

ಮುಂಬೈ: ಒಂದು ಉದ್ಯಮದಲ್ಲಿ ಯಶಸ್ಸು ಹೊಂದಲು ಹರಸಾಹಸ ಪಡಬೇಕಾಗುತ್ತದೆ. ನಿರಂತರ ಪರಿಶ್ರಮ, ಕಠಿಣ ಸವಾಲಗಳನ್ನು ಎದುರಿಸಿದ ನಂತರವೇ ಸಕ್ಸಸ್ ನೋಡಲು ಸಾಧ್ಯ. ಇದು ಎಲ್ಲರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ, ಎಲ್ಲರೂ ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಕೆಲವರು ಪ್ರಾರಂಭದಲ್ಲಿ ತೋರುವ ನಿಲುವು, ನಂತರದಲ್ಲಿ ಬದಲಾಗಿರುತ್ತದೆ. ದೃಢ ಮನಸ್ಸಿನಿಂದ ಮಾಡುವ ಕೆಲಸಗಳು ಎಂದಿಗೂ ಅದ್ಬುತ ಯಶಸ್ಸನ್ನು ಕೊಡುತ್ತದೆ ಎಂಬುದಕ್ಕೆ ಇಲ್ಲೊಬ್ಬ ನಟನ ಬದುಕೇ ಸಾಕ್ಷಿ!
ಇದನ್ನೂ ಓದಿ: ಈ ರಾಶಿಯವರು ಹಣಕಾಸಿನ ಹೂಡಿಕೆ ಮಾಡಬಾರದು: ನಿತ್ಯಭವಿಷ್ಯ
ದೊಡ್ಡ ಕನಸನ್ನು ಹೊತ್ತು ಮನರಂಜನಾ ಉದ್ಯಮದಲ್ಲಿ ತಮ್ಮ ನೆಲೆಯನ್ನು ಕಾಣಲು ಬರುವ ಅದೆಷ್ಟೋ ಹೊಸ ಮುಖಗಳ ಪೈಕಿ ಸ್ಟಾರ್ ಮಕ್ಕಳಿಗೆ ಹೆಚ್ಚು ಅವಕಾಶಗಳು ಲಭ್ಯವಿರುತ್ತದೆ. ಸ್ಟಾರ್ ನಟರ ಮಕ್ಕಳಿಗೆ ಚಿತ್ರರಂಗದಲ್ಲಿ ಬಹುಬೇಗ ಸ್ಥಾನ ಸಿಕ್ಕಿ ಬಿಡುತ್ತದೆ ಹಾಗೂ ಅವರಿಗೆ ಅವಕಾಶಗಳು ಸುಲಭ ಎಂದು ಅನೇಕರು ಭಾವಿಸುತ್ತಾರೆ. ಆದ್ರೆ, ಈ ನಟನ ವಿಷಯದಲ್ಲಿ ಅದು ಸುಳ್ಳು ಎಂಬುದು ಇವರ ಕಷ್ಟದ ಹಾದಿ ತಿಳಿಸಿಕೊಟ್ಟಿದೆ.
ತನ್ನ ತಂದೆ ಒಬ್ಬ ಸ್ಟಾರ್ ನಟ, ದಿಗ್ಗಜ ಆದರೂ ಮೊದ ಮೊದಲು ಚಿತ್ರರಂಗದಲ್ಲಿ ಒಳ್ಳೆಯ ಅವಕಾಶಗಳು ಸಿಗಲಿಲ್ಲ. ಕಾಲೇಜಿಗೆ ಹೋಗುವುದನ್ನು ತ್ಯಜಿಸಿದ ಇವರು, ಬಳಿಕ ಸಿನಿಮಾ ಸೆಟ್‌ಗಳಲ್ಲಿ ಟೀ ಮಾಡುತ್ತ ಅವಕಾಶಗಳನ್ನು ಎದುರುನೋಡುತ್ತಿದ್ದರು. ಹೀಗಿರುವಾಗಲೇ ಸಿಕ್ಕ ಚಿತ್ರಗಳನ್ನು ಮಾಡಿದ ಇವರಿಗೆ ಕಂಡಿದ್ದೆಲ್ಲಾ ಸೋಲು! ಸ್ಟಾರ್ ಹೀರೋ ಮಗನಾದರೂ ಅನುಭವಿಸಿದ್ದು ಮಾತ್ರ ಬ್ಯಾಕ್ ಟು ಬ್ಯಾಕ್ ಫ್ಲಾಪ್‌ಗಳು.
ಇದಾದ ಬಳಿಕವೂ ತಮ್ಮ ವೃತ್ತಿಜೀವನದಲ್ಲಿ ಪುಟಿದೇಳುವ ಅವಕಾಶ ಪಡೆದು ಇಂದು ತಾವು ಕೂಡ ಸ್ಟಾರ್ ನಟರಾಗಿ ಹೊರಹೊಮ್ಮಿದ್ದಾರೆ. ಸತತ ಫ್ಲಾಪ್ ಚಿತ್ರಗಳೊಂದಿಗೆ ತನ್ನ ಕರಿಯರ್ ಪ್ರಾರಂಭಿಸಿದ ಈ ನಟ, ಇಂದು 280 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಈ ಸ್ಟಾರ್ ನಟ ಬೇರಾರೂ ಅಲ್ಲ, ಬಾಲಿವುಡ್ನ ದಿಗ್ಗಜ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್.
29 ಫ್ಲಾಪ್ ಚಿತ್ರಗಳ ನಂತರ ಒಟಿಟಿ ಮೂಲಕ ಸೂಪರ್ ಹಿಟ್ ಆದ ಅಭಿಷೇಕ್ ಬಚ್ಚನ್, ಮತ್ತೊಮ್ಮೆ ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದ್ದಲ್ಲದೇ ಅಪಾರ ಸಿನಿಪ್ರೇಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ತಂದೆ ಸಿನಿಮಾ ಮಾಡುವಾಗ ತಾವು ಅನುಭವಿಸಿದ ಕಷ್ಟದ ಪರಿಸ್ಥಿತಿ ನೆನಪಿಸಿಕೊಂಡ ಅಭಿಷೇಕ್, "ಅಪ್ಪ ಕಂಪನಿಯನ್ನು ಪ್ರಾರಂಭಿಸಿದ್ದರಿಂದ ನಾವು ಸಾಕಷ್ಟು ಆರ್ಥಿಕ ಬಿಕ್ಕಟ್ಟಿನಲ್ಲಿದ್ದೆವು, ಅದರಲ್ಲಿ ಅವರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಯಿತು. ಆಗ ನಾನು ನನ್ನ ತಂದೆಯನ್ನು ಹೆಚ್ಚು ಬೆಂಬಲಿಸಬೇಕು ಎಂದು ನಿರ್ಧರಿಸಿದೆ" ಎಂದರು.
"ಸಿನಿಮಾಗೆ ಬರುವ ಮೊದಲು ಪ್ರೊಡಕ್ಷನ್ ಬಾಯ್ ಆಗಿ, ಸಿನಿಮಾ ಸೆಟ್‌ಗಳಲ್ಲಿ ಕಲಾವಿದರಿಗೆ ಟೀ ತಯಾರಿಸುತ್ತಿದ್ದೆ. ನಂತರ ಸಹಾಯಕ ನಿರ್ದೇಶಕರಾಗಿ ಉದ್ಯಮದಲ್ಲಿ ಕೆಲಸ ಮಾಡಲು ಶುರುಮಾಡಿದೆ" ಎಂದಿದ್ದಾರೆ ಅಭಿಷೇಕ್. ತಮ್ಮ 23 ವರ್ಷಗಳ ವೃತ್ತಿಜೀವನದಲ್ಲಿ 29 ಫ್ಲಾಪ್ ಸಿನಿಮಾಗಳನ್ನು ನೀಡಿದ ಅಭಿಷೇಕ್ ಬಚ್ಚನ್, 'ಹ್ಯಾಪಿ ನ್ಯೂ ಇಯರ್', 'ಧೂಮ್ 2', 'ಧೂಮ್ 3', ಮತ್ತು 'ಹೌಸ್‌ಫುಲ್ 3' ನಂತಹ ಹಿಟ್‌ಗಳನ್ನು ನೀಡಿದ್ದಾರೆ. ಆದರೆ ಅವೆಲ್ಲವೂ ಮಲ್ಟಿ-ಸ್ಟಾರರ್ ಚಿತ್ರಗಳಾಗಿವೆ.
ವರದಿಗಳ ಪ್ರಕಾರ, ಅಭಿಷೇಕ್ ಪ್ರತಿ ತಿಂಗಳು ಸುಮಾರು 2 ಕೋಟಿ ರೂ. ಗಳಿಸುತ್ತಾರೆ ಎಂದು ಹೇಳಲಾಗಿದ್ದು, ಒಂದು ಚಿತ್ರಕ್ಕೆ 10-12 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದರ ಜತೆಗೆ ಪ್ರೊ-ಕಬ್ಬಡಿ ಲೀಗ್ನಲ್ಲಿ 100 ಕೋಟಿ ರೂಪಾಯಿ ಮೌಲ್ಯದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು ಸಹ ಹೊಂದಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).