ಬೆಂಗಳೂರು: ರಾಜಧಾನಿಯ ಹೃದಯ ಭಾಗದಲ್ಲಿರುವ ಬೆಂಗಳೂರು ಅರಮನೆ ಮೈದಾನಕ್ಕೆ ಒಳಪಟ್ಟ ಜಾಗವನ್ನು ಬಳಸಿಕೊಂಡು ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆ ವಿಸ್ತರಣೆ ಯೋಜನೆ ಜಾರಿ ಸಂಬಂಧ ಮೈಸೂರು ರಾಜವಶಂಸ್ಥರಿಗೆ ಪರಿಹಾರದ ರೂಪದಲ್ಲಿ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ (ಟಿಡಿಆರ್) ವಿತರಿಸುವಂತೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಸುಪ್ರೀಂಕೋರ್ಟ್‌ನ ಈ ಆದೇಶದಿಂದಾಗಿ ದಶಕದಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ವಿಸ್ತರಣೆ ಯೋಜನೆಯ ಪರಿಹಾರ ವಿತರಣೆ ಇತ್ಯರ್ಥ ಕಂಡಂತಾಗಿದೆ. ಜತೆಗೆ ಸಂಚಾರ ದಟ್ಟಣೆಗೆ ಒಳಗಾಗಿರುವ ಬಳ್ಳಾರಿ ರಸ್ತೆ ಹಾಗೂ ಜಯಮಹಲ್ ರಸ್ತೆಯನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅವಕಾಶ ದೊರೆತಿದೆ. ಅರಮನೆ ಮೈದಾನದ ಜಾಗವು ಯಾರು ಒಡೆತನ ವಹಿಸಬೇಕೆಂಬ ಸಮಸ್ಯೆ ದಶಕಗಳಿಂದ ಇತ್ಯರ್ಥ ಕಾಣದೆ ನ್ಯಾಯಾಲಯದ ಮೆಟ್ಟಿಲು ಹತ್ತಿತ್ತು. ಇದರಿಂದಾಗಿ ರಸ್ತೆ ವಿಸ್ತರಣೆ ಆರಂಭಿಸಲು ತಾಂತ್ರಿಕ ತೊಂದರೆ ಅಡ್ಡಿಯಾಗಿತ್ತು. 3-4 ಬಾರಿ ಕಾಮಗಾರಿ ಆರಂಭಿಸಲು ಬಿಬಿಎಂಪಿ ಮುಂದಾದರೂ, ಕೇಸ್ ಇತ್ಯರ್ಥವಾಗಿಲ್ಲ ಎಂಬ ನೆಪ ಮಾಡಿ ರಸ್ತೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗುತ್ತಿತ್ತು. ಸ್ವತ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ನಾಗರಿಕರರ ಹಿತದೃಷ್ಟಿಯಿಂದ ರಸ್ತೆ ಅಗಲೀಕರಣ ಮಾಡಲು ಪ್ರಕರಣ ಇತ್ಯರ್ಥವಾಗಬೇಕೆಂದು ಅಭಿಪ್ರಾಯಪಟ್ಟಿದ್ದರು. ಆದರೆ, ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಕೈಗೊಳ್ಳದ ಕಾರಣ ಟಿಡಿಆರ್ ವಿತರಣೆಗೆ ಒಪ್ಪಿಗೆ ನೀಡಿದ್ದರೂ, ಅನುಷ್ಠಾನಕ್ಕೆ ತರಲು ವಿಫಲವಾಗಿತ್ತು.
6 ವಾರ ಕಲಾವಕಾಶ:
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ.ಸುಂದರೇಶ್ ಮತ್ತು ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಈ ವೇಳೆ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಅಡಿಯಲ್ಲಿ ಮಾರುಕಟ್ಟೆ ಮೌಲ್ಯದ ಪ್ರಕಾರ ಟಿಡಿಆರ್‌ಅನ್ನು 6 ವಾರಗಳಲ್ಲಿ ವಿತರಿಸಬೇಕು ಎಂದು ಸಮಯ ನಿಗದಿ ಮಾಡಿ ಆದೇಶಿಸಿದೆ. ಈ ಪ್ರಕರಣವು ನ್ಯಾಯಾಂಗ ನಿಂದನೆ ಅರ್ಜಿ ಆಗಿರುವ ಕಾರಣ ಸರ್ಕಾರ ಆದೇಶವನ್ನು ಪಾಲಿಸಬೇಕಾಗುತ್ತದೆ.
ವಿಚಾರಣೆ ವೇಳೆ ಸ್ವಾಧೀನಕ್ಕೆ ಪಡೆಯುವ ಅಸ್ತಿಗೆ ಪ್ರತಿಯಾಗಿ ಪರಿಹಾರ ನಿಡುವ ಟಿಡಿಆರ್ ಅನ್ನು ಕಾಲ್ಪನಿಕ ಮೌಲ್ಯ ಆಧರಿಸಿ ನಿರ್ಧರಿಸುವುದು ಸರಿಯಲ್ಲ. ನಿಯಮಾನುಸಾರವೇ ಪರಿಹಾರ (ಟಿಡಿಆರ್) ನಿಗದಿಪಡಿಸಬೇಕಾಗುತ್ತದೆ ಎಂಬುದಾಗಿ ಪೀಠವು ಸರ್ಕಾರಕ್ಕೆ ತಿಳಿವಳಿಕೆ ನೀಡಿತು.
16 ಎಕರೆಗೆ 13.91 ಲಕ್ಷ ಚದರಡಿ ಪರಿಹಾರ !
ಬೆಂಗಳೂರು ಅರಮನೆ ಮೈದಾನವು ಒಟ್ಟು 470 ಎಕರೆಯನ್ನು ಹೊಂದಿದೆ. ಈ ಪೈಕಿ ಜಾಗದ ಉತ್ತರಕ್ಕಿರುವ ಜಯಮಹಲ್ ರಸ್ತೆ ಹಾಗೂ ಪಶ್ಚಿಮಕ್ಕಿರುವ ಬಳ್ಳಾರಿ ರಸ್ತೆಯಲ್ಲಿ ರಸ್ತೆ ವಿಸ್ತರಣೆಗೆ 15 ಎಕರೆ 39 ಗುಂಟೆ ಪ್ರದೇಶವನ್ನು ಸ್ವಾಧೀನಕ್ಕೆ ಪಡೆಯಬೇಕಿದೆ. ಸ್ವಾಧೀನ ಪಡೆಯುವ ಜಾಗಕ್ಕೆ ಪರಿಹಾರ ನಿಗದಿ ಹಲವು ಬಾರಿ ಬದಲಾಗಿದೆ. ಸರ್ಕಾರವು ಇದು ತನ್ನ ಜಾಗವೆಂದು ಕೋರ್ಟ್‌ನಲ್ಲಿ ವಾದಿಸಿದರೆ, ರಾಜವಂಶಸ್ಥರು ಅರಮನೆ ಜಾಗವು ತಮ್ಮ ಸುಪರ್ದಿಯಲ್ಲಿರುವ ಕಾರಣ ತಮಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿತ್ತು. ಹೀಗಾಗಿ ಪರಿಹಾರ ವಿತರಣೆ ಇತ್ಯರ್ಥವಾಗದೆ ಟಿಡಿಆರ್ ಯಾರಿಗೆ ವಿತರಿಸಬೇಕೆಂಬುದು ದೊಡ್ಡ ಪ್ರಶ್ನೆಯಾಗಿ ಉಳಿದಿತ್ತು. 2019ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಜಾಗಕ್ಕೆ ಟಿಡಿಆರ್ ರೂಪದಲ್ಲಿ 13.91 ಲಕ್ಷ ಚದರಡಿ ವಿಸ್ತೀರ್ಣದ ನಿರ್ಮಿಸಿದ ಪ್ರದೇಶ ಹಸ್ತಾಂತರಿಸಲು ನಿರ್ಧರಿಸಲಾಗಿತ್ತು. ಆದರೆ, ಆಗಿನ ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶ ಜಾರಿಗೊಳಿಸಿದರೆ 1,400 ಕೋಟಿ ರೂ. ಮೌಲ್ಯದ ಟಿಡಿಆರ್ ವಿತರಿಸದಂತಾಗುತ್ತದೆ ಎಂದು ಅಂದಾಜಿಸಿ ಅನುಷ್ಠಾನಕ್ಕೆ ತರಲು ಹಿಂದೇಟು ಹಾಕಿದ್ದರು. ಆ ಬಳಿಕ ಹಿಂದಿನ ಬಿಜೆಪಿ ಸರ್ಕಾರ ಟಿಡಿಆರ್ ನೀಡಿಕೆಯನ್ನು ಸ್ಥಗಿತಗೊಳಿಸಿತ್ತು. ಕಳೆದ ಮಾರ್ಚ್‌ನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮತ್ತೆ ಟಿಡಿಆರ್ ವಿತರಿಸಲು ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಮೌಲ್ಯ ನಿರ್ಧಾರವನ್ನು ಸಮರ್ಪಕವಾಗಿ ಮಾಡಿಲ್ಲವೆಂದು ದೂರಿ ರಾಜವಶಂಸ್ಥರು ಸುಪ್ರೀಂ ಕದ ತಟ್ಟಿದ್ದರು.