

ಬೆಂಗಳೂರು: ಬೆಂಗಳೂರು ಎಂದರೆ ನೆನಪಾಗುವುದೇ ಜನದಟ್ಟಣೆ, ಟ್ರಾಫಿಕ್ ಹಾಗೂ ಎಚ್ಚರಿಕೆ ನೀಡಲು ನಿಂತಿರುವ ಪೊಲೀಸರು. ಈ ನಡುವೆಯೂ ಕೆಲವೊಂದು ವಾಹನ ಸವಾರರು ಸಂಚಾರ ಉಲ್ಲಂಘನೆ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ದ್ವಿಚಕ್ರ ವಾಹನದಲ್ಲಿ ಚಲಾಯಿಸುತ್ತಿದ್ದಾಗ ( Riding Bike) ಹೆಲ್ಮೆಟ್ ಧರಿಸುವ ಬದಲು ತಲೆಗೆ ಬಾಣಲೆಯನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ.
ಜನನಿಬಿಡ ರಸ್ತೆಯಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದು, ಈ ವೇಳೆ ಬೈಕ್ನ ಹಿಂಬದಿ ಕುಳಿತಿದ್ದ ವ್ಯಕ್ತಿಯೊಬ್ಬ ಹೆಲ್ಮೆಟ್ ಧರಿಸಿದೇ ಅಡುಗೆ ಮಾಡುವ ಬಾಣಲೆಯನ್ನು ತಲೆಯ ಮೇಲೆ ಇಟ್ಟುಕೊಂಡು ಪೊಲೀಸರನ್ನು ಯಾಮಾರಿಸಿ ಹೋಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಈ ವೇಳೆ ಪಕ್ಕದಲ್ಲಿಯೇ ಇದ್ದಂತಹ ವಾಹನ ಸವಾರರೊಬ್ಬ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಮಡಿವಾಳ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಪ್ರತಿಕ್ರಿಯಿಸಿದ್ದು, ವಾಹನದ ನೋಂದಣಿ ಸಂಖ್ಯೆ ಹಾಗೂ ವಿಳಾಸವನ್ನು ಪತ್ತೆಹಚ್ಚಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈ ವಿಡಿಯೋವನ್ನು ಗಮನಿಸಿದ ಸಾಮಾಜಿಕ ಮಾಧ್ಯಮದ ಬಳಕೆದಾರರು ವ್ಯಕ್ತಿಯ ಸೃಜನಶೀಲತೆ ಹಾಗೂ ಹಾಸ್ಯವನ್ನು ಬಣ್ಣಿಸಿದ್ದಾರೆ. ಒಬ್ಬ ಬಳಕೆದಾರರು ಬೆಂಗಳೂರಿನಲ್ಲಿ ಸಂಚಾರ ತುಂಬಾ ಹದಗೆಟ್ಟಿದೆ. ಅಡುಗೆ ಪಾತ್ರೆಗಳನ್ನು ರಕ್ಷಣಾತ್ಮಕ ಸಾಧನಗಳಾಗಿ ಬಳಸಲಾಗುತ್ತಿದೆ. ಮೊದಲು ಸುರಕ್ಷತೆ ನಂತರ ಉಪಹಾರ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ಜೀವನವು ನಿಮಗೆ ಚಲನ್ ನೀಡಿದಾಗ, ಕಡಾಯಿ ಪಡೆಯಿರಿ ಎಂದು ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್)