

ದುರ್ಗ್: ಛತ್ತೀಸ್ಗಢದ ವ್ಯಕ್ತಿಯೊಬ್ಬ ತನ್ನ ಪತ್ನಿ ಒಮಾನ್ನಲ್ಲಿ ಕಿಡಿಗೇಡಿಗಳಿಂದ ಬಂಧಿತಳಾಗಿದ್ದಾಳೆ. ಆಕೆಯನ್ನು ಬಿಡುಗಡೆಗೊಳಿಸಲು ಬರೋಬ್ಬರಿ 2ರಿಂದ 3 ಲಕ್ಷ ರೂ. ಬೇಡಿಕೆಯಿಟ್ಟಿದ್ದಾರೆ ಎಂದು ಪೊಲೀಸರ ಮುಂದೆ ಹೇಳಿಕೊಂಡ ವ್ಯಕ್ತಿ, ದಯಮಾಡಿ ಸಹಾಯ ಮಾಡಿ ಎಂದು ದೂರು ದಾಖಲಿಸಿದ ಘಟನೆಯೊಂದು ಛತ್ತೀಸಗಢದಲ್ಲಿ ವರದಿಯಾಗಿದೆ.
ಕೆಲಸದ ನಿಮಿತ್ತ ಓಮನ್ಗೆ ತೆರಳಿದ್ದ ಪತ್ನಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಭಯಭೀತರಾದ ಪತಿ ಜೋಗಿ ಮುಖೇಶ್, ದುರ್ಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾದ ಅಭಿಷೇಕ್ ಝಾ ಬಳಿ ದೂರು ನೀಡಿದ್ದು, ಕೂಡಲೇ ಪತ್ನಿಯನ್ನು ಮರಳಿ ಕರೆತನ್ನಿ ಎಂದು ಸಹಾಯ ಕೋರಿದ್ದಾರೆ.
ಮುಂದಿನ ಕ್ರಮ ಹೇಗೆ ಮಾಡುತ್ತೀರಿ ಎಂದು ಪ್ರಶ್ನಿಸಿದ ಪತಿಗೆ ಪೊಲೀಸರು ನಾವು ಕೇಂದ್ರವನ್ನು ಸಂಪರ್ಕಿಸುತ್ತೇವೆ ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ. "ನನ್ನ ಪತ್ನಿ ದೀಪಿಕಾ ಕಳೆದ ವರ್ಷ ಮಾರ್ಚ್ನಲ್ಲಿ ಅಡುಗೆ ಕೆಲಸ ಮಾಡಲು ಓಮನ್ಗೆ ಹೋಗಿದ್ದರು. ಅಲ್ಲಿ ಖುರ್ಸಿಪರ್ನ ವ್ಯಕ್ತಿಯ ಮೂಲಕ ಹೈದರಾಬಾದ್ನ ಒಬ್ಬ ಏಜೆಂಟ್ ಅಬ್ದುಲ್ಲಾ ಅವರೊಂದಿಗೆ ಸಂಪರ್ಕಕ್ಕೆ ಬಂದರು. ನನ್ನ ಹೆಂಡತಿ ಅಡುಗೆಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದಾಳೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು" ಎಂದರು.
"ಅದಾದ ಬಳಿಕ ಅವಳನ್ನು ಮನೆ ಕೆಲಸಕ್ಕಾಗಿ ಇಟ್ಟುಕೊಂಡ ಅವರು, ಆಕೆಗೆ ನಿರಂತರವಾಗಿ ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ತಿಳಿದ ನಾನು ಕೂಡಲೇ ಉದ್ಯೋಗ ಕೊಟ್ಟ ಮಹಿಳೆಯೊಂದಿಗೆ ಫೋನ್ನಲ್ಲಿ ಮಾತನಾಡಿದೆ. ನನ್ನ ಹೆಂಡತಿಯನ್ನು ವಾಪಸ್ ಕಳುಹಿಸುವಂತೆ ಕೇಳಿದೆ. ಅದಕ್ಕೆ ಆಕೆ ವಾಪಾಸ್ ಕಳುಹಿಸಲು 2-3 ಲಕ್ಷ ರೂ. ಕೊಡುವಂತೆ ಬೇಡಿಕೆಯಿಟ್ಟರು" ಎಂದು ಮುಖೇಶ್ ಹೇಳಿಕೊಂಡಿದ್ದಾರೆ.
"ನಾನು ಪೊಲೀಸರಿಗೆ ದೂರು ನೀಡಿದ್ದೇನೆ. ನನ್ನ ಪತ್ನಿ ಭಾರತಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಪ್ರಧಾನಿ ಅವರಿಗೂ ಸಹ ಮನವಿ ಮಾಡುತ್ತೇನೆ" ಎಂದು ಮುಖೇಶ್ ಹೇಳಿದ್ದಾರೆ. ವಿಡಿಯೋವೊಂದನ್ನು ಹಂಚಿಕೊಂಡ ಅವರು, ಅದರಲ್ಲಿ ತಮ್ಮ ಪತ್ನಿ ಓಮನ್ನಲ್ಲಿ ಸೆರೆಯಾಗಿರುವುದನ್ನು ನೀವು ಕಾಣಬಹುದು ಎಂದು ತಿಳಿಸಿದ್ದಾರೆ.
ವಿಡಿಯೋದಲ್ಲಿ ದೀಪಿಕಾ ಮಾಡಿದ ಮನವಿ ಹೀಗಿದೆ. “ಸರ್, ನನ್ನ ಹೆಸರು ದೀಪಿಕಾ. ನಾನು ಭಿಲಾಯ್ (ದುರ್ಗ) ಸೇರಿದ್ದೇನೆ. ಯಾರೋ ಸುಳ್ಳು ಹೇಳಿ ನನ್ನನ್ನು ಇಲ್ಲಿ ಸಿಕ್ಕಿಹಾಕಿದ್ದಾರೆ. ನನ್ನನ್ನು ಇಲ್ಲಿ ಬಂಧಿಸಲಾಗಿದೆ ಹಾಗೂ ಥಳಿಸಲಾಯಿತು. ನನ್ನ ಮೇಲೆ ಹಲ್ಲೆ ಕೂಡ ಮಾಡಲಾಗಿದೆ. ನಾನು ಮನೆಗೆ ಹೋಗಲು ಅವಕಾಶ ನೀಡುವಂತೆ ಕೇಳಿದಾಗ ಅವರು ಹಣಕ್ಕಾಗಿ ಪೀಡಿಸಿದರು. ನನ್ನಿಂದ 2 ಲಕ್ಷದಿಂದ 3 ಲಕ್ಷ ರೂ. ಕೇಳಿದರು. ಹಣ ಕೊಡದೆ ಇದ್ದರೆ, ನನ್ನನ್ನು ಬೇರೆಯವರಿಗೆ ಮಾರಾಟ ಮಾಡುವುದಾಗಿ ಹೇಳುತ್ತಿದ್ದಾರೆ. ದಯವಿಟ್ಟು ಉಳಿಸಿ ಸರ್, ನನಗೆ ನೋವಾಗಿದೆ, ಅವರು ನನಗೆ ತುಂಬಾ ಹಿಂಸೆ ನೀಡುತ್ತಾರೆ" ಎಂದು ಅಳಲು ತೋಡಿಕೊಂಡಿದ್ದಾರೆ,(ಏಜೆನ್ಸೀಸ್).