ಮಗು ನೋಡಿ ಬೆಂಕಿಹಚ್ಚಿಕೊಂಡ ಅಪ್ಪ- ಅಮ್ಮನಿಗೆ ಹೃದಯಾಘಾತ!

baby
Published on

ಅಗರ್ತಲಾ (ತ್ರಿಪುರಾ): ಇಂದಿನ ದಿನಗಳಲ್ಲಿ ಹೆಣ್ಣು ಏನೆಲ್ಲಾ ಸಾಧನೆ ಮಾಡುತ್ತಿದ್ದಾಳೆ, ಅವಳು ಯಾರಿಗೂ ಕಮ್ಮಿ ಇಲ್ಲ. ಆದ್ದರಿಂದ ಹೆಣ್ಣು-ಗಂಡಿನ ನಡುವೆ ಭೇದಭಾವ ಮಾಡಬೇಡಿ ಎಂದೆಲ್ಲಾ ಎಷ್ಟೊಂದು ಘೋಷಣೆಗಳು ಕೇಳಿಬರುತ್ತಿದ್ದರೂ, ಕೆಲವು ಕಡೆಗಳಲ್ಲಿ ಇಂದಿಗೂ ಹೆಣ್ಣು ಎಂದರೆ ತಾತ್ಸಾರ.

ಆದರೆ ತ್ರಿಪುರಾದ ಅಗರ್ತಲಾದಲ್ಲಿ ಮಾತ್ರ ನಡೆಯಬಾರದ ಘಟನೆ ನಡೆದಿದೆ. ಹುಟ್ಟಿದ ಮಗು ಹೆಣ್ಣು ಎಂದು ನೋಡುತ್ತಲೇ ಅಪ್ಪ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ!

ಆಗಿದ್ದೇನೆಂದರೆ, ಸುಪ್ರಿಯಾ ದಾಸ್ (23) ಎಂಬಾಕೆ ಗರ್ಭವತಿಯಾಗಿದ್ದರು. ಪತಿ ಪ್ರಾಣ್‌ ಗೋವಿಂದ ದಾಸ್‌ಗೆ ಗಂಡುಮಗು ಬೇಕಿತ್ತು. ಅತ್ತೆ ಇವರ ತಾಯಿ ಕೂಡ ವಂಶ ಉದ್ಧಾರ ಆಗಬೇಕಾದರೆ ಗಂಡುಮಗು ಬೇಕು ಎಂದು ಸದಾ ಸೊಸೆಗೆ ಹೇಳುತ್ತಲೇ ಬಂದಿದ್ದರು.

ಆದರೆ ಆ ಮಗುವಿನ ದುರಾದೃಷ್ಟಕ್ಕೆ ಅದು ಹೆಣ್ಣಾಗಿ ಹುಟ್ಟಿತು. ಮಗು ಹುಟ್ಟಿ ಇನ್ನೂ ನಾಲ್ಕು ದಿನವಾಗಿರಲಿಲ್ಲ. ಮಗು ಹೆಣ್ಣುಎಂಬ ಕಾರಣಕ್ಕೆ ಪ್ರಾಣ್‌ ಹೆಂಡತಿಯ ಜತೆ ಜಗಳವಾಡುತ್ತಿದ್ದ. ಮಗು ಹೆಣ್ಣು ಎಂಬ ನೋವಿನಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಪತಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ಪ್ರಿಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ!

ಅಪ್ಪ-ಅಮ್ಮನನ್ನು ಕಳೆದುಕೊಂಡು, ಅತ್ತ ಅಜ್ಜ-ಅಜ್ಜಿಗೂ ಬೇಡವಾಗ ಮುದ್ದಾದ ಮಗು ಮಾತ್ರ ಅನಾಥವಾಗಿದೆ. ಹೆಣ್ಣು ಮಗು ಕುಟುಂಬಕ್ಕೆ ಅಶುಭ ಎಂದು ಸುಪ್ರಿಯಾಳ ಅತ್ತೆ ದೂಷಿಸುತ್ತಿದ್ದರು ಎಂದು ನೆರೆಹೊರೆಯ ಜನರು ತಿಳಿಸಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net