

ಅಹಮದಾಬಾದ್: ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯ ಭಾರೀ ಸಂಖ್ಯೆಯ ಅಭಿಮಾನಿಗಳಿಂದ ಕೂಡಿತ್ತು.
ಪಾಕಿಸ್ತಾನ ನಡುವಿನ ಹೈ-ವೊಲ್ಟೇಜ್ ಪಂದ್ಯ ವೀಕ್ಷಣೆಗೆ ಸಾಕ್ಷಿಯಾಗಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಭಾರತ ಪಂದ್ಯವನ್ನು ಗೆಲ್ಲುವ ಮೂಲಕ ಸಂತಸವನ್ನು ಚೆಲ್ಲಿತು. ಈ ವೇಳೆ ಖುಷಿಯೊಟ್ಟಿಗೆ ಮನೆಗೆ ತೆರಳಬೇಕಿದ್ದ ಕ್ರಿಕೆಟ್ ಫ್ಯಾನ್ಸ್ ದುಃಖದಿಂದ ಹೋಗಿರುವುದು ಇದೀಗ ಮುನ್ನೆಲೆಗೆ ಬಂದಿದೆ.
ಅಸಲಿಗೆ ಭಾರತ ಪಂದ್ಯವನ್ನು ವಶಪಡಿಸಿಕೊಂಡರು ಕ್ರಿಕೆಟ್ ಅಭಿಮಾನಿಗಳು ಏಕೆ ಬೇಸರಗೊಂಡಿದ್ದಾರೆ ಎಂಬುದಕ್ಕೆ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳತನವಾದ ಐಫೋನ್! ಪಂದ್ಯ ವೀಕ್ಷಿಸಲು ಭಾರೀ ಪ್ರಮಾಣದಲ್ಲಿ ಸ್ಟೇಡಿಯಂಗೆ ಆಗಮಿಸಿದ್ದ ಪ್ರೇಕ್ಷಕರು, ಮೋಜು ಮಾಡುವ ಭರದಲ್ಲಿ ತಮ್ಮ ಬಳಿಯಿರುವ ದುಬಾರಿ ಫೋನ್ಗಳ ಬಗ್ಗೆ ಹೆಚ್ಚು ಗಮನಹರಿಸುವಲ್ಲಿ ವಿಫಲರಾಗಿದ್ದಾರೆ.
ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ತಮ್ಮ ಐಫೋನ್ಗಳನ್ನು ಕಳೆದುಕೊಂಡಿರುವ ಬಗ್ಗೆ ಜನರು ಸೋಷಿಯಲ್ ಮೀಡಿಯಾದಲ್ಲಿ ದೂರು ನೀಡುವ ಮುಖೇನ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.
ಈ ಕುರಿತಂತೆ ಎಕ್ಸ್ನಲ್ಲಿ (ಟ್ವಿಟರ್) ನೂರಾರು ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಟ್ವೀಟ್ ಮಾಡಿದ್ದಾರೆ. ಬಾಲಿವುಡ್ನ ಖ್ಯಾತ ನಟಿ ಊರ್ವಶಿ ರೌಟೇಲಾ ಕೂಡ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದರು. ಈ ವೇಳೆ ಅವರ 24 ಕ್ಯಾರೆಟ್ ಗೋಲ್ಡ್ ಐಫೋನ್ ಮೊಬೈಲ್ ಕೂಡ ಕಳ್ಳತನವಾದ ಬಗ್ಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡ ನಟಿ, "ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನನ್ನ 24 ಕ್ಯಾರೆಟ್ ಓರಿಜಿನಲ್ ಚಿನ್ನದ ಐ ಫೋನ್ ಕಳೆದುಹೋಗಿದೆ! ಯಾರಾದರೂ ಅದನ್ನು ಕಂಡರೆ, ದಯವಿಟ್ಟು ಸಹಾಯ ಮಾಡಿ. ಆದಷ್ಟು ಬೇಗ ನನ್ನನ್ನು ಸಂಪರ್ಕಿಸಿ! ಸಹಾಯ ಮಾಡುವವರು ಟ್ಯಾಗ್ ಮಾಡಿ" ಎಂದು ಊರ್ವಶಿ ಟ್ವೀಟ್ ಮಾಡಿದ್ದಾರೆ.
ನಟಿ ಊರ್ವಶಿಯ ಬೆನ್ನಲ್ಲೇ ಹಲವರು ತಮ್ಮ ಐಫೋನ್ ಕಾಣೆಯಾದ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ,(ಏಜೆನ್ಸೀಸ್).