ಅಮರಾವತಿ: ಲೋನ್ ಆ್ಯಪ್ (Loan App) ಮೂಲಕ ಎರಡು ಸಾವಿರ ರೂಪಾಯಿ ಸಾಲ ಪಡೆದಿದ್ದ ವ್ಯಕ್ತಿಯೋರ್ವ ರಿಕವರಿ ಏಜೆಂಟರ ಕಾಟ ತಾಳಲಾರದೆ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಮೃತರನ್ನು ನರೇಂದ್ರ (25) ಎಂದು ಗುರುತಿಸಲಾಗಿದ್ದು, ಲೋನ್ ಆ್ಯಪ್ (Loan App) ಮೂಲಕ ಪಡೆದಿದ್ದ ಸಾಲವನ್ನು ಸರಿಯಾದ ಸಮಯಕ್ಕೆ ಕಟ್ಟದಿದ್ದಕ್ಕೆ ಆ್ಯಪ್ ಏಜೆಂಟರು ತನ್ನ ಪತ್ನಿ ಅಖಿಲಾರ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನು (Morphed Photo) ಸಂತ್ರಸ್ತನ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಕಳುಹಿಸಿದ್ದು, ಈ ವಿಚಾರವಾಗಿ ಮನನೊಂದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವೃತ್ತಿಯಲ್ಲಿ ಮೀನುಗಾರನಾಗಿರುವ ನರೇಂದ್ರ ಈ ವರ್ಷ (2024) ಅಕ್ಟೋಬರ್ 28ರಂದು ಅಖಿಲಾ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿ ಇಬ್ಬರೂ ವಿಶಾಖಪಟ್ಟಂನಲ್ಲಿ ನೆಲೆಸಿದ್ದರು. ಹಮಾವಾನ ವೈಪರಿತ್ಯದಿಂದಾಗಿ ಸಮುದ್ರಕ್ಕೆ ಇಳಿಯದ ಕಾರಣ ಆರ್ಥಿಕ ನಷ್ಟ ಉಂಟಾಗಿತ್ತು. ಈ ವೇಳೆ ತನ್ನ ಖರ್ಚು ನಿಭಾಯಿಸಲು ತ್ವರಿತ ಸಾಲ ನೀಡುವ ಆ್ಯಪ್‌ನಿಂದ (Loan App) 2,000 ರೂ. ಸಾಲ ಪಡೆದುಕೊಂಡಿದ್ದ.
ಸಾಲ ಪಡೆದ ಕೆಲದಿನಗಳ ನಂತರ ಆ್ಯಪ್ ಏಜೆಂಟರು ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಲು ಶುರು ಮಾಡಿದ್ದಾರೆ. ಬಳಿಕ ಅವಾಚ್ಯ ಶಬ್ದಗಳಿಂದ ನರೇಂದ್ರರನ್ನು ನಿಂದಿಸಲು ಶುರು ಮಾಡಿದ್ದು, ನರೇಂದ್ರ ಪತ್ನಿಯ ಮಾರ್ಫ್ ಮಾಡಿದ ಅಶ್ಲೀಲ ಫೋಟೋವನ್ನ (Morphed Photo) ಕುಟುಂಬಸ್ಥರು, ಸ್ನೇಹಿತರಿಗೆ ಕಳುಹಿಸಿದ್ದಾರೆ. ಕೊನೆಗೆ ಆತನ ಪತ್ನಿಗೂ ಫೋಟೋ ಕಳುಹಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆ್ಯಪ್ ಏಜೆಂಟರ ನಿರಂತರ ಕಿರುಕುಳದಿಂದ ಮನನೊಂದಿದ್ದ ನರೇಂದ್ರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ಒಂದು ವಾರದ ಅವಧಿಯಲ್ಲಿ ಇದು ಮೂರನೇ ಪ್ರಕರಣವಾಗಿದ್ದು, ಲೋನ್ ಆ್ಯಪ್ (Loan App) ಏಜೆಂಟರ ಕಿರುಕುಳ ತಾಳಲಾರದೆ ಈವರೆಗೆ ಮೂವರು ಮೃತಪಟ್ಟಿದ್ದಾರೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
Instagram Reels Comment ವಿಚಾರವಾಗಿ ಪತ್ನಿಯ ಕತ್ತು ಸೀಳಿ ಕೊಂದ ಪತಿ; ಮೂವರು ಹೆಣ್ಣುಮಕ್ಕಳು ಹೇಳಿದ್ದಿಷ್ಟು
ಗೌರವ-ಘನತೆ ಮಹಿಳೆಯರಿಗೆ ಸೀಮಿತವಲ್ಲ, ಪುರುಷರಿಗೂ ಕೂಡ ಇದೆ: HighCourt