

ಒಮ್ಮೊಮ್ಮೆ ಇಡೀ ಜಗತ್ತೇ ಅಚ್ಚರಿ ಪಡುವಂತಹ ಘಟನೆಗಳು ನಡೆದುಬಿಡುತ್ತವೆ. ಹಾಗೇ ಪವಾಡವೆಂಬಂತೆ ಜನರು ಅದರ ಬಗ್ಗೆ ಮಾತನಾಡುತ್ತಾರೆ.
40 ವರ್ಷಗಳ ಹಿಂದೆ ಅಮೆರಿಕದ ಮಿನ್ನೇಸೋಟದಲ್ಲಿ ನಡೆದ ಇಂಥದ್ದೇ ಒಂದು ಅಚ್ಚರಿ ಹುಟ್ಟಿಸುವ, ಭಯಾನಕ ಎನ್ನಿಸುವ ಘಟನೆ ಇದು. ಇದು ಓರ್ವ ಮಹಿಳೆಗೆ ಸಂಬಂಧಪಟ್ಟ ವಿಚಾರ. ಆ ಘಟನೆಯ ಬಳಿಕ ಅವರು 'ಫ್ರೋಜನ್ ಲೇಡಿ' (ಹೆಪ್ಪುಗಟ್ಟಿದ ಮಹಿಳೆ) ಎಂದೇ ಪ್ರಸಿದ್ಧರಾಗಿದ್ದಾರೆ. ಸ್ಟೋರಿ ಓದಿ..ನಿಮಗೂ ಅಬ್ಬಾ..ಎನ್ನಿಸದೆ ಇರದು..!
1980ರ ಡಿಸೆಂಬರ್ 20ರ, ಹಿಮಪಾತದ ರಾತ್ರಿ ಅದು. ಜೀನ್ ಹಿಲಿಯಾರ್ಡ್ ಎಂಬ ಯುವತಿ ತನ್ನ ಕಾರಿನಲ್ಲಿ ಮನೆಗೆ ಹೊರಟಿದ್ದಳು. ಸ್ವಲ್ಪ ದೂರ ಹೋಗುತ್ತಿದ್ದಂತೆ ಆಕೆಯ ಕಾರು ಸಣ್ಣ ಅಪಘಾತಕ್ಕೀಡಾಗಿ, ಮುಂದೆ ಚಲಿಸದಂತೆ ಆಯಿತು. ಜೀನ್ಗೆ ಹೆಚ್ಚೇನೂ ಅಪಾಯ ಆಗಲಿಲ್ಲ. ಅಲ್ಲಿ ತುಂಬ ಹಿಮ ಬೀಳುತ್ತಿದ್ದುದರಿಂದ ಜೀನ್ಗೆ ಅಲ್ಲಿ ಬೆಳಗ್ಗೆವರೆಗೂ ಇರುವುದು ಸಾಧ್ಯವಿಲ್ಲ ಎನ್ನಿಸಿತು. ಹಾಗಾಗಿ ಕಾರನ್ನು ಆ ಸ್ಥಳದಲ್ಲೇ ಬಿಟ್ಟು ಅಲ್ಲಿಂದ ಸುಮಾರು 2 ಮೈಲುಗಳಷ್ಟು ದೂರವಿದ್ದ ತನ್ನ ಸ್ನೇಹಿತೆಯ ಮನೆಗೆ ನಡೆದುಕೊಂಡು ಹೋಗಲು ನಿರ್ಧರಿಸಿದಳು.
ಆಕೆಯೇನೋ ಹೊರಟಳು. ಆ ಸಂದರ್ಭದಲ್ಲಿ ಮೈನಸ್ 30 ಡಿಗ್ರಿಯಷ್ಟು ಚಳಿ ಇತ್ತು. ಒಂದೆಡೆ ಹೀಮ ಬೀಳುತ್ತಿತ್ತು..ಚಳಿ ಕೊರೆಯುತ್ತಿತ್ತು..ಆದರೆ ಅದನ್ನೆಲ್ಲ ಲೆಕ್ಕಿಸದೆ ನಡೆಯುತ್ತಿದ್ದಳು ಜೀನ್.
ಆದರೆ ಒಂದು ಹಂತದಲ್ಲಿ ಹಿಮಯುಕ್ತ ಚಳಿಯನ್ನು ಜೀನ್ಗೆ ತಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ. ಇನ್ನೇನು 15 ಅಡಿ ನಡೆದರೆ ಸ್ನೇಹಿತೆಯ ಮನೆ ಸಿಗುತ್ತಿತ್ತು. ಆದರೆ ಅಲ್ಲಿವರೆಗೆ ಹೋಗಲಾರದೆ ಜೀನ್ ಪ್ರಜ್ಞೆ ತಪ್ಪಿ ಬಿದ್ದೇಹೋದಳು. ಆಗ ಮಧ್ಯರಾತ್ರಿ 1 ಗಂಟೆ.
ಇನ್ನು ಜೀನ್ ಸ್ನೇಹಿತೆಗೆ ಆಕೆ ಬರುವುದೇನೂ ಗೊತ್ತಿರಲಿಲ್ಲ. ಯಾಕೆಂದರೆ ಜೀನ್ ಕೂಡ ಅಚಾನಕ್ ಆಗಿ ಹೊರಟಿದ್ದಳು. ಆಕೆಯ ಸ್ನೇಹಿತೆ ಬೆಳಗ್ಗೆ ಮನೆಯ ಬಾಗಿಲು ತೆಗೆದಾಗಲೇ ಅವಳಿಗೆ ವಿಷಯ ಗೊತ್ತಾಗಿದ್ದು. ಎಚ್ಚರವಿಲ್ಲದೆ ಬಿದ್ದಿದ್ದ ಜೀನ್ಳನ್ನು ನೋಡಿದ್ದು..!
ಆದರೆ ಜೀನ್ ಆಗ ಮನುಷ್ಯಳಂತೆ ಇರಲಿಲ್ಲ. ಹಿಮದ ಮುದ್ದೆಯಾಗಿದ್ದಳು. ಥೇಟ್ ಹಿಮದ ಪ್ರತಿಮೆಯಂತೆ ಕಾಣುತ್ತಿದ್ದಳು. ದೇಹಪೂರ್ತಿ ಹಿಮದಿಂದ ಗಟ್ಟಿಯಾಗಿಬಿಟ್ಟಿತ್ತು. ಆದರೆ ಕಣ್ಣುಗಳು ತೆರೆದೇ ಇದ್ದವು..ಪ್ರಜ್ಞೆಯಿರಲಿಲ್ಲ. ಆಕೆಯ ಸ್ಥಿತಿಯನ್ನು ನೋಡಿದ ಸ್ನೇಹಿತೆ ಕೂಡಲೇ ಜೀನ್ಳನ್ನು ಆಸ್ಪತ್ರೆಗೆ ಸಾಗಿಸಿದಳು.
ಜೀನ್ ಇದ್ದ ಪರಿಸ್ಥಿತಿಯನ್ನು ನೋಡಿದ ವೈದ್ಯರೂ ಅಕ್ಷರಶಃ ಕಂಗಾಲಾಗಿದ್ದರು. ಆಕೆಯ ಜೀವ ಹೇಗೆ ಕಾಪಾಡುವುದು ಎಂಬುದೇ ಅವರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಆ ಕ್ಷಣದ ಮಟ್ಟಿಗೆ ಜೀನ್ ವೈದ್ಯರಿಗೆ ಸವಾಲಾಗಿ ಪರಿಣಮಿಸಿದ್ದಳು. ಆಕೆ ಯಾವ ಕಾರಣಕ್ಕೂ ಬದುಕುವುದು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ್ದರು.
ಜೀನ್ ದೇಹ ಎಷ್ಟು ಕಟ್ಟಿಕೊಂಡಿತ್ತೆಂದರೆ ಕೈಗಳನ್ನು ಅಲ್ಲಾಡಿಸಲು ಆಗುತ್ತಿರಲಿಲ್ಲ. ಬಾಯಿಗಳನ್ನು ತೆರೆಸಲೂ ಸಾಧ್ಯವಾಗುತ್ತಿರಲಿಲ್ಲ. ಹೃದಯ ನಿಮಿಷಕ್ಕೆ ಕೇವಲ 12 ಬಾರಿ ಬಡಿದುಕೊಳ್ಳುತ್ತಿತ್ತು. ಬ್ರೇನ್ ಕೂಡ ಕೆಲಸ ಮಾಡುತ್ತಿರಲಿಲ್ಲ. ಯಾವ ಕ್ಷಣದಲ್ಲಾದರೂ ಜೀವ ಹೋಗಬಹುದು ಎಂಬ ಸ್ಥಿತಿ ಅವಳದಾಗಿತ್ತು.
ಅಷ್ಟಾದರೂ ಸಹ ವೈದ್ಯರು ಹೋಪ್ ಕಳೆದುಕೊಳ್ಳಲಿಲ್ಲ. ವಿದ್ಯುತ್ ಕಂಬಳಿಯ ಮೂಲಕ ಜೀನ್ ದೇಹವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನ ಮಾಡಿದರು. ದೇಹದ ಮೇಲೆ ಬಿಗಿಯಾಗಿ ಕಟ್ಟಿದ್ದ ಹಿಮವನ್ನು ಕರಗಿಸಲು ನೋಡಿದರು.
ಸುಮಾರು ಒಂದು ತಾಸುಗಳ ಬಳಿಕ ಜೀನ್ ದೇಹ ಅಲ್ಲಾಡಲು ಶುರುವಾಯಿತು. ಬಳಿಕ ಸುಮಾರು 40 ದಿನಗಳ ಕಾಲ ಅವಳನ್ನು ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಜೀನ್ ಚೇತರಿಸಿಕೊಂಡು ಮನೆಗೆ ಹೋದಳು.
ಆದರೆ ಈ ಘಟನೆ ಬಳಿಕ ಅವಳಿಗೆ ಫ್ರೋಜನ್ ಲೇಡಿ ಎಂದೇ ಹೆಸರು ಬಂತು. ಅಷ್ಟು ಗಟ್ಟಿಯಾಗಿದ್ದ ದೇಹ ಸಹಜ ಸ್ಥಿತಿಗೆ ಬಂದಿದ್ದು ನಿಜಕ್ಕೂ ಪವಾಡ ಎಂದೇ ವೈದ್ಯರು ಹೇಳುತ್ತಾರೆ.(ಏಜೆನ್ಸೀಸ್)