ಮುಂಜಾನೆ..ಆತನಿನ್ನೂ ಎದ್ದಿರಲಿಲ್ಲ, ಪತ್ನಿ ಪಕ್ಕದಲ್ಲಿದ್ದಳು; ಗಾರ್ಡನ್​ನಿಂದ ಕೇಳಿದ ಶಬ್ದಕ್ಕೆ ನಗ್ನವಾಗಿಯೇ ಓಡಿ ಹೋದ..!

Australia 6 may 20
Published on

ಕೆಲವರಿಗೆ ತಾವು ಸಾಕಿದ ಬೆಕ್ಕು, ನಾಯಿಗಳ ಮೇಲೆ ಅದೆಂಥಾ ಪ್ರೀತಿಯಿರುತ್ತದೆ ಎಂದರೆ, ಅವುಗಳನ್ನೂ ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ಕಾಳಜಿ ಮಾಡುತ್ತಾರೆ.

ಅದಕ್ಕೊಂದು ತಾಜಾ ಉದಾಹರಣೆಯೆಂದರೆ ಆಸ್ಟ್ರೇಲಿಯಾದ ಈ ವ್ಯಕ್ತಿ. ತನ್ನ ಮನೆಯ ಪುಟ್ಟ ಬೆಕ್ಕಿನ ಮರಿಯ ಜೀವ ಹೋಗುತ್ತಿದ್ದಾಗ ಹಿಂದೆ ಮುಂದೆ ನೋಡದೆ ಹೋರಾಟಕ್ಕೆ ಇಳಿದಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಅದನ್ನು ಕಾಪಾಡಿದ್ದಾರೆ.

ಅಷ್ಟಕ್ಕೂ ಆ ಬೆಕ್ಕಿಗೆ ಏನಾಗಿತ್ತು? ಈ ವ್ಯಕ್ತಿ ಅದನ್ನು ಹೇಗೆ ಕಾಪಾಡಿದರು..? ಈ ಸ್ಟೋರಿ ಓದಿ..

ಪಶ್ಚಿಮ ಆಸ್ಟ್ರೇಲಿಯಾದ ನಿವಾಸಿಯಾಗಿರುವ ನಿಕ್​ ಕಿರ್ನ್ಸ್​ ಅವರು ಹೆಬ್ಬಾವಿನ ಹಿಡಿತಕ್ಕೆ ಸಿಲುಕಿದ್ದ ತನ್ನ ಬೆಕ್ಕಿನ ಮರಿಯನ್ನು ಕಾಪಾಡಿಕೊಂಡ ರೋಚಕ ಘಟನೆಯ ಸುದ್ದಿ ಇದು.

ಅಂದು ಮುಂಜಾನೆ ನಿಕ್​ ಕಿರ್ನ್ಸ್​ ಮತ್ತು ಅವರ ಪತ್ನಿ ಇನ್ನೂ ಎದ್ದಿರಲಿಲ್ಲ. ಗಾರ್ಡನ್​​ನಿಂದ ಏನೋ ನರಳಾಟದ ಸದ್ದು ಕೇಳಿತು. ಏನದು ಎಂದು ಕಿಟಕಿಯಿಂದ ನೋಡಿದರೆ ಅಲ್ಲಿ ಸುಮಾರು 2.5 ಮೀಟರ್​ ಉದ್ದದ ಹೆಬ್ಬಾವು ಕಿರ್ನ್ಸ್​ ಅವರ ಬೆಕ್ಕಿನ ಮರಿಯನ್ನು ಸುತ್ತಿಕೊಂಡಿತ್ತು. ಅದನ್ನು ಗುಳುಂ ಮಾಡಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿತ್ತು.

ಆ ಕ್ಷಣ ಕಿರ್ನ್ಸ್ ಇನ್ನೇನೂ ಯೋಚನೆ ಮಾಡಲಿಲ್ಲ. ನಿಜ ಹೇಳಬೇಕೆಂದರೆ ಅವರ ಮೈಮೇಲೆ ಬಟ್ಟೆಯೂ ಇರಲಿಲ್ಲ ! ಆದರೆ ಬೆಕ್ಕಿನ ಮರಿಯನ್ನು ಹಾವು ಹಿಡಿದ್ದು ನೋಡಿ ಭಯಗೊಂಡು, ಅದನ್ನು ರಕ್ಷಿಸುವ ಧಾವಂತದಲ್ಲಿ ಅವರಿಗೆ ಅದ್ಯಾವುದೂ ಗಮನಕ್ಕೆ ಬರಲಿಲ್ಲ. ಒಂದೇ ಜಿಗಿತಕ್ಕೆ ಗಾರ್ಡ್​ನ್​ಗೆ ಓಡಿದ್ದರು. ಇತ್ತ ಅವರ ಪತ್ನಿ ಕೂಗುತ್ತಿದ್ದರು. ಬಟ್ಟೆಯಿಲ್ಲ ಎಂದು ಹೇಳುತ್ತಿದ್ದರೂ ಕೇಳಿಸಿಕೊಳ್ಳದೆ ಓಡಿದ್ದರು.

ಬೆಕ್ಕಿನ ಸಂಕಟ ನೋಡಿದ ಕಿರ್ನ್ಸ್ ಮತ್ತು ಅವರ ಪತ್ನಿ ಹೆಬ್ಬಾವಿನೊಂದಿಗೆ ಹೋರಾಟಕ್ಕೆ ಇಳಿದಿದ್ದರು. ಪತ್ನಿ ಹೆಬ್ಬಾವಿನ ಬಾಲ ಹಿಡಿದುಕೊಂಡಿದ್ದರೆ, ಕಿರ್ನ್ಸ್​ ಅದರಿಂದ ಬೆಕ್ಕನ್ನು ಬಿಡಿಸಿಕೊಳ್ಳುವ ಯತ್ನದಲ್ಲಿದ್ದರು. ಕೊನೆಗೂ ಹೋರಾಟಕ್ಕೆ ಫಲ ಸಿಕ್ಕು, ಬೆಕ್ಕು ಪಾರಾಯಿತು. ಆದರೆ ಹೆಬ್ಬಾವು ಕಿರ್ನ್ಸ್​ ಕೈಗೆ ಬಲವಾಗಿ ಕಚ್ಚಿದೆ. ರಕ್ತ ಸೋರುವಷ್ಟು ಗಟ್ಟಿಯಾಗಿ ಕಚ್ಚಿದೆ.

ಆದರೆ ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ಕಿರ್ನ್ಸ್​ ಉಳಿಯುತ್ತಿರಲಿಲ್ಲ. ಆ ಕ್ಷಣಕ್ಕೆ ಹಾವು ಅಲ್ಲಿಂದ ಹೋಯಿತು. ಆದರೆ ಈಗ ಕಿರ್ನ್ಸ್​ ಪ್ರತಿದಿನ ಹಾವಿನ ಬಗ್ಗೆ ಒಂದು ನಿಗಾ ಇಟ್ಟಿದ್ದಾರೆ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net