ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಸಿನಿಮಾ ಕುರಿತ ಸಿನಿಮಾಗಳು ಹಲವು ಬಂದಿವೆ. ಆದರೆ, ಅಲ್ಲಿಯೂ ವಿಭಿನ್ನತೆ ಮೆರೆಯುವ ಪ್ರಯೋಗಾತ್ಮಕ ಚಿತ್ರವೊಂದು ಇದೀಗ ತೆರೆಗೆ ಬರಲು ರೆಡಿಯಾಗಿದೆ. ವಿಶೇಷ ಅಂದರೆ ಐವರು ಯುವ ಉತ್ಸಾಹಿಗಳು ಸೇರಿ ಐದು ಕಥೆಗಳನ್ನು ನಿರ್ದೇಶಿಸಿರುವ ಚಿತ್ರವಿದು. ಹೆಸರು “ಬಿಟಿಎಸ್’ ಅರ್ಥಾತ್ “ಬಿಹೈಂಡ್ ದ ಸೀನ್ಸ್’. ತೆರೆಯ ಹಿಂದಿನ ಕಥೆಗಳೇ ಈ ಚಿತ್ರದ ಥೀಮ್. “ನೋಡಿದವರು ಏನಂತಾರೆ’ ಖ್ಯಾತಿಯ ಕುಲದೀಪ್ ಕಾರ್ಯಪ್ಪ, ನಟಿ ಅಪೂರ್ವ ಭಾರದ್ವಾಜ್, ಪ್ರಜ್ವಲ್ ರಾಜ್, ಸಾಯಿ ಶ್ರೀನಿಧಿ ಮತ್ತು ರಾಜೇಶ್ ಎನ್. ಶಂಕದ್, ಐದು ಕಥೆಗಳನ್ನು ನಿರ್ದೇಶಿಸಿದ್ದಾರೆ.
“ಐದು ಕಥೆಗಳಿದ್ದರೂ ಎಲ್ಲವೂ ಒಂದೇ ಹಿನ್ನೆಲೆಯಲ್ಲಿ ನಡೆಯುವ ಕಾರಣ, ಒಂದಕ್ಕೊಂದು ಕನೆಕ್ಟ್ ಆಗಿರುತ್ತವೆ. ಹೀಗಾಗಿಯೇ ಸಿನಿಮಾ ಪ್ರೇಕ್ಷಕರಿಗೂ ಕನೆಕ್ಟ್ ಆಗುವ ನಿರೀೆಯಿದೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ ಕುಲದೀಪ್. ಅದಕ್ಕೆ ತಕ್ಕಂತೆ ಚಿತ್ರದ ಟ್ರೇಲರ್ಗೆ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗುತ್ತಿರುವುದು “ಬಿಟಿಎಸ್’ ತಂಡದಲ್ಲಿ ಸಂತಸ ಮೂಡಿಸಿದೆ. ವಿಜಯ್ ಕೃಷ್ಣ, ಮಹದೇವ ಪ್ರಸಾದ್, ಶ್ರೀಪ್ರಿಯ, ಕೌಶಿಕ್, ಚಂದನ, ಮೇದಿನಿ ಕೆಳಮನೆ, ಆಹನ್, ಜಹಾಂಗೀರ್ ನೀನಾಸಂ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ.
ನಾವು ಮಾಡಿದ, ನೋಡಿದ, ಕೇಳಿದ ವಿಷಯಗಳೇ…
“ಬಿಟಿಎಸ್’ ಬಗ್ಗೆ ನಿರ್ದೇಶಕ ಕುಲದೀಪ್ ಕಾರ್ಯಪ್ಪ, “ನೈಜ ಟನೆಗಳಿಂದ ಸ್ಪೂರ್ತಿ ಪಡೆದ ಅಂಶಗಳು, ನೈಜ ಸಂಭಾಷಣೆ ಚಿತ್ರದಲ್ಲಿದೆ. ನಮ್ಮ ಸುತ್ತಮುತ್ತ ನಡೆದ, ನಾವು ಮಾಡಿದ, ನೋಡಿದ, ಕೇಳಿದ ವಿಷಯಗಳೇ ಚಿತ್ರದಲ್ಲಿವೆ’ ಎಂದು ಮಾಹಿತಿ ನೀಡುತ್ತಾರೆ. “ಬಾನಿಗೊಂದು ಎಲ್ಲೆ ಎಲ್ಲಿದೆ?’, “ಕಾಫಿ, ಸಿಗರೇಟ್ಸ್ ಆ್ಯಂಡ್ ಲೈನ್ಸ್’, “ಹೀರೋ’, “ಬ್ಲಾಕ್ಬಸ್ಟರ್’, “ಸುಮೋಹ’ ಎಂಬ ಐದು ಕಥೆಗಳು ಚಿತ್ರದಲ್ಲಿವೆ.
“ನೋಡಿದವರು ಏನಂತಾರೆ’ ಚಿತ್ರದ ಸಮಯದಲ್ಲೇ ಮತ್ತೊಂದು ಸಿನಿಮಾ ಮಾಡುವ ಬಗ್ಗೆ ಚರ್ಚಿಸುತ್ತಿದ್ದೆವು. ಆಗ ಸಿನಿಮಾ ಬಗ್ಗೆಯೇ ಸಿನಿಮಾ ಮಾಡಿದರೆ ಹೇಗೆ? ಅಂತನ್ನಿಸಿ, ಐವರು ಗೆಳೆಯರೂ ಸೇರಿ ಕಥೆ ಮಾಡಿಕೊಂಡೆವು. ಸಿನಿಮಾ ಮಾಡುವ ಹುಚ್ಚುತನವನ್ನು ಅನಾವರಣ ಮಾಡುವ ಚಿತ್ರವಿದು. ನಾವು ಮಾಡುವ ಚಿತ್ರವನ್ನು ಪ್ರೇಕ್ಷಕರು ತೆರೆಯ ಮೇಲೆ ನೋಡುತ್ತಾರೆ. ಆದರೆ, “ಬಿಟಿಎಸ್’ ಮೂಲಕ ತೆರೆಯ ಹಿಂದಿನ ಹೋರಾಟವನ್ನು ನೈಜವಾಗಿ ತೋರಿಸುವ ಪ್ರಯತ್ನ ಮಾಡಿದ್ದೇವೆ.
– ಕುಲದೀಪ್ ಕಾರ್ಯಪ್ಪ, ನಿರ್ದೇಶಕ