ಮೈಸೂರು ಲೋಕಸಭಾ ಕ್ಷೇತ್ರ : ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಸಾ.ರಾ. ಮಹೇಶ್ ಸ್ಪರ್ಧೆ?

sa.ra
Published on

ಮೈಸೂರು: ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈ ರಾಜಕೀಯ ಬೆಳವಣಿಗೆಯ ನಡುವೆ ಜೆಡಿಎಸ್ ಮಾಜಿ ಶಾಸಕ ಸಾ.ರಾ. ಮಹೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತಂತ್ರಗಾರಿಕೆ ನಡೆಯುತ್ತಿದೆ.

ಜೆಡಿಎಸ್‌ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಬಿಟ್ಟುಕೊಡುವ ಬದಲು ಸಾ.ರಾ. ಮಹೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೂಪಿಸಿದ್ದು, ಈ ಕುರಿತು ಸಾ.ರಾ. ಮಹೇಶ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಲೋಕಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕುರಿತು ಬಿಜೆಪಿ-ಜೆಡಿಎಸ್ ನಾಯಕರ ನಡುವೆ ಮಾತುಕತೆ ನಡೆಯುತ್ತಿದ್ದು, ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳ ಟಿಕೆಟ್ ಜೆಡಿಎಸ್‌ಗೆ ದೊರೆಯುವುದು ನಿಶ್ಚಿತವಾಗಿದ್ದು, ಇದರೊಂದಿಗೆ ಮೈಸೂರು- ಕೊಡಗು, ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಪಡೆಯಲು ಜೆಡಿಎಸ್ ಕಸರತ್ತು ನಡೆಸುತ್ತಿದೆ.

ಬಿಜೆಪಿ ತಂತ್ರಗಾರಿಕೆ:

ಜೆಡಿಎಸ್‌ಗೆ ಮೈಸೂರು-ಕೊಡಗು ಕ್ಷೇತ್ರವನ್ನು ಬಿಟ್ಟುಕೊಡುವ ಬದಲು ಜೆಡಿಎಸ್ ನಾಯಕರ ಮನವೊಲಿಸಿ ಜೆಡಿಎಸ್ ಮಾಜಿ ಶಾಸಕ ಸಾ.ರಾ. ಮಹೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದರೆ ಹೇಗೆ ಎಂಬ ಆಲೋಚನೆ ಬಿಜೆಪಿ ನಾಯಕರಲ್ಲಿದ್ದು, ಈ ನಿಟ್ಟಿನಲ್ಲಿ ಪಕ್ಷದ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ. ಇದಕ್ಕೆ ಜೆಡಿಎಸ್ ವರಿಷ್ಠರು ಸಮ್ಮತಿ ಸೂಚಿಸಿದರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ.

ಪ್ರತಾಪ್ ಸಿಂಹ ಈ ಬಾರಿ ಟಿಕೆಟ್ ದೊರೆಯುವ ನಿರೀಕ್ಷೆಯೊಂದಿಗೆ ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಂಚರಿಸಿ ಚುನಾವಣೆಗೆ ತಯಾರಿ ಮಾಡಿಕೊಳ್ಳುತಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಅವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳ ಕುರಿತು ರಿಪೋರ್ಟ್ ಕಾರ್ಡ್ ಅನ್ನು ಹೊರತಂದು ಪಕ್ಷದ ವರಿಷ್ಠರು ಹಾಗೂ ಪ್ರಮುಖರಿಗೆ ನೀಡುತ್ತಿದ್ದಾರೆ. ಈ ಬಾರಿಯೂ ಟಿಕೆಟ್ ದೊರೆಯುವ ವಿಶ್ವಾಸವನ್ನು ಪ್ರತಾಪ್ ಸಿಂಹ ಹೊಂದಿದ್ದಾರೆ.

ಸಾ.ರಾ. ಮಹೇಶ್ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸುದ್ದಿಯನ್ನು ಸ್ವತಃ ಸಾ.ರಾ. ಮಹೇಶ್ ಅವರೇ ಖಚಿತ ಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು ‘ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಪಡೆಯಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲದೆ ಇದ್ದರೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಬಿಜೆಪಿಯ ನಾಯಕರು ನನ್ನೊಂದಿಗೆ ಚರ್ಚಿಸಿರುವುದು ನಿಜ. ಈ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದು ತಿಳಿಸಿದ್ದಾರೆ.

ಸಾ.ರಾ. ಮಹೇಶ್ ಈ ಹಿಂದೆ ಬಿಜೆಪಿಯಲ್ಲಿ ಇದ್ದವರು. ಹೀಗಾಗಿ ಬಿಜೆಪಿಯ ಎಲ್ಲ ನಾಯಕರು, ಕಾರ್ಯಕರ್ತರೊಂದಿಗೆ ಅವರಿಗೆ ಆತ್ಮೀಯ ಒಡನಾಟವಿದ್ದು, ಅವರಿಗೆ ಟಿಕೆಟ್ ನೀಡಿದರೆ ಪಕ್ಷದಲ್ಲಿ ವಿರೋಧ ಕೇಳಿಬರುವ ಸಾಧ್ಯತೆ ಕಡಿಮೆ. ಬಿಜೆಪಿಯಲ್ಲಿ ಪ್ರತಾಪ್ ಸಿಂಹ ಅವರ ವಿರೋಧಿ ಬಣ ಈ ನಿಟ್ಟಿನಲ್ಲಿ ಹೆಚ್ಚು ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಈ ರಾಜಕೀಯ ಚದುರಂಗಾಟದಲ್ಲಿ ಗೆಲುವು ಯಾರಿಗೆ ದೊರೆಯುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net