ನವದೆಹಲಿ: ಭಾರತದಲ್ಲಿರುವ ಬಹುತೇಕ ಐಷಾರಾಮಿ ಹೋಟೆಲ್‌ಗಳಲ್ಲಿ (Luxury Hotels) ವಾಸ್ತವ್ಯ ಹೂಡುವ ಮೂಲಕ ಅಲ್ಲಿನ ಜನರನ್ನು ವಂಚಿಸುವ ಕೆಲಸವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದ ಬಿಮ್ಸೆಂಟ್ ಜಾನ್ ಎಂಬಾತನನ್ನು ಕಡೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತಮಿಳುನಾಡಿನಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರು ಅರಮನೆ ಮೈದಾನದ ಜಾಗ ಭೂಸ್ವಾಧೀನ: ರಾಜವಂಶಸ್ಥರಿಗೆ ಟಿಡಿಆರ್ ವಿತರಿಸಲು ಸುಪ್ರೀಂ ಆದೇಶ
ಡಿ.7ರಂದು ತಾನೊಂದು ಸಭೆಗೆ ಅತಿಥಿಯಾಗಿ ಹೋಗುವುದಾಗಿ ತೂತುಕುಡಿಯಲ್ಲಿರುವ ಖಾಸಗಿ ಹೋಟೆಲ್‌ಗೆ ಆಗಮಿಸಿದ್ದ ಈತ, ತನ್ನ ವಾಸ್ತವ್ಯಕ್ಕೆ ಮುಂಗಡ ಮೊತ್ತವನ್ನು ಡಿಸೆಂಬರ್ 9ರೊಳಗೆ ಪಾವತಿಸುತ್ತೇನೆ ಮತ್ತು ಡಿಸೆಂಬರ್ 12ರವರೆಗೆ ಇಲ್ಲೇ ಉಳಿಯುವುದಾಗಿ ಮ್ಯಾನೇಜರ್‌ಗೆ ಭರವಸೆ ನೀಡಿದ್ದ. ಇದೇ ಹುಸಿ ಭರವಸೆಯ ಮೇರೆಗೆ ಹೋಟೆಲ್‌ನಲ್ಲಿ ಭೂರಿ ಭೋಜನ ಸವಿದು, ಬರೋಬ್ಬರಿ 39,298 ರೂ ಬಿಲ್ ಮಾಡಿ, ಏಕಾಏಕಿ ಹೋಟೆಲ್ನಿಂದ ನಾಪತ್ತೆಯಾಗಿದ್ದಾನೆ. ಈ ವಿಚಾರ ತಿಳಿದ ಹೋಟೆಲ್ ಮ್ಯಾನೇಜರ್, ಆಕಾಶವೇ ಕಳಚಿ ಬಿದ್ದಂತೆ ವರ್ತಿಸಿದ್ದಾನೆ.
ಐಷಾರಾಮಿ ಹೋಟೆಲ್‌ಗಳಿಗೆ ಉಂಡೆನಾಮ
ಈ ಬಗ್ಗೆ ಮ್ಯಾನೇಜರ್ ನಿತಿನ್ ಸ್ಥಳೀಯ ಪೊಲೀಸರಿಗೆ ಘಟನೆಯನ್ನು ವಿವರಿಸಿದ್ದಾರೆ. ಸಿಸಿಟಿವಿ ದೃಶ್ಯ, ಮತ್ತಿತ್ತರ ವಿವರಗಳನ್ನು ಪರಿಶೀಲಿಸಿದ ಪೊಲೀಸರು, ಜಾನ್ ಅನ್ನು ತಕ್ಷಣವೇ ಊರು ಬಿಡುವ ಮುಂಚಿತವಾಗಿಯೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಕುರಿತು ದೀರ್ಘ ತನಿಖೆ ಕೈಗೊಂಡಾಗ ಅಚ್ಚರಿ ಸಂಗತಿ ಗೊತ್ತಾಗಿದೆ. ಜಾನ್ 1996ರಿಂದ ಕೊಲ್ಲಂ, ಥಾಣೆ ಮತ್ತು ದೆಹಲಿಯ ಹಲವಾರು ಐಷಾರಾಮಿ ಹೋಟೆಲ್‌ಗಳಲ್ಲಿ ಇದೇ ರೀತಿ ವಂಚಿಸಿ, ತನ್ನ ಸುಳಿವು ಸಿಗದಂತೆ ಪರಾರಿಯಾಗಿದ್ದ. ಕಡೆಗೂ ಆರೋಪಿ ಜಾನ್ ವಂಚನೆಗಳನ್ನು ತನಿಖಾಧಿಕಾರಿಗಳು ಬಟಾಬಯಲುಗೊಳಿಸಿದ್ದಾರೆ.
14 ದಿನಗಳ ಕಾಲ ನ್ಯಾಯಾಂಗ ಬಂಧನ
ವರದಿ ಪ್ರಕಾರ, ಜಾನ್ ವಿರುದ್ಧ ಭಾರತ ಮತ್ತು ವಿದೇಶಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಮಾರು 49 ಪ್ರಕರಣಗಳು ದಾಖಲಾಗಿದ್ದು, ವಂಚನೆಯ ಸುದೀರ್ಘ ಇತಿಹಾಸವಿದೆ. ಈ ಹಿಂದೆಯೂ ಇದೇ ರೀತಿಯ ಅಪರಾಧಕ್ಕಾಗಿ ಐದು ವರ್ಷ ಜೈಲುವಾಸ ಅನುಭವಿಸಿದ್ದ. ಮಣಿಪಾಲದ ಕೌಂಟಿ ಇನ್ ಹೋಟೆಲ್‌ಗೆ ವಂಚಿಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧನಕ್ಕೊಳಗಾದ ಜಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. 14 ದಿನಗಳ ಕಾಲ ಆತನನ್ನು ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರು ನಿರ್ಧರಿಸಿದ್ದು, ತನಿಖೆ ಮುಂದುವರಿದಿದೆ.
ದೆಹಲಿ, ಮಹಾರಾಷ್ಟ್ರ, ಕೇರಳ
ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾತನಾಡಿ, ”ಬಿಮ್ಸೆಂಟ್ ಜಾನ್ ತಮಿಳುನಾಡಿನಿಂದ ಬಂದು ಕೌಂಟಿ ಇನ್ನಲ್ಲಿ ರೂಮ್ ತೆಗೆದುಕೊಂಡಿದ್ದಾನೆ. ಆತನ ವಿರುದ್ಧ ದೆಹಲಿ, ಮಹಾರಾಷ್ಟ್ರ, ಕೇರಳ ಮತ್ತಿತರ ಕಡೆ ಪ್ರಕರಣಗಳು ದಾಖಲಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಸ್ಟಾರ್ ಹೊಟೇಲ್‌ಗಳಲ್ಲಿ ಉಳಿದುಕೊಂಡು ಅಲ್ಲಿನ ಮಾಲೀಕರನ್ನು ವಂಚಿಸುತ್ತಿದ್ದ. ಒಳ್ಳೆಯ ಇಂಗ್ಲಿಷ್ ಮಾತನಾಡುತ್ತಾ, ದುಬಾರಿ ಮೌಲ್ಯದ ವೇಷಭೂಷಣವನ್ನು ತೊಡುತ್ತಿದ್ದ. 1996ರಿಂದ ಈ ರೀತಿ ಮಾಡುತ್ತಿದ್ದು, ಆತನ ವಿರುದ್ಧ ಒಟ್ಟು 49 ಪ್ರಕರಣಗಳು ದಾಖಲಾಗಿವೆ’’ ಎಂದು ಹೇಳಿದ್ದಾರೆ,(ಏಜೆನ್ಸೀಸ್).
500 ರೂ. ಪೆಟ್ರೋಲ್ ಹಾಕಿಸಿದ ಚಾಲಕನಿಗೆ ಕಾದಿತ್ತು ಅಚ್ಚರಿ! ಇಂಧನ ಬಿಲ್ ನೋಡಿ ಕಕ್ಕಾಬಿಕ್ಕಿ | Petrol