ನೀವು ನೋಡಿದ್ದು ಇಲ್ಲಿ ಸಿಗುವುದಿಲ್ಲ... ಹೆಣ್ಣು ಹುಡುಕುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಮಹಿಳೆ | Swati Mukund

Swati Mukund
Published on

ನವದೆಹಲಿ: ತನ್ನ ಫೋಟೋವನ್ನು ನಕಲಿ ಪ್ರೊಫೈಲ್‌ನಲ್ಲಿ ಬಳಸಲಾಗಿದೆ ಎಂದು ಸ್ವಾತಿ ಮುಕುಂದ್ ( Swati Mukund ) ಎಂಬ ಬ್ಲಾಗರ್ ಮ್ಯಾಟ್ರಿಮೋನಿಯಲ್ ಸೈಟ್ ಭಾರತ್ ಮ್ಯಾಟ್ರಿಮೋನಿ ವಿರುದ್ಧ ದೂರು ದಾಖಲಿಸಿದ್ದಾಳೆ.

ಭಾರತ್ ಮ್ಯಾಟ್ರಿಮೋನಿಯ ಎಲೈಟ್​ ಸಬ್​ಸ್ಕ್ರಿಪ್ಸನ್​ ಸೇವೆ ಅಡಿಯಲ್ಲಿ ಸ್ವಾತಿ ಮುಕುಂದ್​ ಫೋಟೋ ಬೇರೆ ಹೆಸರಿನಲ್ಲಿ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲದೆ, ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ಸಹ ರವಾನಿಸಿದ್ದಾರೆ.

ಭಾರತ್ ಮ್ಯಾಟ್ರಿಮೋನಿ ಹಗರಣ ಹೆಸರಿನಲ್ಲಿ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಸ್ವಾತಿ, ಮೊದಲಿಗೆ ತಮ್ಮ ಪತಿಯನ್ನು ಪರಿಚಯಿಸಿದ್ದಾರೆ. ಭಾರತ್ ಮ್ಯಾಟ್ರಿಮೋನಿ ಮೂಲಕ ತನ್ನ ಪತಿಯನ್ನು ಹುಡುಕಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ವಿಡಿಯೋ ಪರದೆಯ ಮೇಲೆ ನಕಲಿ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ಸಹ ಹಂಚಿಕೊಂಡಿದ್ದಾರೆ.

ದೊಡ್ಡ ಮೊತ್ತವನ್ನು ಪಾವತಿಸಿದ ಬಳಿಕ ಸಬ್​ಸ್ಕ್ರಿಪ್ಸನ್​ ನೀಡುವ ಭಾರತ್ ಮ್ಯಾಟ್ರಿಮೋನಿಯ ವೆಬ್​ಸೈಟ್​ನಲ್ಲಿ ಗಣ್ಯರ ಸೇವೆಯ ಅಡಿಯಲ್ಲಿ ಈ ರೀತಿಯ ವಂಚನೆ ನಡೆಯುತ್ತಿದೆ. ಸರಿಯಾದ ಸಂಗಾತಿಯನ್ನು ಹುಡುಕಲು ಗ್ರಾಹಕರು ಎಚ್ಚರಿಕೆಯಿಂದ ಪ್ರೊಫೈಲ್‌ಗಳನ್ನು ಪರಿಶೀಲಿಸಬೇಕಿದೆ. ಇಂತಹ ಆ್ಯಪ್‌ಗಳನ್ನು ಬಳಸುವವರು ತುಂಬಾ ಜಾಗರೂಕರಾಗಿರಬೇಕು. ನೀವು ನೋಡಿದ್ದು ಇಲ್ಲಿ ಸಿಗುವುದಿಲ್ಲ ಎಂದು ಸ್ವಾತಿ ವಿಡಿಯೋದಲ್ಲಿ ಎಚ್ಚರಿಸಿದ್ದಾರೆ.

ಸ್ವಾತಿ ಅವರ ವಿಡಿಯೋ ವೈರಲ್​ ಆದ ಬಳಿಕ ಭಾರತ್ ಮ್ಯಾಟ್ರಿಮೋನಿಯಲ್ ಸೈಟ್‌ನಿಂದ ತಮಗಾದ ಮೋಸವನ್ನು ಅನೇಕರು ಹಂಚಿಕೊಂಡಿದ್ದಾರೆ. 1.5 ಲಕ್ಷ ರೂ. ಕೊಟ್ಟು ಗಣ್ಯರ ಸಬ್​ಸ್ಕ್ರಿಪ್ಸನ್​ ತೆಗೆದುಕೊಂಡಿದ್ದೆ. ಇದೊಂದು ದೊಡ್ಡ ಹಗರಣವಾಗಿದ್ದು, ವರ್ಷಕ್ಕೆ ಕೆಲವೇ ಕೆಲ ಪ್ರೊಫೈಲ್‌ಗಳನ್ನು ಮತ್ತೆ ಮತ್ತೆ ತೋರಿಸುತ್ತಾರೆ ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ. ಕೆಲವರು ಪ್ರಕರಣ ದಾಖಲಿಸುವಂತೆ ಸ್ವಾತಿ ಅವರನ್ನು ಕೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net