

ಬೆಂಗಳೂರು: ವ್ಯಕ್ತಿಯೊಬ್ಬ ನೇಲ್ ಕಟರ್ ನುಂಗಿದ್ದಲ್ಲದೇ ಅದನ್ನು ಮರೆತೇ ಬಿಟ್ಟಿದ್ದ. ಆದರೆ 8 ವರ್ಷಗಳ ಬಳಿಕ ಬೆಂಗಳೂರಿನ ವೈದ್ಯರು ಅದನ್ನು ಹೊರತೆಗೆದಿದ್ದಾರೆ. 38 ವರ್ಷದ ಈ ವ್ಯಕ್ತಿ ತನ್ನ 30ನೇ ವಯಸ್ಸಿನಲ್ಲಿ ಈ ನೇಲ್ ಕಟರ್ ನುಂಗಿದ್ದ.
ನೇಲ್ ಕಟರ್ ನುಂಗಿದ್ದ ಈ ವ್ಯಕ್ತಿ ಆ ಕುರಿತು ಪಾಲಕರು, ಮನೆಯವರಿಗೆ ಹೇಳಿರಲಿಲ್ಲ. ಗೊತ್ತಾದರೆ ಬಯ್ಯುತ್ತಾರೆ ಎಂದು ಸುಮ್ಮನಿದ್ದ. ಮದುವೆಯಾದ ಮೇಲೆ ಹೆಂಡತಿಗೂ ಈ ವಿಷಯ ಹೇಳಿರಲಿಲ್ಲ. ಹೇಗೂ ನೋವು ಇರದ್ದರಿಂದ ಸುಮ್ಮನಿದ್ದೆ, ಆಮೇಲೆ ಅದನ್ನು ಮರೆತೇಬಿಟ್ಟಿದ್ದೆ ಎಂಬುದಾಗಿ ಈತ ವೈದ್ಯರ ಬಳಿ ಹೇಳಿಕೊಂಡಿದ್ದಾನೆ.
ಇತ್ತೀಚೆಗೆ ಹೊಟ್ಟೆನೋವು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಹೋಗಿದ್ದ ಈತನ ಬಳಿ ವೈದ್ಯರು ಎಕ್ಸ್-ರೇ ತೆಗೆಸಲು ಹೇಳುತ್ತಾರೆ. ಬಳಿಕ ಪರಿಶೀಲನೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ವಸ್ತುವೊಂದು ಇರುವುದು ಕಂಡುಬಂದಿತ್ತು. ಈ ಬಗ್ಗೆ ವೈದ್ಯರು ವಿಚಾರಿಸಿದಾಗ ಈತ 8 ವರ್ಷಗಳ ಹಿಂದಿನ ಘಟನೆ ನೆನಪಾಗಿ ವೈದ್ಯರಿಗೆ ಅದನ್ನು ಹೇಳಿದ್ದಾನೆ.
ನನಗೆ 30 ವರ್ಷವಾಗಿದ್ದಾಗ ಮದ್ಯವ್ಯಸನ ಬಿಡಿಸಲು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿರುವುದು ಹಿಂಸೆ ಅನಿಸಿದ್ದಾಗ ಒಂದು ದಿನ ಸಿಟ್ಟಿನಲ್ಲಿ ನೇಲ್ ಕಟರ್ ನುಂಗಿ ಅಲ್ಲಿದ್ದ ಸಿಬ್ಬಂದಿಗೆ ತಿಳಿಸಿದ್ದೆ. ಅವರು ಆಗ ಎರಡು ಬಾಳೆಹಣ್ಣು ತಿನ್ನು, ಬೆಳಗ್ಗೆ ದೇಹದಿಂದ ಹೊರಹೋಗುತ್ತದೆ ಎಂದಿದ್ದರು. ನಾನು ಬೆಳಗ್ಗೆ ಅದು ದೇಹದಿಂದ ಹೊರ ಹೋಯ್ತು ಎಂದುಕೊಂಡಿದ್ದೆ. ಅದಾಗಿ 8 ವರ್ಷಗಳ ಮೇಲೆ ವೈದ್ಯರು ಏನಾದರೂ ನುಂಗಿದ್ದೀರಾ ಎಂದು ಕೇಳಿದಾಗಲೇ ಅದು ಮತ್ತೆ ನೆನಪಾಗಿದ್ದು ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾನೆ.
ಈತ ಯಾವುದಾದರೂ ಏರ್ಪೋರ್ಟ್ಗೆ ಹೋಗಿದ್ದರೆ ಇಲ್ಲವೇ ಎಂಆರ್ಐ ಸ್ಕ್ಯಾನ್ಗೆ ಒಳಗಾಗಿದ್ದರೆ ಮ್ಯಾಗ್ನೆಟಿಕ್ ವೇವ್ಸ್ನಿಂದಾಗಿ ತೊಂದರೆ ಅನುಭವಿಸುವ ಸಾಧ್ಯತೆ ಇರುತ್ತಿತ್ತು ಎಂದಿರುವ ವೈದ್ಯರು, ಹೊಟ್ಟೆಯಲ್ಲಿದ್ದ ನೇಲ್ ಕಟರ್ ತುಕ್ಕು ಹಿಡಿದಿತ್ತು ಎಂದು ತಿಳಿಸಿದ್ದಾರೆ.