ರೋಹಿತ್​ ಶರ್ಮ ಬದಲಿಗೆ ಹಾರ್ದಿಕ್​ ಪಾಂಡ್ಯ! ಚಾಂಪಿಯನ್ಸ್​ ಟ್ರೋಫಿ ಬೆನ್ನಲ್ಲೇ ಬಿಸಿಸಿಐನಿಂದ ಮಹತ್ವದ ನಿರ್ಧಾರ? | Champions Trophy

ವಿಜಯವಾಣಿ (24)
Published on

Champions Trophy: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್​ ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಕಳಪೆ ಪ್ರದರ್ಶನದಿಂದ ಐದನೇ ಹಾಗೂ ಕೊನೆಯ ಟೆಸ್ಟ್​ ಪಂದ್ಯದಿಂದ ಹೊರಗುಳಿದಿರುವ ಕ್ಯಾಪ್ಟನ್ ರೋಹಿತ್ ಶರ್ಮಗೆ ಸದ್ಯ ಹಗ್ಗವೂ ಹಾವಾಗಿದೆ. ಟೀಮ್ ಇಂಡಿಯಾ ನಾಯಕನಾಗಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ಜತೆಗೆ ಕ್ಯಾಪ್ಟನ್ ಜವಾಬ್ದಾರಿ ನಿಭಾಯಿಸುವಲ್ಲಿ ರೋಹಿತ್ ವಿಫಲವಾಗಿದ್ದಾರೆ. ರೋಹಿತ್​ರ ಕಳಪೆ ಪ್ರದರ್ಶನದಿಂದ ಕೆರಳಿರುವ ಮಾಜಿ ಕ್ರಿಕೆಟಿಗರು ಹಾಗೂ ಟೀಮ್ ಇಂಡಿಯಾ ಹೆಡ್​ ಕೋಚ್​, ಐದನೇ ಪಂದ್ಯಕ್ಕೆ ಶರ್ಮರನ್ನು ಕ್ಯಾಪ್ಟನ್​ ಸ್ಥಾನದಿಂದ ಕೈಬಿಟ್ಟು, ವೇಗಿ ಜಸ್ಪ್ರೀತ್ ಬುಮ್ರಾಗೆ ಹಸ್ತಾಂತರಿಸಿದರು. ಇದರಿಂದ ಸ್ಪಷ್ಟವಾಗುತ್ತಿರುವುದು ರೋಹಿತ್​ ಕ್ಯಾಪ್ಟನ್​ ಸ್ಥಾನಕ್ಕೆ ಕುತ್ತು ಬಂದಿದೆ ಎಂಬುದು. ಅದರ ಮುನ್ಸೂಚನೆ ಈಗಾಗಲೇ ಸಿಕ್ಕಿದೆ.

2024ರ ಕೊನೆ ಹಾಗೂ 2025ರ ಆರಂಭ

2024ರ ವರ್ಷ ರೋಹಿತ್ ಶರ್ಮಗೆ ಒಂದು ರೀತಿ ಸಿಹಿ-ಕಹಿ ಅನುಭವ. ವರ್ಷದ ಆರಂಭದಲ್ಲಿ ಸಿಹಿ ಉಂಡ ರೋಹಿತ್, ವರ್ಷದ ಕೊನೆಯಲ್ಲಿ ಮಾತ್ರ ಬೇಸರ ಮುಕ್ತಾಯವನ್ನು ಹೊತ್ತು ಸಾಗಿದ್ದಾರೆ. ಆಸೀಸ್​ ವಿರುದ್ಧದ ಐದು ಟೆಸ್ಟ್​ ಪಂದ್ಯಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಬ್ಯಾಕ್ ಟು ಬ್ಯಾಕ್ ಎಡವುತ್ತಿರುವ ರೋಹಿತ್​, ಈಗ ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ 2025ರ ಕ್ಯಾಪ್ಟನ್ಸಿಯನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿಯೊಂದು ಉಲ್ಲೇಖಿಸಿದೆ. 2024ರ ಕೊನೆ ಹಾಗೂ 2025ರ ಆರಂಭ ಎರಡರಲ್ಲೂ ಶುಭ ಕಾಣದ ಶರ್ಮಗೆ ಸದ್ಯ ಮುಟ್ಟಿದ್ದೆಲ್ಲ ಮಣ್ಣಾಗುತ್ತಿರುವುದು ಬೇಸರದ ಸಂಗತಿ.

ರೋಹಿತ್ ಬದಲಿಗೆ ಹಾರ್ದಿಕ್

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ರೋಹಿತ್ ಶರ್ಮ ಕಳಪೆ ಪ್ರದರ್ಶನ ಮತ್ತು ಕಳಪೆ ಮಟ್ಟದ ಕ್ಯಾಪ್ಟನ್ಸಿ ಈಗ ಬಿಸಿಸಿಐ ಟೇಬಲ್​ ತಲುಪಿದೆ. ಸದ್ಯದ ಮಟ್ಟಿಗೆ ರೋಹಿತ್ ತಮ್ಮ ಟೆಸ್ಟ್​ ನಿವೃತ್ತಿ ಬಗ್ಗೆ ಯಾವುದೇ ಮಾಹಿತಿ ಅಥವಾ ಮುನ್ಸೂಚನೆ ನೀಡಿಲ್ಲ. ಆದರೆ, ರೋಹಿತ್​ ನಾಯಕತ್ವದಲ್ಲಿನ ಕೊರತೆ ಕಂಡಿರುವ ಬಿಸಿಸಿಐ ಆಯ್ಕೆಗಾರರ ಸಮ್ಮಿತಿ, ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ನಾಯಕನ ಜವಾಬ್ದಾರಿ ಕೊಡಲು ನಿರ್ಧರಿಸಿದೆ ಎನ್ನಲಾಗಿದೆ. ಇದೆಲ್ಲದರ ನಡುವೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಟೀಮ್ ಇಂಡಿಯಾ ಕ್ಯಾಪ್ಟನ್ ಯಾರು ಎಂಬುದನ್ನು ಇನ್ನೂ ಬಿಸಿಸಿಐ ಅಧಿಕೃತವಾಗಿ ಘೋಷಿಸಿಲ್ಲ.

ಸದ್ಯ ಈ ವರದಿಗಳು ಎಚ್ಟರ ಮಟ್ಟಿಗೆ ನಿಜವಾಗಲಿದೆ? ಅಸಲಿಗೆ ರೋಹಿತ್ ಶರ್ಮರನ್ನು ಚಾಂಪಿಯನ್ಸ್ ಟ್ರೋಫಿಯ ಟೀಮ್ ಇಂಡಿಯಾದ ಕ್ಯಾಪ್ಟನ್ ಸ್ಥಾನದಿಂದ ಬಿಸಿಸಿಐ ಕೈಬಿಡಲಿದೆಯೇ? ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net