VIDEO| ಮಗಳನ್ನು ಪ್ರೀತಿ ಮಾಡಿದ್ದಕ್ಕೆ ಯುವಕನನ್ನು ಬರ್ಬರವಾಗಿ ಇರಿದು ಕೊಂದ ಯುವತಿ ಕುಟುಂಬಸ್ಥರು

Delhi Murder
Published on

ನವದೆಹಲಿ: ತಮ್ಮ ಮಗಳನ್ನು ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಯುವಕನನ್ನು ಬರ್ಬರವಾಗಿ ಇರಿದು ಕೊಲೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಜಫರಾಬಾದ್​ ಪ್ರದೇಶದಲ್ಲಿ ನಡೆದಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಮೃತ ಯುವಕನ್ನು ಸಲ್ಮಾನ್​(25) ಎಂದು ಗುರುತಿಸಲಾಗಿದೆ. ಯುವತಿಯ ತಂದೆ ಮನ್ಸೂರ್ ಆಕೆಯ ಇಬ್ಬರು ಚಿಕ್ಕಪ್ಪಂದಿರು ಹಾಗೂ ಓರ್ವ ಅಪ್ರಾಪ್ತ ವಯಸ್ಕ ಕೃತ್ಯವನ್ನು ಎಸಗಿ ಪರಾರಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಸಲ್ಮಾನ್​ ಹಾಗೂ ಯುವತಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರವನ್ನು ತಿಳಿದ ಯುವತಿಯ ಕುಟುಂಬಸ್ಥರು ಇದನ್ನು ಬಲವಾಗಿ ವಿರೋಧಿಸಿದ್ದರು.

ಮಂಗಳವಾರ ಸಂಜೆ 5:15ರ ಸುಮಾರಿಗೆ ಸಲ್ಮಾನ್​ ಜಫರಾಬಾದ್​ನ ಚೌಹಾಣ್​ ಬಂಗೇರದ ಬಳಿ ಇರುವ ಕಲ್ಯಾಣ್​ ಚಿತ್ರಮಂದಿರದ ರಸ್ತೆಯಲ್ಲಿ ಬರುತ್ತಿದ್ದಾನೆ ಎಂಬ ವಿಚಾರ ತಿಳಿದ ಯುವತಿಯ ಕುಟುಂಬಸ್ಥರು ಆತನನ್ನು ಅಡ್ಡಗಟ್ಟಿ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

ಯುವತಿಯ ತಂದೆ ಮನ್ಸೂರ್​ ಆತನ ಇಬ್ಬರು ಸಹೋದರರು ಹಾಗೂ ಓರ್ವ ಅಪ್ರಾಪ್ತ ವಯಸ್ಕ ತಲೆಮಾರಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net