ಕಿಚ್ಚ | Max Trending

ವಿಜಯವಾಣಿ (25)
Published on

Max Trending: ಕನ್ನಡ ಚಿತ್ರರಂಗದ ಬಾದ್​ಷಾ, ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ‘ಮ್ಯಾಕ್ಸ್’​ (Max) ಇದೇ ಡಿಸೆಂಬರ್​ 25ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಭರ್ಜರಿ ಓಪನಿಂಗ್ ಕಂಡಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿ, ಸದ್ಯ ಬಾಕ್ಸ್ ಆಫೀಸ್​ ದಾಖಲೆಗಳನ್ನು ಪುಡಿ ಪುಡಿ ಮಾಡುವತ್ತ ದಾಪುಗಾಲಿಟ್ಟಿದೆ.

ಭರಪೂರ ಮನರಂಜನೆ

ಕಳೆದ ಎರಡೂವರೆ ವರ್ಷಗಳಿಂದ ತೆರೆ ಮೇಲೆ ಕಾಣಿಸಿಕೊಳ್ಳದ ಸುದೀಪ್​ರನ್ನು ಈಗ ಮ್ಯಾಕ್ಸಿಮಮ್​ ಮಾಸ್​ನಿಂದಲೇ ಕೂಡಿರುವ 'ಮ್ಯಾಕ್ಸ್'​ ಚಿತ್ರದ ಮೂಲಕ ಪರದೆಯಲ್ಲಿ ನೋಡುತ್ತಿರುವ ಸಿನಿರಸಿಕರು, ನಟನ ಆ್ಯಕ್ಷನ್​, ಮಾಸ್​ ಲುಕ್​ಗಳಿಗೆ ಫಿದಾ ಆಗಿದ್ದಾರೆ. ಹೀರೋಯಿನ್​ ಇಲ್ಲದ ಈ ಚಿತ್ರದಲ್ಲಿ ಸುದೀಪ್​ ಅವರ ಅಬ್ಬರ ಪ್ರೇಕ್ಷಕ ವರ್ಗಕ್ಕೆ ಚಿತ್ರದ ಪೂರ ಭರಪೂರ ಮನರಂಜನೆ ನೀಡಿದೆ. ರಿಲೀಸ್ ಆದ ದಿನದಿಂದಲೂ ಇಂದಿನವರೆಗೂ ಟ್ವಿಟರ್​ನಲ್ಲಿ (ಪ್ರಸ್ತುತ ಎಕ್ಸ್​)​ ಟ್ರೆಂಡಿಂಗ್​ ಪಟ್ಟಿಯಲ್ಲಿ ಮ್ಯಾಕ್ಸ್​ ಸ್ಥಾನ ಗಿಟ್ಟಿಸಿಕೊಂಡಿರುವುದು ಮತ್ತೊಂದು ವಿಶೇಷ.

ಭರ್ಜರಿ ಗೆಲುವು

ಐದನೇ ದಿನಕ್ಕೆ ಕಾಲಿಟ್ಟಿರುವ ಸುದೀಪ್ ಮ್ಯಾಕ್ಸ್​, 27.50* ಕೋಟಿ ರೂ. ಗಳಿಕೆ ಕಂಡಿದೆ. ದಿನದ ಅಂತ್ಯದೊಳಗೆ 30 ಕೋಟಿ ತಲುಪಲಿದ್ದು, ಹೊಸ ವರ್ಷದ ದಿನಗಳಲ್ಲಿ ಶೀಘ್ರವೇ 50 ಕೋಟಿ ರೂ. ತಲುಪುವ ಸಾಧ್ಯತೆ ಹಾಗೂ ಭರವಸೆಗಳು ಹೆಚ್ಚಿವೆ. ಪ್ರಸ್ತುತ ಪ್ರೇಕ್ಷಕರಿಂದ ಹೌಸ್​ಫುಲ್ ಆಗ್ತಿರುವ ಚಿತ್ರಮಂದಿರಗಳತ್ತ ಮುಖ ಮಾಡಿರುವ ಸುದೀಪ್​, ಚಿತ್ರದ ಭರ್ಜರಿ ಗೆಲುವಿನಿಂದ ಭಾರೀ ಸಂತಸಗೊಂಡಿದ್ದಾರೆ. ಇದೇ ಖುಷಿಯಲ್ಲಿ ನಿನ್ನೆ (ಡಿ.29) ಬೆಂಗಳೂರಿನ ಜಿಟಿ ಮಾಲ್​ ಸಕ್ಸಸ್​ ಭೇಟಿಯಲ್ಲಿ ಪಾಲ್ಗೊಂಡ ಕಿಚ್ಚ, ತನಗಾಗಿ ಆಗಮಿಸಿದ್ದ ಪ್ರೇಕ್ಷಕ ವರ್ಗ ಹಾಗೂ ಫ್ಯಾನ್ಸ್​ಗಳಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸಿದರು.

ಫ್ಯಾನ್ಸ್​ ಶೋ

ಇನ್ನು ನಾಳೆ (ಡಿ.31) ನರ್ತಕಿ ಚಿತ್ರಮಂದಿರಕ್ಕೆ ಭೇಟಿ ಕೊಡಲಿರುವ ಸುದೀಪ್​, ಅಭಿಮಾನಿಗಳೊಂದಿಗೆ ಮ್ಯಾಕ್ಸ್ ಚಿತ್ರ​ ವೀಕ್ಷಿಸಲಿದ್ದಾರೆ ಎಂಬ ಮಾಹಿತಿ ಈಗ ಅಧಿಕೃತವಾಗಿ ಹೊರಬಿದ್ದಿದೆ. 2024ರ ಕೊನೆಯಲ್ಲಿ ತೆರೆಕಂಡ ಮ್ಯಾಕ್ಸ್​ಗೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ದೊರಕಿದ್ದು, ಚಿತ್ರವನ್ನು ಯಶಸ್ಸಿನತ್ತ ಕೊಂಡೊಯ್ಯವ ಭರವಸೆಯನ್ನು ಪರೋಕ್ಷವಾಗಿ ನೀಡಿದ್ದಾರೆ. ಸದ್ಯ ರಾಜ್ಯಾದ್ಯಂತ ಥಿಯೇಟರ್​ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಹೆಚ್ಚುವರಿ ಬುಕ್ಕಿಂಗ್​ಗಳು ನಡೆಯುತ್ತಿದ್ದು, ಸಿನಿಮಾ ಪರದೆಗಳು ಚಿತ್ರರಸಿಕರಿಂದಲೇ ತುಂಬಿ ತುಳುಕುತ್ತಿರುವುದು ಖುಷಿಯ ಸಂಗತಿ.

ಕನ್ನಡ ಸಿನಿಮಾ ಅಬ್ಬರ

ತೆಲುಗು ಸಿನಿಮಾ 'ಪುಷ್ಪ 2' ಸೃಷ್ಟಿಸಿದ ಟ್ರೆಂಡ್​ ಮತ್ತು ಅಬ್ಬರವನ್ನು ಹಿಂದಿಕ್ಕಿರುವ ಸುದೀಪ್ ಅಭಿನಯದ ಕನ್ನಡ ಸಿನಿಮಾ 'ಮ್ಯಾಕ್ಸ್'​, ಸಿನಿಪ್ರೇಕ್ಷಕರಲ್ಲಿ ಹಾಗೂ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗುತ್ತಿರುವುದು ವಿಶೇಷ. ಕನ್ನಡ ಚಿತ್ರರಂಗದ ಚಿತ್ರಗಳು ಇತರೆ ಭಾಷೆಯ ಸಿನಿಮಾಗಳನ್ನು ಹಿಂದಿಕ್ಕಿ ಮುಂಚೂಣಿಗೆ ಬರುತ್ತಿರುವುದು ಹಾಗೂ ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆಯುತ್ತಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net