ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಂತ್ರಸ್ತೆಯರು

Supreme Court
Published on

ಮಣಿಪುರ: ಬೆತ್ತಲೆಯಾಗಿ ಪರೇಡ್ ಮಾಡಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮಗಾದ ಸಂಕಷ್ಟದ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಹೊಸ ಅರ್ಜಿಯೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: 'ಸಂಗೀತವು ನೈತಿಕ ಭ್ರಷ್ಟಾಚಾರಕ್ಕೆ ಕಾರಣ': ಗಿಟಾರ್, ತಬಲಾ ಸೇರಿದಂತೆ ಹಲವು ಉಪಕರಣಗಳಿಗೆ ಬೆಂಕಿ

ಮೇ 4ರಂದು ನಡೆದ ಲೈಂಗಿಕ ದೌರ್ಜನ್ಯ ಘಟನೆಗೆ ಸಂಬಂಧಿಸಿದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಹಿಳೆಯರು ತಮ್ಮ ಗುರುತಿನ ರಕ್ಷಣೆಗಾಗಿ (ಗೌಪ್ಯತೆ) ತಮ್ಮ ಮನವಿಯೊಂದಿಗೆ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದ್ದಾರೆ. ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಲಿದೆ.

ಜುಲೈ 20ರಂದು ಸುಪ್ರೀಂ ಕೋರ್ಟ್, ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವೈರಲ್ ವೀಡಿಯೊಗೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಲು ಕೇಂದ್ರ ಮತ್ತು ಮಣಿಪುರ ಸರ್ಕಾರವನ್ನು ಕೇಳಿದೆ. ಅಲ್ಲದೇ, ಈ ಘಟನೆಯು ಬಹುದೊಡ್ಡ ಸಾಂವಿಧಾನಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಹೇಳಿದೆ.

ಇದನ್ನೂ ಓದಿ: ಪ್ರಯಾಣಿಕನ ಬ್ಯಾಗ್​​ನಲ್ಲಿ 47 ಜೀವಂತ ಹಾವು, 2 ಹಲ್ಲಿ ಪತ್ತೆ..!

ಏನಿದು ಘಟನೆ?
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಮಣಿಪುರದಲ್ಲಿ ನಡೆದ ಅಮಾನವೀಯ ಘಟನೆಯ ವಿಡಿಯೋ ವೈರಲ್​ ಆಗಿತ್ತು. ಇದರಲ್ಲಿ ಪುರುಷರ ಗುಂಪೊಂದು ಮಹಿಳೆಯರಿಬ್ಬರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿತ್ತು. ಅಲ್ಲದೆ, ಮಹಿಳೆಯರ ಮೇಲೆ ಗ್ಯಾಂಗ್​ರೇಪ್​ ಆರೋಪವು ಕೇಳಿ ಬಂದಿತ್ತು. ಈ ಘಟನೆ ಮೇ 4ರಂದು ಮಣಿಪುರ ರಾಜಧಾನಿ ಇಂಫಾಲ್​ನಿಂದ 35 ಕಿ.ಮೀ. ದೂರದಲ್ಲಿರುವ ಕೊಂಗ್​ಪೊಕ್ಪಿ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ಈ ಕೃತ್ಯಕ್ಕೆ ದೇಶಾದ್ಯಂತ ವಿರೋಧ ವ್ಯಕ್ತವಾಗಿತ್ತು.

ಮಣಿಪುರದ ಮೈತೀಸ್​ ಮತ್ತು ಕುಕಿ ಬುಡಕಟ್ಟುಗಳ ನಡುವೆ ಪರಿಶಿಷ್ಟ ಪಂಗಡಗಳ (ST) ಸ್ಥಾನಮಾನಕ್ಕಾಗಿ ಘರ್ಷಣೆಗಳು ಉಂಟಾಗಿರುವ ನಡುವೆಯೇ ಈ ಭಯಾನಕ ಘಟನೆಯೂ ನಡೆದಿದ್ದು, ಈಗಲೂ ಅಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಈವರೆಗೂ ಮಣಿಪುರದ ಹಿಂಸಾಚಾರದಲ್ಲಿ ಸುಮಾರು 150 ಮಂದಿ ಅಸುನೀಗಿದ್ದು, ಸಾವಿರಾರು ಜನರನ್ನು ಸ್ಥಳಾಂತರ ಮಾಡಲಾಗಿದೆ.(ಎಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net