

ರಾಂಚಿ: ಇಂದು ಎಲ್ಲೆಡೆಯೂ ಮಾಸ್ಕ್‌ದೇ ಸುದ್ದಿ. ಕ್ಷಣ ಕ್ಷಣಕ್ಕೂ ತನ್ನ ಪ್ರಭಾವವನ್ನು ವ್ಯಾಪಿಸಿಕೊಳ್ಳುತ್ತಲೇ ಸಾಗಿರುವ ಕರೊನಾದಿಂದ ಬಚಾವಾಗಬೇಕೆಂದರೆ ಮಾಸ್ಕ್ ಧರಿಸಿ ಎಂದು ಎಲ್ಲೆಡೆ ಹೇಳುತ್ತಿರುವುದು ಈಗ ಮಾಮೂಲು, ಯಾರಾದರೂ ಕೆಮ್ಮಿದಾಗ ಅಥವಾ ಸೀನಿದಾಗ ಅಷ್ಟೇ ಏಕೆ ಮಾತನಾಡುವ ಸಮಯದಲ್ಲಿ ಬಾಯಿಯಿಂದ ಹೊರಡುವ ಹನಿಗಳ ಮೂಲಕ ಕರೊನಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ ಇಂಥದ್ದೊಂದು ನಿಯಮ ಮಾಡಲಾಗಿದೆ.
ಆದರೆ ಯಾರು ಎಷ್ಟೇ ಘೋಷಣೆ ಮಾಡಿದರೂ, ಕೆಲವರ ತಲೆಗೆ ಇದು ಹೋಗುವುದಿಲ್ಲ. ಆದ್ದರಿಂದಲೇ ದಂಡಂ ದಶ ಗುಣಂ ಎಂದು ಇದಾಗಲೇ ಕೆಲವು ರಾಜ್ಯಗಳಲ್ಲಿ ಮಾಸ್ಕ್ ಧರಿಸದೇ ಹೊರಗೆ ಹೋಗುವವರಿಗೆ ದಂಡ ಹಾಕುವ ಪ್ರಕ್ರಿಯೆಗೆ ಇದಾಗಲೇ ಚಾಲನೆ ದೊರೆತಿದೆ. ಈ ಕುರಿತು ಸುಗ್ರೀವಾಜ್ಞೆಯನ್ನೂ ಹೊರಡಿಸಲಾಗಿದೆ.
ಆದರೆ ಕುತೂಹಲದ ಬೆಳವಣಿಗೆಯೊಂದರಲ್ಲಿ ಜಾರ್ಖಂಡ್ ಮಾಸ್ಕ್ ಹಾಕದವರಿಗೆ ಸರಿಯಾದ ಪಾಠ ಕಲಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾಸ್ಕ್ ಧರಿಸದೆ ಸುತ್ತಾಡುವವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುವುದು ಹಾಗೂ ಲಾಕ್ ಡೌನ್ ನಿಯಮ ಉಲ್ಲಂಘನೆಯ ಆರೋಪದ ಮೇಲೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂಬ ಆದೇಶ ಹೊರಡಿಸಿದೆ!
ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಸೋಂಕಿತರನ್ನು ಗಮನದಲ್ಲಿ ಇಟ್ಟುಕೊಂಡು ಇಂಥದ್ದೊಂದು ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಆರೋಗ್ಯ ಸಚಿವ ಬನ್ನಾ ಗುಪ್ತಾ, ಸುಗ್ರೀವಾಜ್ಞೆಯಲ್ಲಿ ಉಲ್ಲೇಖಿಸಲಾಗಿರುವ ದಂಡದ ಮೊತ್ತ ಕೇವಲ ಯಾವುದೇ ಒಂದು ವ್ಯಕ್ತಿಯ ಮೇಲೆ ಪ್ರಕರಣ ದಾಖಲಾಗಿ, ಆ ವ್ಯಕ್ತಿ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನವಾದಾಗ ಮಾತ್ರ ವಿಧಿಸಲಾಗುವುದು. ಯಾವುದೇ ವ್ಯಕ್ತಿಯನ್ನು ಸ್ಪಾಟ್ ಚೆಕಿಂಗ್‌ನಲ್ಲಿಯೇ ಹಿಡಿದು ದಂಡ ಹಾಗೂ ಶಿಕ್ಷೆ ವಿಧಿಸುವುದು ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಇಲ್ಲಿಯವರೆಗೆ 6,485 ಮಂದಿಗೆ ಕರೊನಾ ಸೋಂಕು ತಗುಲಿದ್ದು, ಈ ಪೈಕಿ 3,024 ಮಂದಿ ಬಿಡುಗಡೆಯಾಗಿದ್ದಾರೆ. ಇದಾಗಲೇ 64 ಮಂದಿ ಮೃತಪಟ್ಟಿದ್ದಾರೆ.