'ತಲೆದಂಡ' ರಿಲೀಸ್​ಗೆ ರೆಡಿ; ಸಂಚಾರಿ ವಿಜಯ್ ನೆನೆದ ಮಾಲಿವುಡ್​ನ ಸೂಪರ್ ಸ್ಟಾರ್ ನಟ

Published on
'ತಲೆದಂಡ' ಎಂಬ ಕನ್ನಡದ ಸಿನಿಮಾ ದಕ್ಷಿಣ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿದೆ. ನಟ ಸಂಚಾರಿ ವಿಜಯ್ ಅವರು ಕಾಡಿನಲ್ಲಿ ವಾಸಿಸುವ ಮಾನಸಿಕ ಅಸ್ವಸ್ಥ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಸಿನಿಮಾದಲ್ಲಿ ಟಿಂಬರ್ ಮಾಫಿಯಾ ವಿರುದ್ಧ ಹಾಗೂ ಮರಗಳು ಮತ್ತು ಪರಿಸರವನ್ನು ಉಳಿಸಲು ಹೋರಾಡುತ್ತಾರೆ. ''ವಿಜಯ್ ಅವರ ಅಭಿನಯ ನಿಜಕ್ಕೂ ವರ್ಣಿಸಲು ಸಹ ಕಷ್ಟ. ಈ ಸಿನಿಮಾದಲ್ಲಿನ ಅವರ ಪಾತ್ರ ಮತ್ತೊಮ್ಮೆ ಅವರ ಅದ್ಭುತ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ'' ಎಂದಿದ್ದಾರೆ ಚಿತ್ರದ ನಿರ್ದೇಶಕ ಪ್ರವೀಣ್ ಕೃಪಾಕರ್.
ಇನ್ನು, ದಿವಂಗತ ನಟ ಸಂಚಾರಿ ವಿಜಯ್ ಅಭಿನಯದ ಈ 'ತಲೆದಂಡ' ಸಿನಿಮಾ ಇದೇ ಏಪ್ರಿಲ್ 1 ರಂದು ಬಿಡುಗಡೆಯಾಗಲು ಸಿದ್ಧವಾಗುತ್ತಿದೆ. ಹೀಗಾಗಿ, ದಕ್ಷಿಣ ಚಿತ್ರರಂಗದ ಹಾಗೂ ಮಲಯಾಳಂನ ಸ್ಟಾರ್ ನಟ ಮಮ್ಮುಟ್ಟಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ನಟ ಸಂಚಾರಿ ವಿಜಯ್ ಅವರೊಂದಿಗಿನ ಒಂದು ಸಂಭಾಷಣೆಯನ್ನು ನೆನಪಿಸಿಕೊಳ್ಳುವುದರ ಜತೆಗೆ ಮುಂಬರುವ 'ತಲೆದಂಡ' ಸಿನಿಮಾದ ಪೋಸ್ಟರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. 
ಜತೆಗೆ, ತಮ್ಮ ಪೋಸ್ಟರ್​ಗೆ ಕ್ಯಾಪ್ಷನ್ ಕೊಟ್ಟಿರುವ ನಟ ಮಮ್ಮುಟ್ಟಿ ಅವರು, “ನಾನು ಇಲ್ಲಿ ಸಂಚಾರಿ ವಿಜಯ್ ಅವರ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿದ್ದೇನೆ. ವಿಜಯ್ ಇನ್ನಿಲ್ಲ ಎಂದು ನಾನು ನಂಬಲು ಇಂದಿಗೂ ಸಾಧ್ಯವಾಗುತ್ತಿಲ್ಲ. ನಾವು ಹೈದರಾಬಾದ್‌ನಲ್ಲಿ ನಡೆದ ಒಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭೇಟಿಯಾದೆವು. ಮತ್ತು ಅವರು ನನ್ನ ಅಭಿಮಾನಿ ಎಂದು ಅವರು ಹೇಳಿದಾಗ ನಾನು ನಿಜವಾಗಿಯೂ ವಿನಮ್ರನಾಗಿದ್ದೆ. ನಾನು ಅವರ ಮುಂದಿನ ಚಿತ್ರವನ್ನು ನೋಡಬೇಕು ಮತ್ತು ನನ್ನ ಆಲೋಚನೆಗಳನ್ನು ಕೇಳಬೇಕೆಂದು ಅವರು ಬಯಸಿದ್ದರು. ಅದು ವಿಜಯ್ ಅವರು ನನ್ನೊಂದಿಗೆ ಆಡಿದ ಕೊನೆಯ ಮಾತು. ಇನ್ನು, ಅದೇ ಮಾತು ಕೊನೆಯದು ಆಗುತ್ತೆ ಅಂತ ಯಾರಿಗೆ ತಾನೆ ಗೊತ್ತಿತ್ತು. ಇನ್ನು, ಅವರ ಹೊಸ ಚಿತ್ರ "ತಲೆದಂಡ" ವನ್ನು ಎಲ್ಲರೂ ಚಿತ್ರಮಂದಿರಗಳಲ್ಲಿ ನೋಡುವ ಮೂಲಕ ಅವರ ಸ್ಮರಣೆಯನ್ನು ಆಚರಿಸೋಣ'', ಎಂದು ಬರೆದುಕೊಂಡಿದ್ದಾರೆ.
ನ್ಯಾಷನಲ್ ಅವಾರ್ಡ್ ಪಡೆದ ನಟ ಸಂಚಾರಿ ವಿಜಯ್ ಅಭಿನಯದ ತಲೆದಂಡ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡಿದೆ. ಮೈಸೂರು ವಿಶ್ವವಿದ್ಯಾನಿಲಯದ ಚಲನಚಿತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಉಪನ್ಯಾಸಕ ಪ್ರವೀಣ್ ಕೃಪಾಕರ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಹುಶಃ, ಈಗ ಬದುಕಿದ್ದರೆ ನಟ ಸಂಚಾರಿ ವಿಜಯ್ ಅವರಿಗೆ ಈ ಸಿನಿಮಾ ಮೂಲಕ ಮತ್ತೊಂದು ನ್ಯಾಷನಲ್ ಅವಾರ್ಡ್ ಲಭಿಸುತ್ತಿತ್ತು ಎಂದಿದ್ದಾರೆ ಈ ಚಿತ್ರತಂಡ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net