ಈ ವರ್ಷ ನೊಂದಣಿ ಮಾಡಿಸಿದ ಕಾರಿಗೆ 2020ರಲ್ಲೇ ಬಂದಿತ್ತು ಟ್ರಾಫಿಕ್ ಚಲನ್! ಇದು ಹೇಗೆ ಸಾಧ್ಯ? ದಂಗಾದ ನೆಟ್ಟಿಗರು

Untitled design - 2024-02-24T181253.439
Published on

ಹೈದರಾಬಾದ್: 2024ರಲ್ಲಿ ತನ್ನ ಸ್ನೇಹಿತ ಹೊಸದಾಗಿ ಖರೀದಿಸಿದ ಕಾರನ್ನು ನೋಂದಾಯಿಸಿದ್ದಾರೆ. ಆದರೆ, ಈ ಕಾರಿಗೆ 2020ರಲ್ಲಿ ಟ್ರಾಫಿಕ್ ಚಲನ್ ಬಂದಿದೆ ಎಂಬ ಶಾಕಿಂಗ್ ಸಂಗತಿಯನ್ನು ಶುಕ್ರವಾರ (ಫೆಬ್ರವರಿ 23) ಎಕ್ಸ್ (ಈ ಹಿಂದಿನ ಟ್ವಿಟರ್) ಬಳಕೆದಾರರೊಬ್ಬರು ತಮ್ಮ ಖಾತೆಯಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ತೆಲಂಗಾಣ ರಾಜ್ಯ ಪೊಲೀಸ್ ಅಧಿಕೃತ ವೆಬ್‌ಸೈಟ್‌ನಲ್ಲಿ ಚಲನ್ ವಿವರಗಳನ್ನು ತೋರಿಸುವ ಫೋಟೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.

'ನೈಟ್ ಔಲ್' ಹೆಸರಿನ ಎಕ್ಸ್ ಬಳಕೆದಾರರೊಬ್ಬರು ಇದನ್ನು "ಟೈಮ್ ಟ್ರಾವೆಲಿಂಗ್ ಟ್ರಾಫಿಕ್ ಟಿಕೆಟ್" ಎಂದು ಶೀರ್ಷಿಕೆ ಕೊಟ್ಟು ಮಾಹಿತಿ ಹಂಚಿಕೊಂಡಿದ್ದು, ಈ ಸಮಸ್ಯೆಯನ್ನು ಪರಿಹರಿಸಲು ನಗರ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ. 2024ರಲ್ಲಿ ಖರೀದಿಸಿದ ಹೊಸ ಕಾರಿಗೆ ಸಂಚಾರ ನಿಯಮ ಉಲ್ಲಂಘನೆಗಾಗಿ 2020ರಲ್ಲೇ ಹೇಗೆ ಚಲನ್​ ನೀಡಲಾಯ್ತು ಎಂದು ಪ್ರಶ್ನಿಸಿದ್ದಾರೆ.

ನನ್ನ ಸ್ನೇಹಿತ ತನ್ನ ಟಾಟಾ ನೆಕ್ಸಾನ್ ಕಾರನ್ನು ಡಿಸೆಂಬರ್ 22, 2023ರಂದು ಖರೀದಿಸಿದರು. ಅದನ್ನು ಜನವರಿ 6, 2024ರಂದು ನೋಂದಾಯಿಸಿದರು. ಚಲನ್ ಬಂದಿರಬಹುದೇ ಎಂದು ಸುಮ್ಮನೇ ಪರಿಶೀಲಿಸಿದಾಗ ಡಿಸೆಂಬರ್​ 14, 2020ದಂದು ಚಲನ್ ಬಂದಿರುವುದು ಪತ್ತೆಯಾಗಿದೆ.

ನಂಬರ್ ಪ್ಲೇಟ್​ ವಿಚಾರವಾಗಿ ಚಲನ್​ ರವಾನೆಯಾಗಿದೆ. ಆದರೆ, ಆ ವರ್ಷದಲ್ಲಿ ಅವರು ಕಾರನ್ನೇ ಖರೀದಿ ಮಾಡಿರಲಿಲ್ಲ ಅಂದಮೇಲೆ ಈ ದಂಡ ಹೇಗೆ ಸಾಧ್ಯ? ತೆಲಂಗಾಣ ಸಂಚಾರ ಪೊಲೀಸರೇ ದಯವಿಟ್ಟು ಈ ಸಮಸ್ಯೆಗೆ ಪರಿಹಾರ ನೀಡಿ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net