ಒಂದು ಕುಟುಂಬವನ್ನೇ ಕಾಪಾಡಿತು ಈ ಬೆಕ್ಕು...

Cat 1 may 20
Published on

ಮನೆಯಲ್ಲಿ ಬೆಕ್ಕುಗಳು ಎಲ್ಲೆಂದರಲ್ಲಿ ಹೋಗುತ್ತಿರುತ್ತವೆ. ಬೆಡ್​, ಖುರ್ಚಿ, ಅಡುಗೆ ಮನೆ ಎಲ್ಲ ಕಡೆಯೂ ಅವಕ್ಕೆ ಮುಕ್ತ ಅವಕಾಶ ಇರುತ್ತದೆ.

ಅಲ್ಲಲ್ಲೇ ಸಣ್ಣಪುಟ್ಟ ಕೀಟಲೆ ಮಾಡುತ್ತ, ಬೇಕಾಗಿದ್ದನ್ನು ಆರಾಮಾಗಿ ತಿನ್ನುತ್ತ, ನಿದ್ದೆ ಮಾಡುತ್ತ, ಆಟವಾಡುತ್ತ ಕಾಲಕಳೆಯುತ್ತವೆ. ಇವು ನಾಯಿಗಳಷ್ಟು ಸೂಕ್ಷ್ಮ ಪ್ರಾಣಿಗಳು ಎನಿಸಿಕೊಂಡಿಲ್ಲ. ಆದರೆ ಇಲ್ಲೊಂದು ಬೆಕ್ಕು ತನ್ನ ಒಂದು ಅದ್ಭುತ ಕೆಲಸದಿಂದ ಸಿಕ್ಕಾಪಟೆ ಸುದ್ದಿಯಾಗಿದೆ.

ಇದು ಕೆನಡಾದ ನ್ಯೂಫೌಂಡ್​ಲ್ಯಾಂಡ್​ ಪ್ರಾಂತ್ಯದಲ್ಲಿ ನಡೆದ ಘಟನೆ. ಮಾಲೀಕ ತನ್ನ ಬೆಕ್ಕನ್ನು ವಿಪರೀತ ಹೊಗಳಿದ್ದಾನೆ. ಅದಕ್ಕೆ ಕಾರಣವನ್ನೂ ತಿಳಿಸಿದ್ದಾನೆ.

ಕಳೆದ ಶನಿವಾರ ರಾತ್ರಿ ಮಲಗುವುದು ತುಂಬ ತಡವಾಯಿತು. ಹೇಗೂ ಮಲಗುವುದು ಲೇಟ್​ ಆಯಿತು ಎಂದು, ಸ್ಲೋ ಕುಕ್ಕರ್​ನಲ್ಲಿ ಈರುಳ್ಳಿಗಳನ್ನು ಬೇಯಿಸಲು ಇಟ್ಟೆ. ಜಾಮ್​ ಮಾಡಬೇಕಾಗಿದ್ದ ಕಾರಣ ಅದನ್ನಿಟ್ಟು ಮಲಗಿದೆ.

ನಾನು ಮಲಗಿ ತುಂಬ ಹೊತ್ತು ಆಗಿರಲಿಲ್ಲ. ಮುಂಜಾನೆ ಸುಮಾರು 4.30ರ ಹೊತ್ತಿಗೆ ನನ್ನ ಬೆಕ್ಕು ಜೋಯಿ ತುಂಬ ವಿಚಿತ್ರವಾಗಿ ವರ್ತನೆ ಮಾಡಲು ಶುರು ಮಾಡಿತು.

ಸಾಮಾನ್ಯವಾಗಿ ನನ್ನ ಬೆಕ್ಕು ನಾನು ಮಲಗಿದ್ದಾಗ ನನ್ನನ್ನು ಡಿಸ್ಟರ್ಬ್​ ಮಾಡುವುದಿಲ್ಲ. ಆದರೆ ಅಂದು ಮಾತ್ರ ನನ್ನ ಬೆಡ್​ ಸುತ್ತ ತಿರುಗುತ್ತಿತ್ತು. ನಾನು ನಿದ್ದೆಗಣ್ಣಲ್ಲೇ ಅದಕ್ಕೆ ಗದರಿ ಸುಮ್ಮನೆ ಮಲಗಿಕೊಂಡಿದ್ದೆ. ಅಷ್ಟಾದರೂ  ನಾನು ಏಳದೆ ಇದ್ದಾಗ ಅದರ ಪಂಜದಿಂದ ನನ್ನ ಮುಖದ ಮೇಲೆ ಹೊಡೆಯಿತು.

ಆಗ ಥಟ್ಟನೆ ನಾನು ಎದ್ದೆ. ನನಗೆ ಅದೇನೋ ವಾಸನೆ ಬರಲು ಶುರುವಾಯಿತು. ಕೂಡಲೇ ಅಡುಗೆ ಮನೆಗೆ ಓಡಿದೆ. ಅಲ್ಲಿ ಸಂಪೂರ್ಣ ಹೊಗೆ ಆವರಿಸಿತ್ತು. ಇನ್ನು ಸ್ವಲ್ಪ ಹೊತ್ತಾಗಿದ್ದರೆ ಬೆಂಕಿ ಹೊತ್ತುಕೊಳ್ಳುತ್ತಿತ್ತು. ಅನಾಹುತ ಸ್ವಲ್ಪದರಲ್ಲೇ ತಪ್ಪಿತು. ಇಲ್ಲದಿದ್ದರೆ ನಾವ್ಯಾರೂ ಉಳಿಯುತ್ತಿರಲಿಲ್ಲ. ಅದಕ್ಕೆ ಕಾರಣ ನನ್ನ ಬೆಕ್ಕು ಎಂದು ಅವರು ಹೆಮ್ಮೆಯಿಂದ ತಿಳಿಸಿದ್ದಾರೆ.

ಈ ಘಟನೆಯ ಬಳಿಕ ಜೋಯಿಗೆ ನಮ್ಮ ಮನೆಯಲ್ಲಿ ವಿಶೇಷ ಸ್ಥಾನಮಾನ ಸಿಕ್ಕಿದೆ. ನಮ್ಮ ರಿಯಲ್​ ಹೀರೋ ನಮ್ಮನೆಯ ಬೆಕ್ಕು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net